ಕೇಂದ್ರ ‘ಪಿಎಂ ಜನ್ ಮನ್’ ಯೋಜನೆಯಡಿ 10.32 ಕೋಟಿ ರು. ಬಿಡುಗಡೆ: ಕ್ಯಾ. ಬ್ರಿಜೇಶ್‌ ಚೌಟ

| Published : Sep 02 2024, 02:01 AM IST

ಕೇಂದ್ರ ‘ಪಿಎಂ ಜನ್ ಮನ್’ ಯೋಜನೆಯಡಿ 10.32 ಕೋಟಿ ರು. ಬಿಡುಗಡೆ: ಕ್ಯಾ. ಬ್ರಿಜೇಶ್‌ ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿನ್ನಲೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಜುಯಲ್ ಓರಂ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಸದ ಚೌಟ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಜನ್ ಮನ್(ಪ್ರಧಾನಮಂತ್ರಿ ಜನ್ ಜಾತಿ ಆದಿವಾಸಿ ನ್ಯಾಯ್ ಮಹಾ ಅಭಿಯಾನ್) ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಸರ್ಕಾರದಿಂದ ಒಟ್ಟು 10.32 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಈ ಬಗ್ಗೆ ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಈ ಪಿಎಂ ಜನ್ ಮನ್ ಯೋಜನೆಯಡಿ 2024-25ನೇ ಸಾಲಿಗೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನು ಗುರುತಿಸಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಈ ಅನುದಾನವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಜುಯಲ್ ಓರಂ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಒಟ್ಟು 10.32 ಕೋಟಿ ರು. ಅನುದಾನದ ಪೈಕಿ ಸುಮಾರು 7.80 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಬಾಕಿಯಿದೆ. ಹೀಗಿರುವಾಗ, ಆದ್ಯತೆ ಮೇರೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿ ತ್ವರಿತ ಅನುಷ್ಠಾನಗೊಳಿಸುವಂತೆ ಕೋರಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದಿದ್ದಾರೆ.

ದ.ಕ.ದಲ್ಲಿ ಅನುದಾನ ಬಳಕೆ: ಪಿಎಂ ಜನ್ ಮನ್ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ಅಟ್ರಿಂಜೆಯಿಂದ-ಸುಲ್ಕೇರಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ(285.7 ಲಕ್ಷ ರು.), ಅಟ್ರಿಂಜೆಯಿಂದ-ಸುಲ್ಕೇರಿ ಸಂಪರ್ಕಿಸುವ ರಸ್ತೆ ಸೇತುವೆ ನಿರ್ಮಾಣ(267.00 ಲಕ್ಷ ರು.), ಪುತ್ತೂರು ತಾಲೂಕಿನ ಹಳೆನೀರಂಕಿ ಗ್ರಾಮದ ಪರಾಕಲು ಎಸ್.ಟಿ ಕಾಲೋನಿ ರಸ್ತೆಯಿಂದ ಅಲಂಕಾರ್ ರಸ್ತೆ ಅಭಿವೃದ್ಧಿ(228.05 ಲಕ್ಷ ರು.), ಮಂಗಳೂರು ತಾಲೂಕಿನ ಮಧ್ಯ ಗ್ರಾಮ, ಬಂಟ್ವಾಳದ ಕೇಪು ಗ್ರಾಮ, ಬೆಳ್ತಂಗಡಿಯ ನಾರಾವಿ ಗ್ರಾಮ ಹಾಗೂ ಸುಳ್ಯದ ಪಂಜ ಗ್ರಾಮದಲ್ಲಿ ತಲಾ ಒಂದು ಬಹು ಉದ್ದೇಶಿತ ಕೇಂದ್ರ ನಿರ್ಮಾಣ(2.40 ಕೋಟಿ ರು.) ಹಾಗೂ ಮಂಗಳೂರು ತಾಲೂಕಿನ ಮಧ್ಯ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ(12 ಲಕ್ಷ ರು.) ಸೇರಿ ಕೇಂದ್ರವು ಒಟ್ಟು 10.32 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ ಎಂದು ಕ್ಯಾ. ಬ್ರಿಜೇಶ್‌ ಚೌಟ ವಿವರಿಸಿದ್ದಾರೆ.