ಹೊನ್ನಾಳಿ ಕೆಎಸ್‌ಆರ್‌ಟಿಸಿ ಡಿಪೋಗೆ 10 ನೂತನ ಬಸ್‌

| Published : Jul 15 2025, 01:00 AM IST

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ, 2 ತಿಂಗಳು ಪೂರೈಸಿದೆ. ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ 5 ಗ್ಯಾರಂಟಿಗಳನ್ನು ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇದರಲ್ಲಿ ವಿಶೇಷವಾಗಿ ಮಹಿಳಾ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ 500 ಕೋಟಿ ಉಚಿತ ಟಿಕೆಟ್‌ಗಳು ವಿತರಿಸಿ, ₹12,669 ಕೋಟಿ ಯೋಜನೆಗೆ ವಿನಿಯೋಗಿಸಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

- ಶಕ್ತಿ ಯೋಜನೆಗೆ 2 ವರ್ಷ ಹಿನ್ನೆಲೆ ಸಂಭ್ರಮಾಚರಣೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿಕೆ । ಬಸ್‌ಗಳಿಗೆ ಪೂಜೆ, ಸಿಹಿ ವಿತರಣೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ, 2 ತಿಂಗಳು ಪೂರೈಸಿದೆ. ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ 5 ಗ್ಯಾರಂಟಿಗಳನ್ನು ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇದರಲ್ಲಿ ವಿಶೇಷವಾಗಿ ಮಹಿಳಾ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ 500 ಕೋಟಿ ಉಚಿತ ಟಿಕೆಟ್‌ಗಳು ವಿತರಿಸಿ, ₹12,669 ಕೋಟಿ ಯೋಜನೆಗೆ ವಿನಿಯೋಗಿಸಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಯೋಜನೆಯಡಿ 500 ಕೋಟಿ ಉಚಿತ ಪ್ರಯಾಣದ ಹಂತ ತಲುಪಿದ ಸಂಭ್ರಮದ ಹಿನ್ನೆಲೆ ಸರ್ಕಾರಿ ಬಸ್‌ಗಳಿಗೆ ಪೂಜೆ ಸಲ್ಲಿಸಿ, ಸಿಹಿ ವಿತರಿಸಿ ಅವರು ಮಾತನಾಡಿದರು. ಸಾರಿಗೆ ಸೌಲಭ್ಯಗಳ ಸುಧಾರಣೆ ಬಗ್ಗೆ ಸಾರ್ವಜನಿಕರಿಂದ ಕೂಡ ಅನೇಕ ಬೇಡಿಕೆಗಳಿವೆ. ಮುಂದಿನ ದಿನಗಳಲ್ಲಿ ಇನ್ನೂ 10 ನೂತನ ಬಸ್‌ಗಳನ್ನು ಹೊನ್ನಾಳಿ ಡಿಪೋಗೆ ನೀಡಲಾಗುತ್ತಿದೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಜನತೆಗೆ ನೀಡಿದ್ದ 5 ಗ್ಯಾರಂಟಿಗಳ ಭರವಸೆಯಂತೆ ಮಾತಿಗೆ ಬದ್ಧವಾಗಿ ನಡೆದಿದೆ. ಶಕ್ತಿ ಯೋಜನೆ ಸೇರಿದಂತೆ ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳನ್ನು ಕೂಡ ಮಾತಿಗೆ ತಪ್ಪದೇ ಅನುಷ್ಠಾನಗೊಳಿಸಿದ ಶ್ರೇಯಸ್ಸು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಸಲ್ಲಬೇಕು ಎಂದರು.

ಹೊನ್ನಾಳಿಯಲ್ಲಿ ಟಿಕೆಟ್ ಕಾಯ್ದಿರಿಸುವ ಕೇಂದ್ರ ಸೇರಿದಂತೆ ಬೇರೆ ಬೇರೆ ಊರುಗಳಿಗೆ ಬಸ್ ಸೌಲಭ್ಯಗಳನ್ನು ಒದಗಿಸುವಂತೆ ಸಾರ್ವಜನಿಕರು ಮನವಿ ಮಾಡಿದರು. ಇದೇ ಸಂದರ್ಭ ಕೆಎಸ್‌ಆರ್‌ಟಿಸಿ ನೌಕರರು 38 ತಿಂಗಳು ಹಿಂಬಾಕಿ ಪಾವತಿ ಹಾಗೂ ವೇತನ ಪರಿಷ್ಕರಣೆ ಬಗ್ಗೆ ಮನವಿ ಸಲ್ಲಿಸಿದರು.

ದಾವಣಗೆರೆ ವಿಭಾಗೀಯ ಯಾಂತ್ರಿಕ ಅಭಿಯಂತರ ತಾರಾನಾಥ್, ಹೊನ್ನಾಳಿ ಡಿಪೋ ವ್ಯವಸ್ಥಾಪಕ ಎ.ಬಿ.ರಾಮಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಮಹಿಳಾ ಅಧ್ಯಕ್ಷೆ ಪುಪ್ಪ ರವೀಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗದ್ದಿಗೇಶ್, ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಮುಖಂಡರಾದ ಬಿ.ಸಿದ್ದಪ್ಪ, ಎಚ್.ಎ. ಉಮಾಪತಿ, ಆರ್.ನಾಗಪ್ಪ, ಚಂದ್ರಶೇಖರಪ್ಪ, ಡಾ. ಈಶ್ವರ ನಾಯ್ಕ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕಿ ಆಶಾ, ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಫಿದಾ ಗೌಸ್, ಕೋಟೆ ಮಂಜು, ಚಾಲಕರು ಮತ್ತು ನಿರ್ವಾಹಕರು ಸೇರಿದಂತೆ ಅನೇಕ ಮುಖಂಡರು ಇದ್ದರು.

- - -

(ಕೋಟ್‌) ಮೊಟ್ಟಮೊದಲ ಬಾರಿಗೆ ಶಕ್ತಿ ಯೋಜನೆ 2023 ಜು.14ರಂದು ತಾಲೂಕಿನ ಬಸ್ ನಿಲ್ದಾಣದಲ್ಲಿ ಉದ್ಘಾಟನೆ ಮಾಡಲಾಗಿತ್ತು. ಇದರ 2 ವರ್ಷಗಳ ಸಂಭ್ರಮಾಚರಣೆ ಇಂದು ಮಾಡಲಾಗುತ್ತಿದೆ. ಪ್ರಸ್ತುತ ತಾಲೂಕಿನ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋದಿಂದ 59 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿ ದಿನ ₹10 ಲಕ್ಷ ಸಂಗ್ರಹವಾಗುತ್ತಿದೆ. ಇದರಲ್ಲಿ ನಿಗಮಕ್ಕೆ ನಗದು ₹3 ಲಕ್ಷ, ಇನ್ನು₹7 ಲಕ್ಷ ಉಚಿತ ಪ್ರಯಾಣದ ಯೋಜನೆ ಬಾಬ್ತು ಸರ್ಕಾರ ನಿಗಮಕ್ಕೆ ಸಂದಾಯ ಮಾಡುತ್ತದೆ.

- ಡಿ.ಜಿ.ಶಾಂತನಗೌಡ, ಶಾಸಕ, ಹೊನ್ನಾಳಿ

- - -

-14ಎಚ್‌ಎಲ್.ಐ1.ಜೆಪಿಜಿ:

ಶಕ್ತಿ ಯೋಜನೆಗೆ 2 ವರ್ಷ ತುಂಬಿದ ಹಿನ್ನೆಲೆ ಹೊನ್ನಾಳಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದ ಸಂಭ್ರಮಾಚರಣೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.