ರಾಜ್ಯದ ಯಾವುದೇ ತಾಲೂಕು ಸಂಘಗಳಲ್ಲಿ ನೋಂದಣಿಯಾಗಿರುವ ಛಾಯಾಚಿತ್ರಗ್ರಾಹಕರು ಆಕಸ್ಮಿಕವಾಗಿ ನಿಧನ ಹೊಂದಿದರೆ, ಅವರ ಕುಟುಂಬದ ಸದಸ್ಯರಿಗೆ ₹1 ಲಕ್ಷ ಆರ್ಥಿಕ ನೆರವು ಒದಗಿಸುವ ಮಹತ್ವಾಕಾಂಕ್ಷಿ ಆಸರೆ ಯೋಜನೆಯನ್ನು ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ ಜಾರಿಗೆ ತಂದಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ರಾಜ್ಯದ ಯಾವುದೇ ತಾಲೂಕು ಸಂಘಗಳಲ್ಲಿ ನೋಂದಣಿಯಾಗಿರುವ ಛಾಯಾಚಿತ್ರಗ್ರಾಹಕರು ಆಕಸ್ಮಿಕವಾಗಿ ನಿಧನ ಹೊಂದಿದರೆ, ಅವರ ಕುಟುಂಬದ ಸದಸ್ಯರಿಗೆ ₹1 ಲಕ್ಷ ಆರ್ಥಿಕ ನೆರವು ಒದಗಿಸುವ ಮಹತ್ವಾಕಾಂಕ್ಷಿ ಆಸರೆ ಯೋಜನೆಯನ್ನು ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ ಜಾರಿಗೆ ತಂದಿದೆ ಎಂದು ರಾಜ್ಯಾಧ್ಯಕ್ಷ ನಾಗೇಶ ಎಚ್.ಎಸ್. ತಿಳಿಸಿದರು.ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಲವು ವರ್ಷಗಳಿಂದ ಛಾಯಾಗ್ರಾಹಕರ ಹಿತರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಘವು, ಇದೀಗ ''''ಆಸರೆ'''' ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಸದಸ್ಯತ್ವ ಪಡೆದ ಛಾಯಾಗ್ರಾಹಕರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಸದ್ಯ ಆರಂಭಿಕ ಹಂತವಾಗಿ ₹1 ಲಕ್ಷ ನೆರವು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪರಿಹಾರ ಮೊತ್ತವನ್ನು ₹10 ಲಕ್ಷದವರೆಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಯೋಜನೆಗೆ ಕೇವಲ ₹110 ಸದಸ್ಯತ್ವ ಶುಲ್ಕ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಪೈಪೋಟಿಯ ಯುಗದಲ್ಲಿ ಛಾಯಾಗ್ರಾಹಕರು ವೃತ್ತಿಬದುಕಿನಲ್ಲಿ ಹಲವು ಸಂಕಷ್ಟಗಳು ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಇದರ ಫಲವಾಗಿ, ಆರಂಭಿಕ ಹಂತದಲ್ಲಿ ಕಾರ್ಮಿಕ ಇಲಾಖೆಯ ಮೂಲಕ ಛಾಯಾಗ್ರಾಹಕರನ್ನು ಗುರುತಿಸಿ, ಅವರಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕಾಗಿ ಇಡೀ ಸಮುದಾಯ ಒಂದಾಗುವುದು ಅತ್ಯಗತ್ಯವಾಗಿದೆ. ರಾಜ್ಯದ ಸುಮಾರು 2.5 ಲಕ್ಷ ಛಾಯಾಗ್ರಾಹಕರನ್ನು ಒಂದೇ ವೇದಿಕೆಯಡಿ ತರುವ ನಿರಂತರ ಪ್ರಯತ್ನ ಸಾಗಿದ್ದು, ಆಸರೆ ಯೋಜನೆಗೆ ಈಗಾಗಲೇ ಸುಮಾರು 10 ಲಕ್ಷ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಛಾಯಾಗ್ರಾಹಕರೂ ಕಡ್ಡಾಯವಾಗಿ ಸಂಘದ ಸದಸ್ಯತ್ವ ಪಡೆಯಬೇಕು. ಆಸಕ್ತರು ಆ. 19ರೊಳಗೆ ನೋಂದಣಿ ಮಾಡಿಕೊಳ್ಳಬಹುದು ಎಂದರು.

ಕೆಪಿಎ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿನಾರಾಯಣ ಭಟ್, ಜಿಲ್ಲಾಧ್ಯಕ್ಷ ಸುರೇಶ್ ಹೊನ್ನಾವರ, ಜಿಲ್ಲಾ ಉಪಾಧ್ಯಕ್ಷ ಅನಂತ ಪೈ, ಸಂತಾನ್ ಫರ್ನಾಂಡಿಸ್, ಲಕ್ಷ್ಮೀಶ ಭಂಡಾರಿ, ವಿನಾಯಕ ನಾಯ್ಕ, ಪ್ರಶಾಂತ ನಾಯ್ಕ ಹಾಗೂ ಕಾರವಾರ ತಾಲೂಕು ಸದಸ್ಯರಾದ ಸೂರಜ್ ಜೋಗಳೇಕರ್, ರವಿ ನಾಯ್ಕ, ಸಾಯಿನಾಥ ನಾಯ್ಕ, ಜಯಪ್ರಕಾಶ್ ಗೋಸಾವಿ ಇದ್ದರು.