ಸಾರಾಂಶ
2023-24ನೇ ಅನುದಾನದಲ್ಲಿ ಸುಮಾರು 33 ಕಾಮಗಾರಿ ಮಾಡದೆಯೇ ಬಿಲ್ ಎತ್ತಿದ್ದಾರೆ ಎನ್ನುವ ಖಚಿತ ದೂರು ಬಂದಿರುವ ಹಿನ್ನೆಲೆಯಲ್ಲಿ ಅಗತ್ಯ ಪೂರ್ವಮಾಹಿತಿಯನ್ನು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕೊಪ್ಪಳ:
ಇಲ್ಲಿಯ ನಗರಸಭೆಯಲ್ಲಿ ₹10 ಕೋಟಿಗೂ ಅಧಿಕ ಗೋಲ್‌ಮಾಲ್ ಆಗಿದ್ದು, ಕಾಮಗಾರಿ ಮಾಡದೆಯೇ ಬಿಲ್ ಎತ್ತಿ ಹಾಕಿರುವ ಆರೋಪದಡಿ ಕೊಪ್ಪಳ ಲೋಕಾಯುಕ್ತರು ನಗರಸಭೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.ಡಿವೈಎಸ್ಪಿ ಸಂತೋಷಕುಮಾರ ನೇತೃತ್ವದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆಯೇ ಕೊಪ್ಪಳ ನಗರಸಭೆ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸಹೋದರ ಹಾಗೂ ಗುತ್ತಿಗೆದಾರ ಶಕೀಲ ಪಟೇಲ್, ಗುತ್ತಿಗೆದಾರ ಪ್ರವೀಣ ಕಂದಾರಿ ಹಾಗೂ ನಗರಸಭೆ ಜೆಇ ಸೋಮಲಿಂಗಪ್ಪ, ಕಂದಾಯ ಇಲಾಖೆ ಅಧಿಕಾರಿ ಉಜ್ವಲ (ನಗರಸಭೆಯ ಲೆಕ್ಕಾಧಿಕಾರಿಯಾಗಿ ಸೇವೆ ಮಾಡಿದ್ದಾರೆ) ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ.
ಬೆಳಗ್ಗೆಯಿಂದ ರಾತ್ರಿವರೆಗೂ ದಾಳ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಇಡೀ ದಿನ ಕಡತ ತಡಕಾಡಿದ್ದಾರೆ. ಸಾಕಷ್ಟು ಕಡತಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಕೆಲವರ ಮನೆಯ ಮೇಲೆ ದಾಳಿ ಮಾಡಿದಾಗಲೂ ಅವರಿಂದಲೂ ಸಾಕಷ್ಟು ದಾಖಲೆ ವಶಪಡಿಸಿಕೊಂಡಿದ್ದಾರೆ. 2023-24ನೇ ಅನುದಾನದಲ್ಲಿ ಸುಮಾರು 33 ಕಾಮಗಾರಿ ಮಾಡದೆಯೇ ಬಿಲ್ ಎತ್ತಿದ್ದಾರೆ ಎನ್ನುವ ಖಚಿತ ದೂರು ಬಂದಿರುವ ಹಿನ್ನೆಲೆಯಲ್ಲಿ ಅಗತ್ಯ ಪೂರ್ವಮಾಹಿತಿಯನ್ನು ಆಧರಿಸಿ ದಾಳಿ ಮಾಡಿದ್ದಾರೆ.ದಾಳಿಯ ವೇಳೆ ಪತ್ತೆಯಾಗಿರುವ ಲೆಕ್ಕಚಾರದ ಕುರಿತು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಬೇಕಾಗಿದೆ.