ಸಾರಾಂಶ
ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ಹೊಸಪೇಟೆಯಲ್ಲಿ ಮೇ 20ರಂದು ನಡೆಯುವ ಸಾಧನಾ ಸಮರ್ಪಣಾ ಸಮಾವೇಶದಲ್ಲಿ ಜಿಲ್ಲೆಯ 7 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ಸಿಗಲಿದೆ. ಜಿಲ್ಲೆಯಿಂದ 140 ಬಸ್‌ಗಳು ತೆರಳಲಿದ್ದು, 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಕಂದಾಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಮೂಲ ಸೌಕರ್ಯಗಳಿಂದ ವಂಚಿತರಾದ ಹಾಡಿ, ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಿದ್ದು, ಸುಮಾರು 1,11,111 ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯ ನಡೆಯಲಿದೆ. ಇದರಲ್ಲಿ ಹಾವೇರಿ ಜಿಲ್ಲೆಯಿಂದಲೂ 7000 ಜನ ಫಲಾನುಭವಿಗಳು ಅರ್ಹರಿದ್ದಾರೆ. ಹಾವೇರಿ ತಾಲೂಕು 1338, ಹಾನಗಲ್ಲ 990, ಹಿರೇಕೆರೂರು 900, ಬ್ಯಾಡಗಿ 1314, ರಾಣಿಬೆನ್ನೂರು 301, ಶಿಗ್ಗಾಂವಿ 430 ಹಾಗೂ ಸವಣೂರಿನ 380 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಇದೇ ವೇಳೆ ವಿತರಣೆ ಮಾಡಲಾಗುವುದು ಎಂದರು.ಪೋಡಿ ಮುಕ್ತ ಅಭಿಯಾನಕ್ಕೆ ಕಂದಾಯ ಇಲಾಖೆ ಕೂಡ ಸನ್ನದ್ಧವಾಗಿದ್ದು, ಕಂದಾಯ ಇಲಾಖೆಯ ಎಲ್ಲ ದಾಖಲಾತಿಗಳನ್ನು ಡಿಜಿಟಲೀಕರಣಕ್ಕೆ ಮುಂದಾಗಿದ್ದೇವೆ. ರೈತರಿಗೆ ಪೋಡಿ ಮಾಡಿಸಲು ಎದುರಾಗುವ ತೊಂದರೆಗಳನ್ನು ದೂರ ಮಾಡಲು ಕಂದಾಯ ಸಚಿವರು ಮುಂದಾಗಿದ್ದಾರೆ. ಈ ಸಮಾವೇಶದಲ್ಲಿ ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ರಾಜ್ಯದ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ. ಸಂಜಯ ಡಾಂಗೆ ಮಾತನಾಡಿ, ನಮ್ಮ ಸರ್ಕಾರದ ಸಾಧನಾ ಸಮರ್ಪಣಾ ಸಮಾವೇಶ ಹೊಸಪೇಟೆಯಲ್ಲಿ ಮೇ 20ರಂದು ಬೆಳಗ್ಗೆ 11ಕ್ಕೆ ಆರಂಭಗೊಳ್ಳಲಿದೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿಗಳ ಅನುಷ್ಠಾನವೇ ನಿಜವಾದ ಅಚ್ಚೆ ದಿನ. ನಮ್ಮ ಸರ್ಕಾರ ಸುಭದ್ರವಾಗಿದೆ, ಎಲ್ಲ ವರ್ಗದ ಅನುಕೂಲಕ್ಕಾಗಿ ಈ ಗ್ಯಾರಂಟಿ ನೆರವಾಗಿವೆ. ಅಭಿವೃದ್ಧಿ ಪಥದತ್ತ ಸಾಗುವ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಇಟ್ಟಿದೇವೆ ಎಂದರು.ನಮ್ಮ ಸರ್ಕಾರದ ಬಗ್ಗೆ ಬಿಜೆಪಿ ನಾಯಕರು ಹಗುರವಾಗಿ ಮಾತನಾಡುತ್ತಿದ್ದಾರೆ. ಛಲವಾದಿ ನಾರಾಯಣ ಸ್ವಾಮಿ ರೈಲ್ವೆ ಮಂಡಳಿಗೆ ಹೇಗೆ ಬಂದಿರಿ ಎಂಬುದು ಗೊತ್ತಿದೆ. ನಮ್ಮ ನಾಯಕರಾದ ಖರ್ಗೆ ಮತ್ತಿತರರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದೀರಿ. ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಜಗದೀಶ ಶೆಟ್ಟರ ನೆಲೆ ಕಳೆದುಕೊಂಡಾಗ ಸ್ಥಾನಮಾನ ನೀಡಿದ್ದು ಕಾಂಗ್ರೆಸ್, ಅದರ ಬಗ್ಗೆ ನಿಮಗೆ ಋಣ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರ ಮೆಹರವಾಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗೌಜಿಗೌಡ ಇದ್ದರು.Haveri, Congressಹಾವೇರಿ ಸುದ್ದಿ, ಕಾಂಗ್ರೆಸ್, ಸಾಧನಾ ಸಮಾವೇಶ, Haveri News, Congress, Sadhana Conferenceರಾಜ್ಯ ಸರ್ಕಾರದ ಕಂದಾಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಮೂಲ ಸೌಕರ್ಯಗಳಿಂದ ವಂಚಿತರಾದ ಹಾಡಿ, ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಿದ್ದು, ಸುಮಾರು 1,11,111 ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯ ನಡೆಯಲಿದೆ.