110 ದೇಗುಲಗಳಿಗೆ ₹10 ಕೋಟಿ ಅನುದಾನ ಬಿಡುಗಡೆ: ಶಾಸಕ ಯು.ಬಿ. ಬಣಕಾರ

| Published : Sep 20 2025, 01:01 AM IST

ಸಾರಾಂಶ

ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ₹25 ಕೋಟಿ ವಿಶೇಷ ಅನುದಾನ ನೀಡಿದ್ದರು. ಅದರಲ್ಲಿ ₹10 ಕೋಟಿಯನ್ನು 110 ದೇವಸ್ಥಾನಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.

ರಟ್ಟೀಹಳ್ಳಿ: ಕ್ಷೇತ್ರದ 110 ದೇಗುಲಗಳ ಅಭಿವೃದ್ಧಿಗೆ ₹10 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಶುಕ್ರವಾರ ಪಟ್ಟಣದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ತುಂಗಾ ಮೇಲ್ದಂಡೆ ಕಾಲುವೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ವರ್ಷ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ನೀಡಿದ ವಾಗ್ದಾನದಂತೆ ₹39 ಕೋಟಿ ವೆಚ್ಚದಲ್ಲಿ ತಾಲೂಕಿನಲ್ಲಿರುವ ತುಂಗಾ ಮೇಲ್ದಂಡೆ ಕಾಲುವೆಗಳ ಅಭಿವೃದ್ಧಿ ಹಾಗೂ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.

ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ₹25 ಕೋಟಿ ವಿಶೇಷ ಅನುದಾನ ನೀಡಿದ್ದರು. ಅದರಲ್ಲಿ ₹10 ಕೋಟಿಯನ್ನು 110 ದೇವಸ್ಥಾನಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಆ ಪೈಕಿ ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ₹10 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಅದೇ ರೀತಿ ಪಟ್ಟಣದ ಆರಾಧ್ಯ ದೈವ ವೀರಭದ್ರೇಶ್ವರ ದೇವಸ್ಥಾನಕ್ಕೆ ₹25 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಹಾಗೂ ಮೂಲ ಸೌಲಭ್ಯಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.ಪ್ರಸ್ತುತ ವರ್ಷ ಮತ್ತೆ ₹50 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ₹12.5.ಕೋಟಿ ಹಣ ಬಳಕೆಯನ್ನು ಶಾಸಕರ ವಿವೇಚನೆಗೆ ನೀಡಿದ್ದು, ಯಾವುದೇ ಇಲಾಖೆಗಳಿಗೆ ಅನುದಾನ ಹಂಚಿಕೆಗೆ ಸ್ವಾತಂತ್ರ್ಯವನ್ನು ನೀಡಿದ್ದು, ಅದರಲ್ಲಿ ಮತ್ತೆ ಮುಜರಾಯಿ ಇಲಾಖೆಯ 98 ದೇವಸ್ಥಾನಗಳಿಗೆ ₹10 ಕೋಟಿ ಹಣ ನೀಡಲಾಗುವುದು ಎಂದರು. ಪಟ್ಟಣಕ್ಕೆ 3 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿವೆ. ಅದರಲ್ಲಿ ಒಂದು ಜಾಗವನ್ನು ಗುರುತಿಸಿ ಪೂಜೆ ಸಲ್ಲಿಸಿದ್ದು, ಇನ್ನುಳಿದ 2 ಶುದ್ಧ ಕುಡಿಯುವ ನೀರಿನ ಘಟಕದ ಜಾಗ ಗುರುತಿಸಿ ನಿರ್ಮಾಣ ಮಾಡಲಾಗುವುದು ಎಂದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಅನ್ನಪೂರ್ಣ ಬಣಕಾರ, ಪಪಂ ಸದಸ್ಯರಾದ ಪಿ.ಡಿ. ಬಸನಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ರವಿ ಮುದಿಯಪ್ಪನವರ, ಲಲಿತಾ ಚನ್ನಗೌಡ್ರ, ಮಲ್ಲಮ್ಮ ಕಟ್ಟೆಕಾರ, ಶಿವಕುಮಾರ ಉಪ್ಪಾರ, ಮಂಜುನಾಥ ತಂಬಾಕದ, ಎ.ಕೆ. ಪಾಟೀಲ್, ಮಹೇಶ ಗುಬ್ಬಿ, ನಿಂಗಪ್ಪ ಚಳಗೇರಿ, ಬೀರೇಶ ಕರಡೆಣ್ಣನವರ, ವಿಜಯ ಅಂಗಡಿ, ಮಂಜು ಮಾಸೂರ, ಶಂಭು ಯತ್ನಳ್ಳಿ, ಮಂಜು ಅಸ್ವಾಲಿ, ಅಮೃತಾ ಯತ್ನಳ್ಳಿ, ಮಂಜುಳಾ ಮರಿಗೌಡ್ರ, ಸುನಿತಾ ದ್ಯಾವಕ್ಕಳವರ, ರಾಜೇಶ್ವರಿ ಹರವಿಶೆಟ್ಟರ ಮುಂತಾದವರು ಇದ್ದರು.