ಮಹಾನಗರ ಪಾಲಿಕೆ ಸದಸ್ಯರ ಸಭೆಯಲ್ಲಿ ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ಣಯ ಕೈಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದರೆ ಪಾಲಿಕೆ ಕಚೇರಿ ಎದುರು ಅಹೋರಾತ್ರಿ, ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು.

ಹುಬ್ಬಳ್ಳಿ:

ಮಹದಾಯಿ ಯೋಜನೆಯಡಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ ನೀರು ಬಳಸಿಕೊಳ್ಳಲು ಅಗತ್ಯ ಅನುಮತಿ ಕೊಡಿಸುವ ಕುರಿತು ಮಹಾನಗರ ಪಾಲಿಕೆಯ ಸರ್ವ ಸದಸ್ಯರ ಸಭೆಯನ್ನು 10 ದಿನದೊಳಗೆ ಕರೆದು ಸ್ಪಷ್ಟ ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮರುದಿನದಿಂದ ಪಾಲಿಕೆ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆ ಸದಸ್ಯರ ಸಭೆಯಲ್ಲಿ ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ಣಯ ಕೈಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದರೆ ಪಾಲಿಕೆ ಕಚೇರಿ ಎದುರು ಅಹೋರಾತ್ರಿ, ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದರು.

ಮಹದಾಯಿ ಯೋಜನೆ ಜಾರಿಗಾಗಿ 2015ರ ಜುಲೈ 16ರಿಂದ ಹೋರಾಟ ನಡೆಯುತ್ತಿದೆ. 2018ರ ಆ. 14ರಂದು ಮಹದಾಯಿ ನ್ಯಾಯಾಧಿಕರಣ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆಯಾಗಿದೆ. ಇದರಲ್ಲಿ ಕುಡಿಯುವ ನೀರಿಗಾಗಿ ಹಂಚಿಕೆಯಾದ ನೀರನ್ನು ಬಳಸಿಕೊಳ್ಳಲು ಅಗತ್ಯ ಅನುಮತಿ ಇನ್ನೂ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಹದಾಯಿ ಹೋರಾಟದಲ್ಲಿ 4 ಜಿಲ್ಲೆಗಳ 11 ತಾಲೂಕುಗಳ ರೈತರು ಭಾಗವಹಿಸಿದ್ದು, 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಲಾಠಿ ಚಾರ್ಜ್‌ನಿಂದ ಗಾಯಗೊಂಡಿದ್ದಾರೆ. ಇಷ್ಟಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಜಲಾಶಯದ ನೀರು ನಗರಕ್ಕೆ:

ಮಲಪ್ರಭಾ ಜಲಾಶಯವನ್ನು ಪ್ರಮುಖವಾಗಿ ಕೃಷಿ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ. ಜಲಾಶಯಕ್ಕಾಗಿ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಒದಗಿಸುವುದು ಇದರ ಪ್ರಮುಖ ಉದ್ದೇಶವಿದ್ದರೂ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರಿಗೆ ಬಳಸಲು ರೈತರ ವಿರೋಧವಿಲ್ಲ. ಆದರೆ, ನಗರ ಮತ್ತು ಕೈಗಾರಿಕೆಗಳಿಗೆ ಪೂರೈಸುತ್ತಿರುವ ನೀರಿನ ಪ್ರಮಾಣ ಹಾಗೂ ಅದರಿಂದ ಸಂಗ್ರಹಿಸುತ್ತಿರುವ ತೆರಿಗೆ ಕುರಿತು ಪಾಲಿಕೆ ಸಂಪೂರ್ಣ ಮಾಹಿತಿ ನೀಡಬೇಕು. ಬರುವ ತೆರಿಗೆ ಹಣವನ್ನು ಅಚ್ಚುಕಟ್ಟು ಪ್ರದೇಶದ ರೈತರ ಹಿತಕ್ಕಾಗಿ ನೀಡಬೇಕು ಎಂಬುದು ರೈತಸೇನೆಯ ಬೇಡಿಕೆಯಾಗಿದೆ ಎಂದರು.

ಆಯುಕ್ತರಿಗೆ ಮನವಿ:

ಸುದ್ದಿಗೋಷ್ಠಿ ಬಳಿಕ ರೈತಸೇನಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ಮಹಾನಗರ ಪಾಲಿಕೆ ವರೆಗೆ ಪಾದಯಾತ್ರೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ವೇಳೆ ರೈತ ಮುಖಂಡರಾದ ಗುರು ರಾಯನಗೌಡ್ರ, ಮಲ್ಲಣ್ಣ ಅಲೇಕರ, ವೀರಬಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ಶಿವಪ್ಪ ಹೊರಕೇರಿ ಸೇರಿದಂತೆ ಹಲವರಿದ್ದರು.