ಸಾರಾಂಶ
ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ವಿಶ್ವವಿದ್ಯಾಲಯದ (ಯುವಿಸಿಇ) ಶೇ.25 ರಷ್ಟು ಸೀಟುಗಳನ್ನು ನಿಯಮಾನುಸಾರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೂಲಕ ಭರ್ತಿ ಮಾಡಬೇಕು.
ಬೆಂಗಳೂರು : ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ವಿಶ್ವವಿದ್ಯಾಲಯದ (ಯುವಿಸಿಇ) ಶೇ.25 ರಷ್ಟು ಸೀಟುಗಳನ್ನು ನಿಯಮಾನುಸಾರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೂಲಕ ಭರ್ತಿ ಮಾಡಬೇಕು. ಈ ವೇಳೆ ಶೇ.10ರಷ್ಟು ಸೀಟುಗಳನ್ನು ಕರ್ನಾಟಕದ ಮೂಲಕ ಜೆಇಇ ರ್‍ಯಾಂಕಿಂಗ್ ವಿದ್ಯಾರ್ಥಿಗಳಿಗೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಿಸಿಇ ಕಾಯಿದೆಯಲ್ಲಿ ಜೆಇಇ ಮೂಲಕ ಶೇ.25ರಷ್ಟು ಸೀಟುಗಳನ್ನು ಭರ್ತಿ ಮಾಡಲು ಅವಕಾಶವಿದೆ. ಆದರೆ, ಕರ್ನಾಟಕ ಮೂಲದ ವಿದ್ಯಾರ್ಥಿಗಳೂ ಪ್ರತೀ ವರ್ಷ ಜೆಇಇ ಬರೆದು ರ್‍ಯಾಂಕ್ ಪಡೆಯುತ್ತಾರೆ. ಆದರೆ, ಜೆಇಇ ಪಾಪಾಸದ ಎಲ್ಲಿರಗೂ ಐಐಟಿಗಳಲ್ಲಿ ಸೀಟು ಸಿಗುವುದಿಲ್ಲ. ಹಾಗಾಗಿ ಶೇ.10ರಷ್ಟು ಸೀಟುಗಳನ್ನು ಕರ್ನಾಟಕದ ಜೆಇಇ ರ್‍ಯಾಂಕಿಂಗ್ ವಿದ್ಯಾರ್ಥಿಗಳಿಗೆ ಮೀಸಲಿಡಲು ನಾವು ಯೋಚಿಸಿದ್ದೇವೆ ಎಂದರು.
ಇದೇ ವೇಳೆ ಯುವಿಸಿಇ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಹಂಚಿಕೊಂಡ ಸಚಿವರು, ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಧ್ಯಯನ ಮಾಡಲು ಗುಜರಾತ್‌ನ ಗಾಂಧಿನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಅಧಿಕಾರಿಗಳೊಂದಿಗೆ ಭೇಟಿ ನಿಯೋಗ ತೆರಳಲಾಗಿತ್ತು. ಮೂಲಸೌಕರ್ಯ ವಿಚಾರ ಮಾತ್ರವಲ್ಲದೆ, ಅಲ್ಲಿನ ಪಠ್ಯಕ್ರಮ, ಶಿಕ್ಷಣದ ಗುಣಮಟ್ಟ, ಅಧ್ಯಾಪಕರು, ನೇಮಕಾತಿ ವಿಧಾನ, ಹಣಕಾಸು ಇತ್ಯಾದಿಗಳನ್ನು ಅಧ್ಯಯನ ಮಾಡಿದ್ದು ಐಐಟಿಗೂ ಮೀರಿದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ ಗುರುತಿಸಲಾದ 50 ಎಕರೆ ಜಾಗವನ್ನು ಯುವಿಸಿಇಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರವು ಯುವಿಸಿಇಗೆ ₹500 ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿದ್ದು, ಮೊದಲ ಹಂತದಲ್ಲಿ 100 ಕೋಟಿ ಬಿಡುಗಡೆ ಮಾಡಿದೆ.