ಸಾರಾಂಶ
ಮನುಷ್ಯ ಒತ್ತಡದ ಬದುಕಿನಲ್ಲಿ ಶಾಂತಿ, ನೆಮ್ಮದಿ ಪಡೆಯಲು ಅಧ್ಯಾತ್ಮ ಮತ್ತು ಧ್ಯಾನ ಅತ್ಯವಶ್ಯಕವಾಗಿದೆ ಎಂದ ಅವರು, ಸಮಾಜದಲ್ಲಿ ಇಂತಹ ಮೌಲ್ಯ ಜಾಗೃತಿಯ ಕಾರ್ಯ ನಡೆಯಬೇಕಿದೆ.
ಕೊಪ್ಪಳ:
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಭಾರತ ಹಾಗೂ ನೇಪಾಳದಲ್ಲಿ ಬೃಹತ್ ರಕ್ತದಾನ ಅಭಿಯಾನದ ಮೂಲಕ ಒಂದು ಲಕ್ಷ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹಾಕಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ನಗರದ ಬ್ರಹ್ಮಕುಮಾರಿ ವಿವಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಬಂಧುತ್ವ ದಿನಾಚರಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಆರೋಗ್ಯಕ್ಕಾಗಿ ಇಂಥ ಮಹಾನ ಗುರಿ ಹಾಕಿಕೊಂಡಿರುವುದು ಬಹುದೊಡ್ಡ ಕಾರ್ಯವಾಗಿದೆ. ಈ ಮೂಲಕ ಗಿನ್ನಿಸ್ ವಿಶ್ವದಾಖಲೆ ಮಾಡುವ ಗುರಿ ಹೊಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಮನುಷ್ಯ ಒತ್ತಡದ ಬದುಕಿನಲ್ಲಿ ಶಾಂತಿ, ನೆಮ್ಮದಿ ಪಡೆಯಲು ಅಧ್ಯಾತ್ಮ ಮತ್ತು ಧ್ಯಾನ ಅತ್ಯವಶ್ಯಕವಾಗಿದೆ ಎಂದ ಅವರು, ಸಮಾಜದಲ್ಲಿ ಇಂತಹ ಮೌಲ್ಯ ಜಾಗೃತಿಯ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಉಪಸಭಾಪತಿ ಡಾ. ಶ್ರೀನಿವಾಸ್ ಹ್ಯಾಟಿ ಮಾತನಾಡಿ, ಪ್ರಸ್ತುತ ಸಮಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ರಕ್ತದಾನದ ಮಹತ್ವ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಬ್ರಹ್ಮಕುಮಾರಿ ಯೋಗಿನಿ ಅಕ್ಕ, ರಕ್ತಕ್ಕೆ ಪರ್ಯಾಯವಿಲ್ಲ. ಶರೀರದ ಆರೋಗ್ಯಕ್ಕೆ ರಕ್ತ ಮುಖ್ಯ. ಆತ್ಮದ ಆರೋಗ್ಯಕ್ಕೆ ಅಧ್ಯಾತ್ಮ ಮುಖ್ಯವಾಗಿದೆ ಎಂದರು.
ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿ ದಾದಿ ಪ್ರಕಾಶ್ಮಣಿಜಿ ಅವರ 18ನೇ ಪುಣ್ಯತಿಥಿಯನ್ನು ವಿಶ್ವಬಂಧುತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಬೃಹತ್ ರಕ್ತದಾನ ಅಭಿಯಾನವನ್ನು ಭಾರತ ಮತ್ತು ನೇಪಾಳದ 1500ಕ್ಕೂ ಹೆಚ್ಚು ಬ್ರಹ್ಮಕುಮಾರಿ ಸೇವಾ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.ಈ ವೇಳೆ ರಕ್ತದಾನಿಗಳಿಗೆ ಪ್ರಮಾಣ ಪತ್ರ ಮತ್ತು ಈಶ್ವರೀಯ ಉಡುಗೊರೆ ಹಾಗೂ ಪ್ರಸಾದ ನೀಡಲಾಯಿತು. ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ, ಪ್ರೊ. ಬಾಚಲಾಪುರ್, ಬ್ರಹ್ಮಕುಮಾರಿ ಸ್ನೇಹಕ್ಕ ಉಪಸ್ಥಿತರಿದ್ದರು.