ಸಾರಾಂಶ
ಗುಂಡಿ ಮುಚ್ಚುವುದು, ಚರಂಡಿ ನಿರ್ಮಾಣ, ಜಂಗಲ್ ಕ್ಲಿಯರ್
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಗ್ರಾಮೀಣ ಭಾಗದಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ₹10 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.₹10 ಕೋಟಿ ಅನುದಾನ ಬಂದ ತಕ್ಷಣ ಗ್ರಾಮೀಣ ರಸ್ತೆಗಳನ್ನು ಗುಂಡಿ ಮುಚ್ಚುವುದು, ಚರಂಡಿ ನಿರ್ಮಾಣ ಹಾಗೂ ಜಂಗಲ್ ಕ್ಲಿಯರ್ ಮಾಡುವ ಕೆಲಸ ಮಾಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು. ತೀರಾ ಹದಗೆಟ್ಟಿದ್ದಲ್ಲಿ ಆ ರಸ್ತೆಯನ್ನು ಮರು ಡಾಂಬರೀಕರಣ ಮಾಡಲಾಗುವುದು. ಪಿಡಬ್ಲ್ಯೂಡಿ ರಸ್ತೆ ಎಲ್ಲಿ ಹದಗೆಟ್ಟಿದೆ ಅಲ್ಲಿಯೂ ಮರು ಡಾಂಬರೀಕರಣ ಮಾಡಲಾಗುವುದು. ಬಾಳೆಹೊನ್ನೂರು, ಮಾಗುಂಡಿ ರಸ್ತೆ ಹಾಳಾಗಿದ್ದು, ಅದನ್ನು ₹20 ಕೋಟಿ ಅನುದಾನದಲ್ಲಿ ಮರು ಡಾಂಬರೀಕರಣ ಮಾಡಲಾಗುವುದು.
ಮಾಗುಂಡಿ ಗ್ರಾಮದ ಮುಖ್ಯರಸ್ತೆಯನ್ನು ಬಾಳೆಹೊನ್ನೂರು ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಕನಸಿತ್ತು. ಆದರೆ ₹2 ಕೋಟಿ ಅನುದಾನದ ಕೊರತೆಯಿದೆ. ಅನುದಾನ ದೊರೆತಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು. ಮುಂದಿನ ವರ್ಷದಲ್ಲಿ ಜಯಪುರ, ಎನ್.ಆರ್.ಪುರ ಅಗ್ರಹಾರದಿಂದ ಟಿ.ಬಿ.ಸರ್ಕಲ್ ರಸ್ತೆ ಅಭಿವೃದ್ಧಿಪಡಿಸಲಾಗುವುದು. ನಂತರ ಒಂದು ಅಥವಾ ಎರಡು ವರ್ಷದಲ್ಲಿ ಹರಿಹರಪುರ ರಸ್ತೆ ವಿಸ್ತರಣೆ, ಶೃಂಗೇರಿ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದರು.ಅತಿಯಾದ ಮಳೆಯಿಂದ ಅಡಕೆ ಬೆಳೆಗೆ ಹಾನಿಯಾದ ಬಗ್ಗೆ ಪರಿಹಾರ ಘೋಷಣೆಗೆ ಒತ್ತಾಯಿಸಿ ಶೀಘ್ರದಲ್ಲಿ ಅಡಕೆ ಬೆಳೆಗಾರರ ನಿಯೋಗವನ್ನು ಸಂಬಂಧಿಸಿದ ಸಚಿವರವನ್ನು ಭೇಟಿ ಮಾಡಲಾಗುವುದು. ಅತಿವೃಷ್ಟಿ ಪರಿಹಾರ ಕೇಂದ್ರ ಸರ್ಕಾರದವರು ಘೋಷಣೆ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರದಿಂದ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಡಕೆ ಬೆಳೆ ಹಾನಿ ಬಗ್ಗೆ ಪರಿಹಾರ ನೀಡುವ ಬಗ್ಗೆ ಸಚಿವ ಕೃಷ್ಣ ಬೈರೇಗೌಡರು ಭರವಸೆ ನೀಡಿದ್ದಾರೆ ಎಂದರು.೩೦ಬಿಹೆಚ್‌ಆರ್ ೨: ಟಿ.ಡಿ.ರಾಜೇಗೌಡ