ಸಾರಾಂಶ
ತಾಲೂಕಿನ ಹುಳಿಗೆರೆ ಗ್ರಾಪಂ ವ್ಯಾಪ್ತಿಯ ಕೊತ್ತಿಗೆರೆ ಗ್ರಾಮದಲ್ಲಿ ಶುದ್ದಗಂಗಾ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ
ಕನ್ನಡಪ್ರಭ ವಾರ್ತೆ ಕಡೂರುಕ್ಷೇತ್ರದಲ್ಲಿ ಶೀಘ್ರದಲ್ಲೇ 10 ಘಟಕಗಳ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಹಣ ನೀಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು. ಸೋಮವಾರ ತಾಲೂಕಿನ ಹುಳಿಗೆರೆ ಗ್ರಾಪಂ ವ್ಯಾಪ್ತಿಯ ಕೊತ್ತಿಗೆರೆ ಗ್ರಾಮದಲ್ಲಿ ಶುದ್ದಗಂಗಾ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ ಮಾತನಾಡಿದರು. ಕೊತ್ತಿಗೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಬೇಕು ಎಂಬುದು ಗ್ರಾಮದ ಜನರ ಬಹು ದಿನಗಳ ಬೇಡಿಕೆ. ಅದರಂತೆ ಶಾಸಕರ ಅನುದಾನದಲ್ಲಿ ₹12 ಲಕ್ಷ ವನ್ನು ಶುದ್ಧಗಂಗಾ ಘಟಕ ನಿರ್ಮಾಣಕ್ಕೆ ನೀಡಲಾಗಿದೆ. ಕೆ.ಆರ್.ಐ.ಡಿ.ಎಲ್.ಸಂಸ್ಥೆಯವರು ಗುಣಮಟ್ಟದ ಕಾಮಗಾರಿ ನಿರ್ವಹಿಸಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ದೃಷ್ಟಿಯಿಂದ ಶುದ್ಧಗಂಗಾ ಘಟಕಗಳ ನೀರನ್ನೇ ಕುಡಿಯಲು ಉಪಯೋಗಿಸುತ್ತಿರುವುದರಿಂದ ಶುದ್ಧಗಂಗಾ ಘಟಕಗಳಿಗೆ ಭಾರೀ ಬೇಡಿಕೆಯಿದೆ. ಹಾಗಾಗಿ ಈಗಾಗಲೆ 12 ಶುದ್ಧಗಂಗಾ ಘಟಕಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಇನ್ನು 10 ಘಟಕಗಳ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಹಣ ನೀಡಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ಜನರ ನಂಬಿಕೆ ಮತ್ತು ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಕ್ಷೇತ್ರದ ಜನತೆ ನಮ್ಮ ಮನೆ ಅಥವಾ ಜನಸೇವಕ ಕಚೇರಿಗೆ ಬಂದಂತಹ ಸಂದರ್ಭ ಅವರನ್ನು ಅತ್ಯಂತ ಗೌರವ ಮತ್ತು ವಿಶ್ವಾಸದಿಂದ ನಡೆಸಿಕೊಳ್ಳಲಾಗಿದೆ. ಸಾರ್ವ ಜನಿಕ ಕೆಲಸಗಳ ಜತೆಗೆ ಜನರ ವೈಯಕ್ತಿಕ ಸಮಸ್ಯೆಗಳಿಗೂ ಪರಿಹಾರ ದೊರಕಿಸುವ ಪ್ರಯತ್ನ ಮಾಡಲಾಗಿದೆ ಎಂದರು.ಯಗಟಿ ಹೋಬಳಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಮುಗಳಿಕಟ್ಟೆ ಮತ್ತು ಸಾಣೇಹಳ್ಳಿಯಲ್ಲಿ ತಲಾ ₹40 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಉಡುಗೆರೆಯಿಂದ ತಾಂಡ್ಯದ ವರೆಗೆ ₹8 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಕರೆಕಲ್ಲು ಹೊಳೆಯಿಂದ ಸೀತಾಪುರ ಗ್ರಾಮದ ಮೂಲಕ ಯಗಟಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ದಿಗೆ ₹2 ಕೋಟಿ ಗೂ ಅಧಿಕ ಅನುದಾನ ನೀಡಲಾಗಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಕೊತ್ತಿಗೆರೆ ಗ್ರಾಮಕ್ಕೆ ಶುದ್ಧಗಂಗಾ ಘಟಕದ ಅವಶ್ಯಕತೆಯನ್ನು ಮನಗಂಡು ಆನಂದ್ ತಮ್ಮ ಅನುದಾನದಲ್ಲಿ ಶುದ್ದಗಂಗಾ ಘಟಕ ಸ್ಥಾಪನೆಗೆ ಹಣ ನೀಡಿದ್ದಾರೆ. ಯಗಟಿ ಹೋಬಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು. ಹುಳಿಗೆರೆ ಗ್ರಾಪಂ ಅಧ್ಯಕ್ಷ ಕೊತ್ತಿಗೆರೆ ಚಂದ್ರಪ್ಪ, ಪಿಡಿಒ ಮಂಜಪ್ಪ, ಸದಸ್ಯರಾದ ಮಹಾಲಿಂಗಪ್ಪ, ಸ್ವರ್ಣ, ಸಾವಿತ್ರಮ್ಮ, ಸಂತೋಷ್, ಮುಖಂಡರಾದ ತಿಪ್ಪೇಶಪ್ಪ, ತಮ್ಮಯ್ಯ ಮತ್ತಿತರರಿದ್ದರು.7ಕೆಕೆಡಿಯು2. ಕಡೂರು ತಾಲೂಕಿನ ಕೊತ್ತಿಗೆರೆ ಗ್ರಾಮದಲ್ಲಿ ಶುದ್ದಗಂಗಾ ಘಟಕ ಸ್ಥಾಪನೆಗೆ ಶಾಸಕ ಕೆ.ಎಸ್.ಆನಂದ್ ಗುದ್ದಲಿ ಪೂಜೆ ನೆರವೇರಿಸಿದರು.