ಸಾರಾಂಶ
ಹಣಕ್ಕಾಗಿ ವ್ಯಕ್ತಿಯೊಬ್ಬನಿಗೆ ಪೀಡಿಸಿದ್ದಲ್ಲದೆ ಮನೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ದೋಚಿದ ಆರೋಪ ಎದುರಿಸುತ್ತಿದ್ದ ೧೦ ಜನರ ತಂಡವನ್ನು ರಬಕವಿ ಬನಹಟ್ಟಿ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಹಣಕ್ಕಾಗಿ ವ್ಯಕ್ತಿಯೊಬ್ಬನಿಗೆ ಪೀಡಿಸಿದ್ದಲ್ಲದೆ ಮನೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ದೋಚಿದ ಆರೋಪ ಎದುರಿಸುತ್ತಿದ್ದ ೧೦ ಜನರ ತಂಡವನ್ನು ರಬಕವಿ ಬನಹಟ್ಟಿ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ.ರಬಕವಿ-ಬನಹಟ್ಟಿಯ ಶಿವಲಿಂಗ ಗೊಂಬಿಗುಡ್ಡ, ಪ್ರಶಾಂತ ನಾಯಕ, ರವಿ ಕರಿಶೆಟ್ಟಿ, ಈಶ್ವರ ಹೊಸೂರ, ಪ್ರದೀಪ ದೇಶಪಾಂಡೆ, ಸಂಗಪ್ಪ ಮಾದರ, ದಾನಪ್ಪ ಶಿರೋಳ, ನರಸಿಂಹ ಗಡಕರ, ದಾನೇಶ ಭಜಂತ್ರಿ, ಮಂಜುನಾಥ ವಿ.ಎಂ. ಬಂಧಿತ ಆರೋಪಿಗಳು.
ತಾಲೂಕಿನ ನಾವಲಗಿಯ ಜೋತಿಷಿ ಯಮನಪ್ಪ ಮಂಟೂರ ಅವರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಲ್ಲದೆ, ಪದೇ ಪದೆ ಹಣದ ಬೇಡಿಕೆ ಇಡುತ್ತಿದ್ದರು. ಹಣ ನೀಡದ್ದಕ್ಕೆ ಈಚೆಗೆ ಜಾತಿ ನಿಂದನೆ ಮಾಡಿ, ಕಟ್ಟಿಗೆಯಿಂದ ಹೊಡೆದು, ಟವೆಲ್‌ನಿಂದ ಕುತ್ತಿಗೆಗೆ ಬಿಗಿದು ಕೊಲೆಗೆ ಯತ್ನಿಸಿದ್ದರು. ಅಲ್ಲದೆ, ಮನೆಯಲ್ಲಿನ ಸುಮಾರು ₹೩ ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆಂದು ಯಮನಪ್ಪನ ಪತ್ನಿ ಚಂದ್ರವ್ವ ಯಮನಪ್ಪ ಮಂಟೂರ ದೂರು ದಾಖಲಿಸಿದ್ದರು. ಜ.೨೬ರಿಂದ ಬನಹಟ್ಟಿಯ ನಗರಸಭೆ ಎದುರಿನ ಖಾಸಗಿ ಯುಟ್ಯೂಬ್ ಕಚೇರಿಯಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದರು. ಈಚೆಗೆ ಮನೆಗೆ ನುಗ್ಗಿದ ಆರೋಪಿಗಳು ಮನೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದರು. ಮಾನಸಿಕ ಹಿಂಸೆಯಿಂದ ಪತಿ ಹನುಮಂತ ವಿಷ ಪದಾರ್ಥ ಸೇವಿಸಿ ವಾರದಿಂದ ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ದೂರಿನಲ್ಲಿ ಪತ್ನಿ ತಿಳಿಸಿದ್ದಾರೆ. ಪ್ರಕರಣದ ಮಾಹಿತಿ ಕಲೆ ಹಾಕಿದ ಪೊಲೀಸರು ಮಂಗಳವಾರ ಬೆಳಗ್ಗೆ ೧೦ ಆರೋಪಿಗಳನ್ನು ಬಂಧಿಸಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ಈ ಶಾಂತವೀರ ಹಾಗೂ ಪಿಎಸ್‌ಐ ಶಾಂತಾ ಹಳ್ಳಿ ತನಿಖೆ ಮುಂದುವರಿಸಿದ್ದಾರೆ.