ಮಹಿಳೆ ಗರ್ಭದಲ್ಲಿದ್ದ 10 ಕೆ.ಜಿ. ಗಡ್ಡೆ ಹೊರತೆಗೆದ ವೈದ್ಯರು
KannadaprabhaNewsNetwork | Published : Oct 22 2023, 01:00 AM IST
ಮಹಿಳೆ ಗರ್ಭದಲ್ಲಿದ್ದ 10 ಕೆ.ಜಿ. ಗಡ್ಡೆ ಹೊರತೆಗೆದ ವೈದ್ಯರು
ಸಾರಾಂಶ
ಚನ್ನಪಟ್ಟಣ: ಮಹಿಳೆಯೊಬ್ಬರ ಗರ್ಭದಲ್ಲಿದ್ದ ಬರೋಬ್ಬರಿ 10 ಕೆ.ಜಿ. ತೂಕದ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವಲ್ಲಿ ನಗರದ ಬಾಲು ಆಸ್ಪತ್ರೆ ಯಶಸ್ವಿಯಾಗಿದೆ.
ಚನ್ನಪಟ್ಟಣ: ಮಹಿಳೆಯೊಬ್ಬರ ಗರ್ಭದಲ್ಲಿದ್ದ ಬರೋಬ್ಬರಿ 10 ಕೆ.ಜಿ. ತೂಕದ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವಲ್ಲಿ ನಗರದ ಬಾಲು ಆಸ್ಪತ್ರೆ ಯಶಸ್ವಿಯಾಗಿದೆ. ನಗರದ ಬಾಲು ಆಸ್ಪತ್ರೆ ಮುಖ್ಯಸ್ಥೆ ಡಾ.ಶೈಲಜಾ ವೆಂಕಟಸುಬ್ಬಯ್ಯ ಚಟ್ಟಿ ಮಾರ್ಗದರ್ಶನದಲ್ಲಿ ಅರವಳಿಕೆ ತಜ್ಞ ಡಾ. ಮನೋಜಂ, ಶಸ್ತ್ರಚಿಕಿತ್ಸಕರಾದ ಡಾ.ಪ್ರಕಾಶ್ ಹಾಗೂ ಡಾ. ಜಯಶ್ರೀ ತಜ್ಞರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಮಹಿಳೆಯರ ಗರ್ಭದಲ್ಲಿ ಬೆಳೆದಿದ್ದ 10 ಕೆ.ಜಿ. 300 ಗ್ರಾಂ ತೂಕದ ಅಂಡಾಶಯದ ಕ್ಯಾನ್ಸರ್ ಗಡ್ಡೆಯನ್ನು ಹೊರ ತೆಗೆದಿದೆ. ಶುಕ್ರವಾರ ತಾಲೂಕಿನ ಮಹಿಳೆಯೊಬ್ಬರು(46 ವರ್ಷ) ತಮಗೆ ಗ್ಯಾಸ್ಟ್ರಿಕ್ ಆಗಿದ್ದು, ವಾಂತಿಯಾಗುತ್ತಿದೆ ಎಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದಾರೆ. ಸ್ಕ್ಯಾನಿಂಗ್ ಮಾಡಿದ ವೇಳೆ ಅವರ ಗರ್ಭದಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿರುವುದು ಕಂಡುಬಂದಿದೆ. ಆಸ್ಪತ್ರೆ ವೈದ್ಯರು ಕೂಡಲೇ ಕಾರ್ಯಪ್ರವೃತ್ತರಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ್ ಹಾಗೂ ಬಾಲು ಆಸ್ಪತ್ರೆಯ ಡಾ.ಜಯಶ್ರೀ ನೇತೃತ್ವದಲ್ಲಿ ಶನಿವಾರ ಮುಂಜಾನೆ 3 ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಮಹಿಳೆ ಗರ್ಭದಲ್ಲಿದ್ದ ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆದಿದ್ದಾರೆ. ಬೃಹತ್ ಗಾತ್ರದ ಗಡ್ಡೆ: ತಪಾಸಣೆಯ ವೇಳೆ ಮಹಿಳೆ ತಮಗೆ ಕಳೆದ 6-7 ತಿಂಗಳಿನಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುತ್ತಿದ್ದು, ಕೆಲ ದಿನಗಳಿಂದ ಆಗಾಗ ವಾಂತಿಯಾಗುತ್ತಿತ್ತು ಎಂದು ತಿಳಿಸಿದ್ದಾರೆ. ಮಹಿಳೆಯ ಹೊಟ್ಟೆ ಊದುಕೊಂಡಿದ್ದು, ಇದರಿಂದ ಅನುಮಾನಗೊಂಡು ಸ್ಕ್ಯಾನಿಂಗ್ ನಡೆಸಿದ ವೇಳೆ ಮಹಿಳೆಯ ಗರ್ಭದಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಕಂಡುಬಂದಿತ್ತು. ತ್ವರಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾಗಿ ಆಸ್ಪತ್ರೆಯ ಅರವಳಿಕೆ ತಜ್ಞ ಡಾ. ಮನೋಜಂ ಮಾಹಿತಿ ನೀಡಿದರು. ಈ ಹಿಂದೆ ಚನ್ನಪಟ್ಟಣ ಮತ್ತು ಮಾಗಡಿಯಲ್ಲಿ 8 ಕೆಜಿಗಿಂತಲೂ ಹೆಚ್ಚು ತೂಕದ ಕ್ಯಾನ್ಸರ್ ಗಡ್ಡೆಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಯಶ್ವಸಿಯಾಗಿ ಹೊರತೆಗೆಯಲಾಗಿತ್ತು. ಆದರೆ 10 ಕೆ.ಜಿ.ಗೂ ಹೆಚ್ಚು ತೂಕವಿರುವ ಅಂಡಾಶಯದ ಕ್ಯಾನ್ಸರ್ ಗಡ್ಡೆಯನ್ನು ಇದೇ ಮೊದಲ ಬಾರಿ ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಹೊರತೆಗೆಯಲಾಗಿದೆ ಎಂದು ಡಾ. ಮನೋಜಂ ಮಾಹಿತಿ ನೀಡಿದರು. ಈ ವೇಳೆ ಆಸ್ಪತ್ರೆಯ ವ್ಯವಸ್ಥಾಪಕ ವೆಂಕಟಸುಬ್ಬಯ್ಯಚೆಟ್ಟಿ ಉಪಸ್ಥಿತರಿದ್ದರು. ಪ್ರಸ್ತುತ ಮಹಿಳೆ ಆರೋಗ್ಯವಾಗಿದ್ದು, ಬೃಹತ್ ಗಾತ್ರದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿರುವ ವೈದ್ಯರಿಗೆ ಮಹಿಳೆಯ ಕುಟುಂಬಸ್ಥದವರು ಧನ್ಯವಾದ ಸಲ್ಲಿಸಿದ್ದಾರೆ. ಪೊಟೊ೨೧ಸಿಪಿಟ೩: ಚನ್ನಪಟ್ಟಣ ಬಾಲು ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಗರ್ಭದಲ್ಲಿ ಬೆಳೆದಿದ್ದ 10 ಕೆ.ಜಿ.ತೂಕದ ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆದಿರುವ ಕುರಿತು ಆಸ್ಪತ್ರೆಯ ಅರವಳಿಕೆ ತಜ್ಞ ಡಾ. ಮನೋಜಂ ಮಾಹಿತಿ ನೀಡಿದರು. ಆಸ್ಪತ್ರೆ ವ್ಯವಸ್ಥಾಪಕ ವೆಂಕಟಸುಬ್ಬಯ್ಯಚೆಟ್ಟಿ ಉಪಸ್ಥಿತರಿದ್ದರು. ಪೊಟೊ೨೧ಸಿಪಿಟಿ೪: ಮಹಿಳೆಯ ಗರ್ಭದಲ್ಲಿ ಬೆಳೆದಿದ್ದ 10.ಕೆ.ಜಿ. 300 ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ.