ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೇಸಿಗೆಯಲ್ಲಿ ಎದುರಾಗುವ ಕುಡಿವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪಾಪನಾಶಿ ಹೊರವಲಯದಲ್ಲಿ ಕೆರೆ ನಿರ್ಮಾಣ ಯೋಜನೆ ರೂಪಿಸಿ ಅದಕ್ಕಾಗಿ ಸರ್ಕಾರ ಜೂನ್ 2, 2017 ರಂದು ₹10 ಕೋಟಿ ಅನುದಾನ ನೀಡಿದೆ. ಆದರೆ ಇದುವರೆಗೂ ಕೆರೆ ನಿರ್ಮಾಣವೂ ಪೂರ್ಣಗೊಂಡಿಲ್ಲ, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವೂ ದೊರೆತಿಲ್ಲ.ರಾಜ್ಯ ಸರ್ಕಾರ ಘೋಷಿಸಿರುವ ಈ 10 ಕೋಟಿ ವೆಚ್ಚದಲ್ಲಿಯೇ ಕೆರೆ ನಿರ್ಮಾಣ ಪೂರ್ಣಗೊಳಿಸಬೇಕೆ ಅಥವಾ ಇದಕ್ಕೆ ಹೆಚ್ಚುವರಿಯಾಗಿ ಬೇಕಾಗುವ ಹಣ ನಂತರ ಕೊಡುವ ಕುರಿತು ಎಲ್ಲಿಯೂ ತಿಳಿಸಿಲ್ಲ. ಈ ಆದೇಶದಲ್ಲಿ ಯಾವುದಕ್ಕೂ ಸ್ಪಷ್ಟತೆ ಇಲ್ಲ.
ಯೋಜನೆಯ ಸ್ವರೂಪ ಬದಲು: ಪಾಪನಾಶಿಯ ಬಳಿ ಯೋಜನೆಗಾಗಿ ಸ್ಥಳ ನಿಗದಿಯಾದ ನಂತರ ಯೋಜನೆಯ ಸ್ವರೂಪವೇ ಬದಲಾಗಿದೆ. ನಿರ್ಮಾಣ ಮಾಡುವ ಕೆರೆಗೆ ಸಿಂಗಟಾಲೂರು ಏತ ನೀರಾವರಿ ಕಾಲುವೆಯ 3ನೇ ಲಿಫ್ಟ್, ಜಂದಿಫೀರ್ ದರ್ಗಾ ಡಿಲೇವರಿ ಚೇಂಬರ್ ದಿಂದ 700 ಮೀಟರ್ ಚೈನೇಜ್ ನಲ್ಲಿ ಆಫ್ ಟೇಕ್ ಜಾಕ್ ವೆಲ್ ನಿರ್ಮಿಸಿ ನೀರು ಪಡೆಯುವುದು ಅನಿವಾರ್ಯ. ಈ ಕಾಲುವೆಯಿಂದ ನೀರು ಪಡೆಯಲು ನೀರಾವರಿ ಇಲಾಖೆಯ ಅನುಮತಿ ಪಡೆದು ಜಲ ಸಂಗ್ರಹಾರ ನಿರ್ಮಾಣದ ಮೊದಲ ಹಂತದ ಕಾಮಗಾರಿಗೆ ₹13.66 ಕೋಟಿ ಹಾಗೂ ಭೂ ಸ್ವಾಧೀನಕ್ಕಾಗಿ ₹ 6.55 ಕೋಟಿ ಸೇರಿದಂತೆ ಒಟ್ಟು ₹20.21 ಕೋಟಿ ಪ್ರಸ್ತಾವನೆ ಕೆಯುಐಡಿಎಫ್ಸಿಯಿಂದ ಏ.27,2021 ರಂದು ಸರ್ಕಾರಕ್ಕೆ ಸಲ್ಲಿಸಲಾಗಿದೆ.₹16.66 ಕೋಟಿಗೆ ಸೀಮಿತ: ಈ ಯೋಜನೆ ನಿರ್ಮಾಣದ ಹೊಣೆ ಹೊತ್ತಿರುವ ಕೆಯುಐಡಿಎಫ್ಸಿಯಿಂದ ₹20.21 ಕೋಟಿ ಅನುದಾನಕ್ಕಾಗಿ ಸಲ್ಲಿಸಿದ್ದ ಪ್ರಸ್ತಾವನೆ ಪರಿಶೀಲಿಸಿದ್ದ ಸರ್ಕಾರ ಅನುದಾನದಲ್ಲಿ ಕಡಿತ ಮಾಡಿ ₹16.66 ಕೋಟಿ ಸರ್ಕಾರದ ವೆಚ್ಚಕ್ಕೆ ಸೀಮಿತಗೊಳಿಸಿ ಮರಳಿ ಇಲಾಖೆಗೆ ರವಾನಿಸಿತ್ತು. ಸರ್ಕಾರದಿಂದ ವೆಚ್ಚ ಸೀಮಿತ ಪತ್ರವನ್ನೇ ಆಧಾರವಾಗಿಟ್ಟುಕೊಂಡು ಕೆಯುಐಡಿಎಫ್ಸಿ ಅಧಿಕಾರಿಗಳು ಜೂನ್25, 2021 ರಂದು ಗದಗ ನಗರಸಭೆ ಪತ್ರ ಬರೆದು, ಇನ್ನುಳಿದ ಬಾಕಿ ಹಣ ₹3.55 ಕೋಟಿ ಹಣ ಅನುಷ್ಠಾನ ಪ್ರಾಧಿಕಾರ (ಗದಗ ಬೆಟಗೇರಿ ನಗರಸಭೆ) ಭರಿಸುವ ಮೂಲಕ ಬದ್ಧತೆ ಖಾತರಿಪಡಿಸಿದಲ್ಲಿ ಆಡಳಿತಾತ್ಮಕ ಅನುಮೋದನೆ ಕುರಿತ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ಸಲ್ಲಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಿದೆ.
ಗೊಂದಲದ ಗೂಡು: ಗದಗ -ಬೆಟಗೇರಿ ನಗರದ ಬೇಸಿಗೆಯಲ್ಲಿ ಬೇಕಾಗುವ ಕುಡಿವ ನೀರು ಸಂಗ್ರಹಿಸುವ ಕೆರೆ ನಿರ್ಮಾಣಕ್ಕಾಗಿ ಸರ್ಕಾರ ಮೊದಲು ₹10 ಕೋಟಿ ನೀಡಿದೆ, ನಂತರ ಭೂ ಸ್ವಾಧೀನ ಹಾಗೂ ಸಂಪ್ ನಿರ್ಮಾಣಕ್ಕಾಗಿ ₹20.21 ಕೋಟಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಉಳಿದ ಹಣವನ್ನು ನಗರಸಭೆ ಭರಿಸಬೇಕು ಎಂದು ತಿಳಿಸಿರುವುದು. ಕೆರೆ ನಿರ್ಮಾಣ ಸ್ಥಳದಲ್ಲಿ 8 ವರ್ಷ ಕಳೆದರೂ ಯಾವುದೇ ಪ್ರಗತಿ ಆಗದೇ ಇರುವುದು, ಈ ಎಲ್ಲ ಅಂಶ ಗಮನಿಸಿದಾಗ ಯೋಜನೆಯೇ ಒಂದು ಗೊಂದಲದ ಗೂಡಾಗಿ ಮಾರ್ಪಟ್ಟಿದೆ.ರೈತರ ಶೋಷಣೆ: ಯೋಜನೆಗಾಗಿ ಸರ್ಕಾರದಿಂದ ₹10 ಕೋಟಿ ಹಣ ಮಂಜೂರಾಗಿದ್ದರೂ ಯಾವ ಕಾರಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ ಎನ್ನುವುದೇ ತಿಳಿಯುತ್ತಿಲ್ಲ. ಯಾವುದೇ ಸರ್ಕಾರಿ ಯೋಜನೆಗಳಿಗೆ ಭೂಮಿ ಅವಶ್ಯಕ, ಭೂಮಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಪೂರ್ವದಲ್ಲಿ ಆ ಸ್ಥಳದಲ್ಲಿ ಯಾವುದೇ ಭೌತಿಕ ಕಾಮಗಾರಿ ಮಾಡುವಂತಿಲ್ಲ. ಆದರೆ ರೈತರಿಗೆ ಹಣವಿದ್ದರೂ ಯಾಕೆ ಪರಿಹಾರ ಕೊಟ್ಟಿಲ್ಲ ಎನ್ನುವ ಬಗ್ಗೆ ಯಾವ ಅಧಿಕಾರಿಗಳು ಸ್ಪಷ್ಟವಾಗಿ ಮಾಹಿತಿ ನೀಡುತ್ತಿಲ್ಲ. ಗದಗ-ಬೆಟಗೇರಿ ನಗರಸಭೆ, ಕೆಯುಐಡಿಎಫ್ಸಿ ಹಾಗೂ ಸರ್ಕಾರದ ನಡುವೆ ಉಂಟಾಗುತ್ತಿರುವ ಗೊಂದಲದಿಂದ ಯೋಜನೆ ವಿಳಂಬವಾಗಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಆದರೆ ಯಾರೋ ಮಾಡುವ ತಪ್ಪಿಗೆ ಇನ್ನಾರಿಗೋ ಶಿಕ್ಷೆ ಎನ್ನುವಂತೆ ಇಲ್ಲೂ ಕೂಡಾ ರೈತರ ಶೋಷಣೆಯಾಗುತ್ತಿದೆ.
ಈ ಕೆರೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಹಲವಾರು ರೈತರಿಗೆ ಅನ್ಯಾಯವಾಗಿದೆ. ಕೂಡಲೇ ಸರ್ಕಾರ,ಜಿಲ್ಲಾಡಳಿತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಜಮೀನು ಕಳೆದುಕೊಂಡ ರೈತ ಶ್ರೀನಿವಾಸ ದ್ಯಾವನೂರು ಹೇಳಿದ್ದಾರೆ.