ಪಂಚ ಗ್ಯಾರಂಟಿ ಯೋಜನೆಯಿಂದ ವಂಚಿತರಾಗಿದ್ದರೆ, ಅಗತ್ಯ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ಪೂರೈಸಿ ಯೋಜನೆ ಲಾಭ ಪಡೆದುಕೊಳ್ಳಬೇಕು. ಗ್ರಾಪಂ ಸದಸ್ಯರು ತಮ್ಮ ಹೊಣೆ ಅರಿತು ಕಾರ್ಯ ನಿರ್ವಹಿಸಬೇಕು

ಕನ್ನಡಪ್ರಭ ವಾರ್ತೆ ಬೀಳಗಿ

ಕಾತರಕಿ-ಅರಕೇರಿ ವರೆಗಿನ ರಸ್ತೆ ಅಭಿವೃದ್ಧಿಗೆ ₹10 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಅರಕೇರಿ-ಸುನಗದ ವರೆಗಿನ ರಸ್ತೆ ಅಭಿವೃದ್ಧಿ ಕೆಲಸ ಪ್ರಾರಂಭವಾಗಿದೆ. ಹೀಗಾಗಿ ಈ ಭಾಗದ ಎಲ್ಲ ಮುಖ್ಯ ರಸ್ತೆಗಳು ಏಳೆಂಟು ತಿಂಗಳುಗಳಲ್ಲಿ ಹೊಸ ರಸ್ತೆಗಳಾಗಲಿವೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷರು, ಶಾಸಕ ಜೆ.ಟಿ.ಪಾಟೀಲ ಹೇಳಿದರು.

ತಾಲೂಕಿನ ಕಾತರಕಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಉಪ ವಿಭಾಗದಿಂದ 2023-24ನೇ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಅಂದಾಜು ₹20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅನಗವಾಡಿ-ಖಿಳೇಗಾಂವ ರಾಜ್ಯ ಹೆದ್ದಾರಿ-262 (ಅನಗವಾಡಿ-ಮುಧೋಳ ರಸ್ತೆ) ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕಾತರಕಿ ಗ್ರಾಮದ ಕುಡಿಯುವ ನೀರಿನ ಯೋಜನೆಗೆ ಶಾಸಕರ ಅನುದಾನದಲ್ಲಿ ₹3 ಲಕ್ಷ ನೀಡಿದ್ದು, ಶಾಲೆಯ ಕಟ್ಟಡ ದುರಸ್ತಿ ಅಂದಾಜು ವರದಿ ತಯಾರಿಸಿ ಕೊಟ್ಟರೆ ಅನುದಾನ ತರುವೆ. ಈ ಭಾಗದಲ್ಲಿ ಮಳೆ ಹಾನಿಯಿಂದ ಅಲ್ಪ ಪ್ರಮಾಣದ ಹಾನಿಯಾಗಿದ್ದು, ಉಳ್ಳಾಗಡ್ಡಿ, ಮೆಣಸಿನಕಾಯಿ, ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸಮೀಕ್ಷೆ ಮಾಡಿ ಒಂದು ವಾರದಲ್ಲಿ ವರದಿ ಕೊಡುವಂತೆ ಸೂಚಿಸಲಾಗಿದೆ. ಬೆಳೆ ಹಾನಿಯಾದ ರೈತರಿಗೂ ಅನ್ಯಾವಾಗದಂತೆ ಅಧಿಕಾರಿಗಳು ವರದಿ ಕೊಡಬೇಕು. ಇದರಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಅಂಥವರ ಮೇಲೆ ಶಿಸ್ತು ಕ್ರಮಕೈಗೊಳ್ಳುವೆ ಎಂದು ಎಚ್ಚರಿಕೆ ನೀಡಿದರು.

ಹಿಂಗಾರು, ಹಂಗಾಮಿಗೆ ಕಾಲುವೆಗೆ ನೀರು ಹರಿಸಲು ಅವಧಿ ನಿಗದಿಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಧ್ಯಮದ ಮೂಲಕ ವಿನಂತಿ ಮಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಯಿಂದ ವಂಚಿತರಾಗಿದ್ದರೆ, ಅಗತ್ಯ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ಪೂರೈಸಿ ಯೋಜನೆ ಲಾಭ ಪಡೆದುಕೊಳ್ಳಬೇಕು. ಗ್ರಾಪಂ ಸದಸ್ಯರು ತಮ್ಮ ಹೊಣೆ ಅರಿತು ಕಾರ್ಯ ನಿರ್ವಹಿಸಬೇಕು. ತಮ್ಮ ತಮ್ಮ ವಾರ್ಡ್‌ನ ಬೇಕು, ಬೇಡಿಕೆ ಪೂರೈಸಿ ಮೂಲಭೂತ ಸೌಲಭ್ಯ ಒದಗಿಸಬೇಕು. ಅಧಿಕಾರಿಗಳ ಮಾತಿಗೆ ತಲೆದೂಗದೇ ಅಧಿಕಾರ ಚಲಾಯಿಸಬೇಕೆಂದು ಕಿವಿ ಮಾತು ಹೇಳಿದರು.ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಮನೆ ಮತ್ತು ಭೂಮಿಗೆ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಅವಧಿಯಲ್ಲಿಯೇ ಭೂಮಿಯ ಬೆಲೆ ಹೆಚ್ಚಿಸಲು ಕ್ರಮಕೈಗೊಂಡಿದ್ದೆ ಎಂದು ಸ್ಮರಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗಣ್ಣವರ, ಮುಖಂಡರಾದ ಸೋಮಪ್ಪ ಮೇಟಿ, ಚಂದ್ರಶೇಖರ ಸಾವಳಗಿಮಠ, ವಿ.ಬಿ.ಮಾಚಪ್ಪನವರ, ಪಿ.ಬಿ.ಮೇಟಿ, ಜಿ.ಟಿ.ಬೆನಕಟ್ಟಿ, ಬಸು ಮಲಘಾಣ, ಮಲ್ಲಪ್ಪ ಕೆಂಪಲಿಂಗಣ್ಣವರ, ಕೃಷ್ಣಾ ಮಲಘಾಣ, ಸದಾಶಿವ ಜುಂಜೂರಿ, ಗ್ರಾಪಂ ಸದಸ್ಯರಾದ ಬಸು ಹೊಸಕೋಟಿ, ಶಿವು ಕೆರಕಲಮಟ್ಟಿ, ಲಕ್ಷ್ಮಣ ಹುದ್ದಾರ, ಮಂಜುಳಾ ಮಾದರ, ಸಿದ್ದಪ್ಪ ವಜ್ಜರಮಟ್ಟಿ, ಧರ್ಮಣ್ಣ ಭಗವತಿ, ಬಾಬು ಕೆಂಪಲಿಂಗಣ್ಣವರ, ಲೋಕೋಪಯೋಗಿ ಇಲಾಖೆ ಎಇಇ ಐ.ಎಸ್.ಹೊಸೂರ, ಎಂಜನಿಯರಾದ ಜಿ.ಆರ್.ದೇಶಪಾಂಡೆ, ಪ್ರದೀಪ ಕರಂಡಿ, ರಾಜುಗೌಡ ಪಾಟೀಲ, ನಾರಾಯಣ ಹಾದಿಮನಿ, ಯಶವಂತ ರಾಠೋಡ ಇತರರಿದ್ದರು.

ಆಸ್ಟ್ರೇಲಿಯಾದಲ್ಲಿ ಅ.28ರಿಂದ ನ.6ರವರೆಗೆ ಬಂಗಾರ ಮತ್ತು ಮಷಿನ್‌ರಿಗಳ ಕುರಿತು ನಡೆಯುವ ಕಾನ್ಪರೆನ್ಸ್‌ನಲ್ಲಿ ಪಾಲ್ಗೊಳ್ಳುವುದರಿಂದ ನ.7ರವರೆಗೆ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ.

ಜೆ.ಟಿ.ಪಾಟೀಲ ಶಾಸಕರು ಬೀಳಗಿ