ಸಾರಾಂಶ
ಸಜ್ಜನ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರಕ್ಕೆ 1 ಟನ್ (ಒಂದು ಸಾವಿರ ಕೆ.ಜಿ.) ಮೈಸೂರು ಶ್ರೀಗಂಧ, 50 ಕೆಜಿ ತುಪ್ಪವನ್ನು ಬಳಕೆ ಮಾಡಲಾಯಿತು. ಮೈಸೂರು ಶ್ರೀಗಂಧ ಕೋಠಿಯಿಂದ ವಾಹನವೊಂದರಲ್ಲಿ ಚೀಲಗಳಲ್ಲಿ ತುಂಬಿಕೊಂಡು ಶುದ್ಧ ಶ್ರೀಗಂಧದ ತುಂಡುಗಳನ್ನು ತರಲಾಗಿತ್ತು
ಮಂಡ್ಯ : ಸಜ್ಜನ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರಕ್ಕೆ 1 ಟನ್ (ಒಂದು ಸಾವಿರ ಕೆ.ಜಿ.) ಮೈಸೂರು ಶ್ರೀಗಂಧ, 50 ಕೆಜಿ ತುಪ್ಪವನ್ನು ಬಳಕೆ ಮಾಡಲಾಯಿತು. ಮೈಸೂರು ಶ್ರೀಗಂಧ ಕೋಠಿಯಿಂದ ವಾಹನವೊಂದರಲ್ಲಿ ಚೀಲಗಳಲ್ಲಿ ತುಂಬಿಕೊಂಡು ಶುದ್ಧ ಶ್ರೀಗಂಧದ ತುಂಡುಗಳನ್ನು ತರಲಾಗಿತ್ತು. ವಾಹನಕ್ಕೆ ಬಿಗಿ ಪೊಲೀಸ್ ಕಾವಲು ಹಾಕಲಾಗಿತ್ತು.
ದೊಡ್ಡ ದೊಡ್ಡ ಮರದ ತುಂಡುಗಳನ್ನು ಕೆಳಗಿಟ್ಟ ಬಳಿಕ ಮಧ್ಯಭಾಗದಲ್ಲೆಲ್ಲಾ ಸಂಪೂರ್ಣವಾಗಿ ಶ್ರೀಗಂಧದ ಕಟ್ಟಿಗೆಗಳನ್ನು ಸಮಾನಾಂತರವಾಗಿ ಜೋಡಿಸಲಾಗಿತ್ತು. ಅದರ ಮೇಲೆ ಬಾಳೆ ಎಲೆ ಹಾಸಿ ತುಪ್ಪ ಸುರಿಯಲಾಯಿತು. ನಂತರ ಕೃಷ್ಣ ಅವರ ಪಾರ್ಥಿವ ಶರೀರ ಮೇಲಿರಿಸಿ ದಪ್ಪನೆಯ ಶ್ರೀಗಂಧದ ತುಂಡುಗಳಿಂದ ಶರೀರವನ್ನು ಮುಚ್ಚಲಾಯಿತು. ನಂತರ ಶ್ರೀಗಂಧದ ತುಂಡುಗಳ ಮೇಲೆ ಹಾಗೂ ಸುತ್ತ ಹಾಕಿದ್ದ ಮರಗಳ ಮೇಲೂ ನಂದಿನಿ ತುಪ್ಪವನ್ನು ಸುರಿದು ಅಗ್ನಿಸ್ಪರ್ಶ ಮಾಡಲಾಯಿತು.
ಶಾಂತಿಯುತವಾಗಿ ನಡೆದ ಅಂತ್ಯಸಂಸ್ಕಾರ
ಕನ್ನಡಪ್ರಭ ವಾರ್ತೆ, ಮಂಡ್ಯಮದ್ದೂರಿನ ಸೋಮನಹಳ್ಳಿಯ ಕಾಫಿ ಡೇ ಬಳಿಯ ಖಾಲಿ ಜಾಗದಲ್ಲಿ ಬುಧವಾರ ನಡೆದ ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರ ಶಾಂತಿಯುತವಾಗಿ ನಡೆಯಿತು. ಯಾವುದೇ ತಳ್ಳಾಟ-ನೂಕಾಟ, ಗೊಂದಲ-ಗದ್ದಲಗಳಿಗೆ ಅವಕಾಶವೇ ಇರದ ರೀತಿಯಲ್ಲಿ ಅಂತ್ಯಕ್ರಿಯೆಯ ವಿಧಿ-ವಿಧಾನಗಳು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿದವು.
ಜನಜಂಗುಳಿ ನಿಯಂತ್ರಿಸುವ ಸಲುವಾಗಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬರುವ ಜನರು ಬ್ಯಾರಿಕೇಡ್ ಮೂಲಕ ಆಗಮಿಸಿ ಅದರ ಮೂಲಕವೇ ಹೊರಹೋಗುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಗಣ್ಯರು ಅಂತ್ಯಸಂಸ್ಕಾರ ನಡೆಯುವ ಜಾಗಕ್ಕೆ ಬರುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಜನರು ವಾಹನಗಳಲ್ಲಿ ಬಂದು ಇಳಿಯುವುದಕ್ಕೆ ಮತ್ತು ನಿರ್ಗಮಿಸಲು ಅನುಕೂಲವಾಗುವಂತೆ ಪಕ್ಕದಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.ಅಂತ್ಯಕ್ರಿಯೆಯ ವಿಧಿ-ವಿಧಾನಗಳನ್ನು ವೀಕ್ಷಿಸಲು ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿ ಪ್ರದರ್ಶಿಸಲಾಗುತ್ತಿತ್ತು. ಜನರೂ ಕೂಡ ಅಷ್ಟೇ ಸಂಯಮದಿಂದ ದೂರದಿಂದಲೇ ಅಂತ್ಯಕ್ರಿಯೆ ಕಾರ್ಯಕ್ರಮವನ್ನು ವೀಕ್ಷಿಸಿ ಅಲ್ಲಿಂದಲೇ ಕೃಷ್ಣ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಕೃಷ್ಣ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬದವರು ಅಂತ್ಯಕ್ರಿಯೆಯ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಯಾರೂ ಅಡಚಣೆ ಉಂಟುಮಾಡದಂತೆ ಸೂಕ್ತ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಚಿವರು, ಸ್ಥಳೀಯ ಶಾಸಕರೆಲ್ಲರೂ ಅಂತ್ಯಕ್ರಿಯೆ ಶಾಂತಿಯುತವಾಗಿ ನಡೆಯುವುದಕ್ಕೆ ಸಹಕರಿಸಿದರು.ಭದ್ರತೆಗೆ 3000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಕನ್ನಡಪ್ರಭ ವಾರ್ತೆ, ಮಂಡ್ಯಎಸ್.ಎಂ ಕೃಷ್ಣರ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ 3 ಸಾವಿರಕ್ಕು ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮೂವರು ಪೊಲೀಸ್ ವರಿಷ್ಠಾಧಿಕಾರಿಗಳು, ಮೂವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 10 ಮಂದಿ ಡಿವೈಎಸ್ಪಿ, 30 ಸಿಪಿಐ, 50 ಪಿಐಗಳು ಭದ್ರತೆ ಮೇಲುಸ್ತುವಾರಿ ವಹಿಸಿದ್ದರು. ಭದ್ರತೆಗಾಗಿ 10 ಕೆಎಸ್‌ಆರ್‌ಪಿ ತುಕುಡಿ, 6 ಡಿಆರ್ ತುಕಡಿ, 200 ಗೃಹರಕ್ಷಕ ಸಿಬ್ಬಂದಿ ಸೇರಿದಂತೆ ಒಂದು ಸಾವಿರ ಪೊಲೀಸ್ ಸಿಬ್ಬಂದಿ ಭದ್ರತೆಗೆ ಬಳಸಿಕೊಳ್ಳಲಾಗಿತ್ತು.
ದರ್ಶನಕ್ಕೆ ಕಾದು ಸುಸ್ತಾದ ಅಭಿಮಾನಿಗಳುಕನ್ನಡಪ್ರಭ ವಾರ್ತೆ, ಮಂಡ್ಯಸೋಮನಹಳ್ಳಿಯಲ್ಲಿ ಎಸ್.ಎಂ.ಕೃಷ್ಣರ ಪಾರ್ಥಿವ ಶರೀರದ ದರ್ಶನಕ್ಕೆ ಕಾದು ಅಭಿಮಾನಿಗಳು, ಸಾರ್ವಜನಿಕರು ಸುಸ್ತಾದರು. ಬೆಳಗ್ಗೆಯಿಂದಲೇ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಲಾಗಿತ್ತು. ಆದರೆ, ಎಸ್.ಎಂ.ಕೃಷ್ಣರ ಪಾರ್ಥಿವ ಶರೀರ ಮಧ್ಯಾಹ್ನ ಎರಡೂವರೆ ಗಂಟೆಗೆ ಸೋಮನಹಳ್ಳಿಗೆ ಆಗಮಿಸಿತು. ಮುಂಜಾನೆಯಿಂದಲೇ ಕಾದು ಕುಳಿತಿದ್ದ ಜನರು ಊಟ, ನೀರಿನ ವ್ಯವಸ್ಥೆ ಇಲ್ಲದೆ ಪರದಾಡಿದರು. ಬಹುತೇಕರು ತಮ್ಮ ಊರಿಗೆ ವಾಪಸ್ಸಾದರು. ಮತ್ತೆ ಕೆಲವರು ಎಸ್.ಎಂ. ಕೃಷ್ಣ ಅವರ ಪಾರ್ಥಿವ ಶರೀರ ಹೊತ್ತ ವಾಹನ ಮೆರವಣಿಗೆಯಲ್ಲಿ ಆಗಮಿಸಿದ್ದನ್ನು ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಹಾಕಿದ್ದ ದೊಡ್ಡ ಪರದೆಗಳಲ್ಲಿ ವೀಕ್ಷಿಸುತ್ತಾ ಕುಳಿತಿದ್ದರು. ಮುಂಜಾಗ್ರತಾ ಕ್ರಮವಾಗಿ ಅಂತ್ಯಕ್ರಿಯೆ ನಡೆಯುವ ಸ್ಥಳದ ನಾಲ್ಕು ದಿಕ್ಕಿನಲ್ಲಿ ಸಿಸಿ ಟಿವಿ ಅಳವಡಿಸಲಾಗಿತ್ತು.