ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿದ ವಾಹನ ಗುಜರಿ ನೀತಿಯನ್ವಯ ಮಂಡ್ಯ ಜಿಲ್ಲೆಯ ೧೦ ಅಗ್ನಿಶಾಮಕ ವಾಹನಗಳು ಗುಜರಿ ಸೇರಿವೆ. ಮದ್ದೂರು ತಾಲೂಕಿಗೆ ಹೊಸ ವಾಹನ ದೊರಕಿದ್ದು ಉಳಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳೂ ಹೊಸ ವಾಹನಗಳನ್ನು ಎದುರುನೋಡುತ್ತಿವೆ.
೧೫ ವರ್ಷ ಪೂರೈಸಿದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ನಿಯಮ ಜಾರಿಯಾದ ಎರಡು ವರ್ಷಗಳ ಬಳಿಕ ಅಗ್ನಿಶಾಮಕ ಠಾಣೆಯ ಹಲವು ವಾಹನಗಳು ಗುಜರಿ ಕಡೆ ಮುಖ ತಿರುಗಿಸಿವೆ. ಉಳಿದ ವಾಹನಗಳಿಗೆ ಕನಿಷ್ಠ ೨ ವರ್ಷದಿಂದ ೫ ವರ್ಷದವರೆಗೆ ಸಂಚರಿಸಲು ಅವಕಾಶವಿದೆ. ಆನಂತರ ಅವುಗಳೂ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಗುಜರಿ ಸೇರಲಿವೆ.ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಚಾಲಿತ ವಾಹನಗಳಿಂದ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆ. ಅದರಲ್ಲೂ ೧೫ ವರ್ಷಗಳಿಗಿಂತ ಹೆಚ್ಚು ಹಳೆಯದಾದ ವಾಹನಗಳಿಂದ ಮಾಲಿನ್ಯ ಹೆಚ್ಚು. ಇಂತಹ ವಾಹನಗಳಿಗೆ ಫಿಟ್ನೆಸ್ ಪ್ರಮಾಣಪತ್ರ, ಇನ್ಷೂರೆನ್ಸ್ ಕೂಡ ಸಿಗುವುದಿಲ್ಲ. ಹಾಗಾಗಿ ಈ ವಾಹನಗಳನ್ನು ಗುಜರಿಗೆ ಹಾಕಲಾಗುತ್ತಿದೆ.
ಪ್ರಸ್ತುತ ಮಂಡ್ಯ ತಾಲೂಕಿನಲ್ಲಿ ೪೫೦೦ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ವಾಹನ-೧ (ಬೋಟ್ ಸೇರಿ), ಕಿರು ರಕ್ಷಣಾ ವಾಹನ-೧, ಅಗ್ನಿ ಅವಘಡ ಸಂರಕ್ಷಣಾ ವಾಹನ-೧, ಕ್ಷಿಪ್ರ ರಕ್ಷಣಾ ವಾಹನ-೧ ಸೇರಿ ನಾಲ್ಕು ವಾಹನಗಳಿವೆ. ಮದ್ದೂರು ತಾಲೂಕಿನಲ್ಲಿ ವಾಟರ್ ಟ್ಯಾಂಕ್ ವಾಹನ (ಬೋಟ್ ಸೇರಿ), ಮತ್ತೊಂದು ಅಗ್ನಿ ಅವಘಡ ಸಂರಕ್ಷಣಾ ವಾಹನವಿದೆ. ಉಳಿದ ತಾಲೂಕುಗಳಲ್ಲಿ ವಾಟರ್ ಟ್ಯಾಂಕ್ ಜೊತೆ ಬೋಟ್‌ನ್ನು ಒಳಗೊಂಡಿರುವ ವಾಹನಗಳು ಮಾತ್ರ ಇವೆ.ಕಿರು-ಕ್ಷಿಪ್ರ ರಕ್ಷಣಾ ವಾಹನಗಳ ಕೊರತೆ:
ಕಿರು ಸಂರಕ್ಷಣಾ ವಾಹನ ಮತ್ತು ಕ್ಷಿಪ್ರಗತಿಯ ರಕ್ಷಣಾ ವಾಹನಗಳ ಕೊರತೆ ಇಲಾಖೆಯನ್ನು ಬಹುವಾಗಿ ಕಾಡುತ್ತಿದೆ. ಈ ವಾಹನಗಳ ಕೊರತೆಯಿಂದ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸುವುದಕ್ಕೆ ತೊಡಕಾಗಿದೆ. ಆ ವಾಹನಗಳೂ ಇದ್ದರೆ ಸಂಭವಿಸಬಹುದಾದ ಜೀವಹಾನಿಯನ್ನು ತಪ್ಪಿಸಬಹುದಲ್ಲದೆ, ಇನ್ನಷ್ಟು ಕ್ಷಿಪ್ರಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ಜೀವ ರಕ್ಷಣೆ ಜೊತೆಗೆ ಆಸ್ತಿ ರಕ್ಷಣೆಗೂ ನೆರವಾಗಲು ಸಹಾಯವಾಗಲಿದೆ ಎನ್ನುವುದು ಇಲಾಖಾ ಅಧಿಕಾರಿಗಳು ಹೇಳುವ ಮಾತಾಗಿದೆ.ಪ್ರತಿ ತಾಲೂಕಿಗೂ ಅವಶ್ಯ:
ಬೇಸಿಗೆ ಸಮಯದಲ್ಲಿ ಅಗ್ನಿ ಅವಘಡಗಳು ಹೆಚ್ಚಾಗಿ ಸಂಭವಿಸುವುದರಿಂದ ಪ್ರತಿ ತಾಲೂಕಿನಲ್ಲೂ ನೀರು ಸಂಗ್ರಹಿಸಿಕೊಂಡು ತೆರಳುವ ಒಂದೊಂದು ವಾಹನವಿದೆ. ಅಗ್ನಿ ಅವಘಡಗಳ ಜೊತೆಗೆ ನಾಲೆ ದುರಂತ ಸಂಭವಿಸಿದ ಸ್ಥಳಗಳಿಗೆ ತುರ್ತಾಗಿ ತೆರಳುವುದಕ್ಕೆ ಕಿರು ರಕ್ಷಣಾ ವಾಹನಗಳೂ ಇಲ್ಲ, ಕ್ಷಿಪ್ರ ರಕ್ಷಣಾ ವಾಹನಗಳೂ ಇಲ್ಲ. ದುರಂತ ಸಂಭವಿಸಿದ ಸ್ಥಳಗಳಿಗೆ ಮಂಡ್ಯದಿಂದ ಈ ವಾಹನಗಳನ್ನು ಕಳುಹಿಸಬೇಕಿದೆ. ಅಷ್ಟರಲ್ಲಿ ಜೀವ ಮತ್ತು ಆಸ್ತಿ ಹಾನಿಯನ್ನು ಪರಿಣಾಮಕಾರಿಯಾಗಿ ಅಗ್ನಿಶಾಮಕ ಇಲಾಖೆಯಿಂದ ತಡೆಯಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಪ್ರತಿಯೊಂದು ತಾಲೂಕಿನಲ್ಲೂ ಕಿರು ಮತ್ತು ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ವಾಹನಗಳ ಅವಶ್ಯಕವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಅಗ್ನಿಶಾಮಕ ಇಲಾಖೆಗೆ ವಾಹನಗಳ ಅವಶ್ಯಕತೆ ತುಂಬಾ ಇದೆ. ಎಲ್ಲೇ ಅಗ್ನಿ ಅವಘಡಗಳು, ನಾಲಾ ದುರಂತಗಳು ಸಂಭವಿಸಿದರೂ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಪಾತ್ರ ಮಹತ್ವದ್ದಾಗಿರುತ್ತದೆ. ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಜೀವ ರಕ್ಷಣೆ ಮತ್ತು ಸಾರ್ವಜನಿಕ ಆಸ್ತಿ ರಕ್ಷಣೆ ಮಾಡುವುದರ ಜೊತೆಗೆ ಹೆಚ್ಚಿನ ಅನಾಹುತ, ನಷ್ಟದ ಪ್ರಮಾಣ ಹೆಚ್ಚಾಗದಂತೆ ತಡೆಯುವಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ರಕ್ಷಣಾ ಸಾಮರ್ಥ್ಯ ಹೆಚ್ಚಳ:ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಣಾಮಕಾರಿ ಕರ್ತವ್ಯ ನಿರ್ವಹಣೆಗೆ ಪೂರಕವಾಗಿ ಅಗತ್ಯ ರಕ್ಷಣಾ ವಾಹನಗಳು ಬೇಕಿದೆ. ಹಾಲಿ ಎಲ್ಲಾ ತಾಲೂಕುಗಳಲ್ಲಿ ಒಂದೊಂದು ವಾಹನಗಳು ಮಾತ್ರ ಇವೆ. ಅಗ್ನಿ ದುರಂತ ಸಂಭವಿಸಿದ ವೇಳೆ ಒಂದು ವಾಹನದಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಎಲ್ಲ ರೀತಿಯ ಒಂದೊಂದು ವಾಹನಗಳು ಇದ್ದರೆ ರಕ್ಷಣಾ ಕಾರ್ಯಾಚರಣೆಯನ್ನು ಚುರುಕಿನಿಂದ ನಡೆಸಲು ಸಾಧ್ಯವಾಗಲಿದೆ. ಇಲಾಖೆ ರಕ್ಷಣಾ ಸಾಮರ್ಥ್ಯ ವೃದ್ಧಿಸಿಕೊಳ್ಳುವುದಕ್ಕೂ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ.
ಮೂರು ವಾಹನ, ಒಂದು ಜೀಪ್ ಸ್ಥಗಿತ:ಮಂಡ್ಯದಲ್ಲಿ ಮೂರು ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ನಿಲ್ಲಿಸಲಾಗಿದೆ. ಉಳಿದ ನಾಲ್ಕು ವಾಹನಗಳು ಕಾರ್ಯದಲ್ಲಿವೆ. ಎರಡು ಜೀಪುಗಳ ಪೈಕಿ ಒಂದು ಜೀಪು ಗುಜರಿ ಸೇರಿದ್ದು, ಸದ್ಯ ಒಂದು ಜೀಪು ಕಾರ್ಯ ನಿರ್ವಹಣೆಯಲ್ಲಿದೆ. ಮದ್ದೂರು ಹೊರತುಪಡಿಸಿ ಉಳಿದ ತಾಲೂಕುಗಳಿಗೆ ಹೊಸ ವಾಹನಗಳನ್ನು ನೀಡುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಹೊಸ ವಾಹನಗಳನ್ನು ತ್ವರಿತಗತಿಯಲ್ಲಿ ಮಂಜೂರಾತಿ ಮಾಡಿಸಿಕೊಳ್ಳುವುದಕ್ಕೆ ಹಾಗೂ ಇಲಾಖೆಯ ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ಅಧಿಕಾರಿಗಳು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ.
--------------------------------‘ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿಯನ್ವಯ ಜಿಲ್ಲೆಯಲ್ಲಿ ೧೫ ವರ್ಷ ಪೂರೈಸಿದ ೧೦ ವಾಹನಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಈ ವಾಹನಗಳಲ್ಲಿರುವ ಅಗತ್ಯ ಉಪಕರಣಗಳನ್ನು ತೆಗೆದಿರಿಸಿಕೊಳ್ಳಲಾಗುವುದು. ಈ ವಾಹನಗಳನ್ನು ಗುಜರಿಗೆ ಹಾಕುವುದಕ್ಕೆ ಆನ್‌ಲೈನ್‌ನಲ್ಲಿ ಸರ್ಕಾರ ಟೆಂಡರ್ ಕರೆಯಲಿದೆ. ಟೆಂಡರ್ ಪಡೆದವರು ಬಂದು ವಾಹನವನ್ನು ಕೊಂಡೊಯ್ಯುವರು. ಸದ್ಯ ಮದ್ದೂರಿಗೆ ಹೊಸ ವಾಹನ ಬಂದಿದೆ. ಉಳಿದ ತಾಲೂಕುಗಳಿಗೆ ಹೊಸ ವಾಹನಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’.
ಬಿ.ಎಂ.ರಾಘವೇಂದ್ರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ.