ಕೊಬ್ಬರಿ ಖರೀದಿಗೆ 10 ಹೆಚ್ಚುವರಿ ಕೇಂದ್ರ: ಜಿಲ್ಲಾಧಿಕಾರಿ ಶುಭಾ ಕಲ್ಯಾಣ್

| Published : Mar 05 2024, 01:34 AM IST

ಸಾರಾಂಶ

ಜಿಲ್ಲೆಯಲ್ಲಿ 23 ಕೇಂದ್ರಗಳನ್ನು ತೆರೆಯುವ ಬಗ್ಗೆ ಫೆಬ್ರವರಿ 21ರಂದು ಜರುಗಿದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಕೊಬ್ಬರಿ ಖರೀದಿಯಲ್ಲಿ ರೈತರಿಗೆ ಯಾವುದೇ ಸಮಸ್ಯೆ ಉಂಟಾಗಬಾರ ದೆಂಬ ದೃಷ್ಟಿಯಿಂದ ಹೆಚ್ಚುವರಿಯಾಗಿ 10 ಖರೀದಿ ಕೇಂದ್ರಗಳನ್ನು ತೆರೆಯುವ ತೀರ್ಮಾನ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿಸಲು ಹೆಚ್ಚುವರಿ ಯಾಗಿ 10 ಕೇಂದ್ರಗಳನ್ನು ತೆರೆಯಬೇಕೆಂದು ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಲಾ ಗಿದೆ ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.

ರಾಜ್ಯ ಕೃಷಿ ಮಾರಾಟ ಮಂಡಳಿ, ಎಪಿಎಂಸಿ, ಕೃಷಿ, ತೋಟಗಾರಿಕೆ, ಪೊಲೀಸ್, ನ್ಯಾಫೆಡ್, ಸಹಕಾರ ಮಾರಾಟ ಮಂಡಳಿ, ಕೃಷಿ ಮಾರಾಟ ಇಲಾಖೆ ಸೇರಿದಂತೆ ಮತ್ತಿತರ ಇಲಾಖಾಧಿಕಾರಿಗಳೊಂದಿಗೆ ಶನಿವಾರ ಜರುಗಿದ ಕಾರ್ಯ ಪಡೆ(ಟಾಸ್ಕ್ ಫೋರ್ಸ್) ಸಭೆಯಲ್ಲಿ ಹೆಚ್ಚುವರಿ ಕೇಂದ್ರಗಳನ್ನು ತೆರೆಯುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.

ಕೊಬ್ಬರಿ ಖರೀದಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 23 ಕೇಂದ್ರಗಳನ್ನು ತೆರೆಯುವ ಬಗ್ಗೆ ಫೆಬ್ರವರಿ 21ರಂದು ಜರುಗಿದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಕೊಬ್ಬರಿ ಖರೀದಿಯಲ್ಲಿ ರೈತರಿಗೆ ಯಾವುದೇ ಸಮಸ್ಯೆ ಉಂಟಾಗಬಾರ ದೆಂಬ ದೃಷ್ಟಿಯಿಂದ ಹೆಚ್ಚುವರಿಯಾಗಿ 10 ಖರೀದಿ ಕೇಂದ್ರಗಳನ್ನು ತೆರೆಯುವ ತೀರ್ಮಾನ ಕೈಗೊಳ್ಳಲಾಗಿದೆ.

ಕೊಬ್ಬರಿ ಖರೀದಿಗಾಗಿ ಜಿಲ್ಲೆಯ ತುಮಕೂರು ತಾಲೂಕಿನಲ್ಲಿ 1, ತಿಪಟೂರಿನಲ್ಲಿ 11, ತುರುವೇಕೆರೆಯಲ್ಲಿ 10, ಗುಬ್ಬಿ ತಾಲೂಕಿನಲ್ಲಿ 4, ಕುಣಿಗಲ್ ಹಾಗೂ ಶಿರಾದಲ್ಲಿ ತಲಾ 1, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 5 ಸೇರಿದಂತೆ ಒಟ್ಟು 33 ಕೇಂದ್ರಗಳನ್ನು ತೆರೆಯಲು ನಿರ್ದೇಶನ ನೀಡಲಾಗಿದೆ. ಎಲ್ಲಾ ಖರೀದಿ ಕೇಂದ್ರಗಳಲ್ಲಿ ರಾಜ್ಯ ಕೃಷಿ ಮಾರಾಟ ಮಂಡಳಿಯ ಒಬ್ಬರು ಸಿಬ್ಬಂದಿ ಜೊತೆಗೆ ಗ್ರೇಡರ್ ಹಾಗೂ ನ್ಯಾಫೆಡ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಲಾಗಿದೆ ನೀಡಲಾಗಿದೆ. ಮಾ.4ರಿಂದಲೇ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಖರೀದಿ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ಖರೀದಿ ಪ್ರಕ್ರಿಯೆ ನಿಲ್ಲಿಸಬಾರದು. ಅಗತ್ಯಕ್ಕೆ ತಕ್ಕಂತೆ ಪ್ರತಿ ದಿನ ಟೋಕನ್ ನೀಡಿ ರೈತರಿಂದ ಕೊಬ್ಬರಿ ಖರೀದಿ ಮಾಡಬೇಕು. ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಅಳವಡಿಸಬೇಕು. ರೈತರಿಗೆ ಅನ್ಯಾಯವಾಗದಂತೆ ಹಾಗೂ ಹಮಾಲರಿಂದ ಯಾವುದೇ ದೂರುಗಳು ಬಾರದಂತೆ ಕ್ರಮವಹಿಸಬೇಕು. ಖರೀದಿ ಕೇಂದ್ರಗಳಲ್ಲಿ ಖರೀದಿಸಿದ ಕೊಬ್ಬರಿಯನ್ನು ಕೇಂದ್ರ ಹಾಗೂ ರಾಜ್ಯ ಉಗ್ರಾಣಗಳಲ್ಲಿ ಸಂಗ್ರಹಣೆ ಮಾಡಬೇಕು ಎಂದು ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಖರೀದಿ ಕೇಂದ್ರಕ್ಕೆ ವಿದ್ಯುನ್ಮಾನ ತೂಕದ ಯಂತ್ರ, ಮೇಜು ಮತ್ತು ಖುರ್ಚಿಗಳನ್ನು ಹಾಗೂ ಖರೀದಿ ಕೇಂದ್ರದ ಸಿಬ್ಬಂದಿ ವಾಸ್ತವ್ಯಕ್ಕೆ ರೈತಭವನದಲ್ಲಿ ಉಚಿತ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಎಪಿಎಂಸಿ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.

ಸರ್ಕಾರದ ಆದೇಶದಂತೆ 45 ದಿನಗಳವರೆಗೆ ನೋಂದಣಿ ಜೊತೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುವುದು. ಖರೀದಿ ಪ್ರಕ್ರಿಯೆಯಲ್ಲಿ ಫ್ರೂಟ್ಸ್ ದತ್ತಾಂಶದಲ್ಲಿ ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ರೈತರು ಆಧಾರ್ ಕಾರ್ಡ ಸಲ್ಲಿಸಬೇಕು. ರೈತ ರಿಂದ ನೀಡಲ್ಪಡುವ ಓಟಿಪಿಯನ್ನು ಮೂಲ ಆಧಾರ್ ಸಂಖ್ಯೆಯೊಂದಿಗೆ ನೋಂದಣಿ ಮಾಡಲಾಗುವುದು. ನಿಗದಿಪಡಿಸಿದ ದಿನಾಂಕದಂದು ಎಫ್‌ಎಕ್ಯೂ ಗುಣಮಟ್ಟದ ಕೊಬ್ಬರಿಯನ್ನು ಮಾರಾಟಕ್ಕೆ ತರಬೇಕೆಂದು ರೈತರಲ್ಲಿ ಮನವಿ ಮಾಡಿದ್ದಾರೆ.

ತುಮಕೂರಿನ 2 ಶಿರಾ, ತುರುವೇಕೆರೆ, ತಿಪಟೂರು, ಕುಣಿಗಲ್ ತಾಲೂಕಿನಲ್ಲಿ ತಲಾ 1ರಂತೆ ಒಟ್ಟು ೬ ರಾಜ್ಯ ಉಗ್ರಾಣ ನಿಗಮ ಸೇರಿದಂತೆ ಪ್ರಸ್ತುತ ಖಾಲಿಯಿರುವ ಹಾಗೂ ಖಾಲಿಯಾಗಬಹುದಾದ ಗೋದಾಮುಗಳನ್ನೂ ಸಹ ಬೆಂಬಲ ಬೆಲೆ ಕೊಬ್ಬರಿ ದಾಸ್ತಾನಿಗೆ ಕಾಯ್ದಿರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕೇಂದ್ರ ಸರ್ಕಾರದಿಂದ ಒಟ್ಟು 69,250 ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಮಾಡಲು ಮಂಜೂರು ಮಾಡಲಾಗಿದೆ. ಇದರಿಂದ ಎಲ್ಲ ಜಿಲ್ಲೆ/ತಾಲೂಕುಗಳಿಗೆ ಅವುಗಳ ಉತ್ಪಾದನೆ ಮತ್ತು ಬೆಳೆ ಪ್ರದೇಶಗಳಿಗನುಸಾರವಾಗಿ ಹಂಚಿಕೆಯಾಗದೇ ಕೇವಲ ಒಂದೆರಡು ಜಿಲ್ಲೆಗಳಿಗೆ ಮಾತ್ರ ಸಿಂಹಪಾಲು ದೊರೆಯುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ಉಂಡೆ ಕೊಬ್ಬರಿ ಉತ್ಪಾದನೆ, ಕಳೆದ ವರ್ಷ ಖರೀದಿಸಲಾದ ಜಿಲ್ಲಾವಾರು ಪ್ರಮಾಣ ಹಾಗೂ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಗರಿಷ್ಠ ಪ್ರಮಾಣ ಪರಿಗಣಿಸಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯ ರೈತರಿಗೆ ಅನ್ಯಾಯವಾಗಬಾರದೆಂದು ಸರ್ಕಾರವು ಜಿಲ್ಲೆಯ ಕೊಬ್ಬರಿ ಖರೀದಿ ಪ್ರಮಾಣವನ್ನು 3,50,000 ಕ್ವಿಂಟಾಲ್‌ಗೆ ನಿಗದಿಪಡಿಸಿ ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ಕ್ವಿಂಟಾಲ್‌ಗೆ 13,500 ಬೆಲೆ ನಿಗದಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ (ಫೇರ್ ಆವರೇಜ್ ಕ್ವಾಲಿಟಿ) ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಯನ್ನು ಪ್ರತಿ ಕ್ವಿಂಟಾಲ್‌ಗೆ ಕೇಂದ್ರ ಸರ್ಕಾರದ 12,000 ರು. ಹಾಗೂ ರಾಜ್ಯ ಸರ್ಕಾರದ 1,500 ರು. ಸೇರಿ ಒಟ್ಟು 13,500 ರು. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಪರವಾಗಿ ನ್ಯಾಫೆಡ್ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ಪರವಾಗಿ ತುಮಕೂರು ಜಿಲ್ಲೆಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಸಂಸ್ಥೆಯನ್ನಾಗಿ ನೇಮಿಸಲಾಗಿದೆ. ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿ

ರೈತರಿಂದ ಪ್ರತಿ ಎಕರೆಗೆ 6 ಕ್ವಿಂಟಾಲ್ ಹಾಗೂ ಗರಿಷ್ಠ 15 ಕ್ವಿಂಟಾಲ್ ಕೊಬ್ಬರಿಯನ್ನು ಖರೀದಿ ಮಾಡಲಾಗುವುದು. ನೋಂದಣಿ ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ ಸಾಧ್ಯವಾಗದಿದ್ದಾಗ ರೈತರ ಕಣ್ಣಿನ ಸ್ಕ್ಯಾನ್ ಮೂಲಕ ನೋಂದಣಿ ಮಾಡಿಕೊಳ್ಳಲಾಗುವುದು. ನೋಂದಣಿ ಸಂದರ್ಭದಲ್ಲಿ ಒಂದು ಉಪಕರಣಕ್ಕೆ ಒಂದೇ ಲಾಗಿನ್ ಐ.ಡಿ. ಪಾಸ್‌ವರ್ಡ್ ನೀಡಲು, ನೋಂದಣಿಯಲ್ಲಿ ಅವ್ಯವಹಾರ ನಡೆಯದಂತೆ ತಡೆಯಲು ಹೆಚ್ಚಿನ ಲಾಗಿನ್ ಐ.ಡಿ. ಮತ್ತು ಪಾಸ್‌ವರ್ಡ್ಗಳನ್ನು ಒಂದೇ ಉಪಕರಣ ಅಳವಡಿಸದಂತೆ ಕ್ರಮವಹಿಸಲು ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಸಿದ್ದಾರೆ.