ಸಾರಾಂಶ
ಹಿಂದೆ ನಾನು ಶಾಸಕನಿದ್ದಾಗ ₹1500 ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಿದ್ದೆ. ಈಗ ಸಚಿವನಾಗಿದ್ದು, ಕ್ಷೇತ್ರಕ್ಕೆ ₹10 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದೇನೆ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.
ಭಟ್ಕಳ: ಗ್ರಾಮಾಂತರ ಜನರ ಸಮಸ್ಯೆ ಆಲಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸುತ್ತಿದ್ದೇನೆ. ಇಂತಹ ಜನಸ್ಪಂದನ ಸಭೆಯಿಂದ ಜನತೆಗೆ ಅನುಕೂಲವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.
ತಾಲೂಕಿನ ಕೋಣಾರ ಗ್ರಾಮ ಪಂಚಾಯಿತಿ ಮಟ್ಟದ ಜನಸ್ಪಂದನ ಸಭೆ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಜನರು ಯಾವುದೇ ರೀತಿಯ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತರುವ ಕೆಲಸ ಮಾಡಿ. ನಾನು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷಿಸುವುದಿಲ್ಲ ಎಂದರು.ಹಿಂದೆ ನಾನು ಶಾಸಕನಿದ್ದಾಗ ₹1500 ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಿದ್ದೆ. ಈಗ ಸಚಿವನಾಗಿದ್ದು, ಕ್ಷೇತ್ರಕ್ಕೆ ₹10 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದೇನೆ. ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಅಭಿವೃದ್ಧಿ ಕೆಲಸಗಳು ನಿಂತಿದೆ ಎಂದು ವಿರೋದ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಯಿಂದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಯ ಸಮರ್ಪಕ ಅನುಷ್ಠಾನದ ಜತೆಗೆ ರಸ್ತೆ, ಮನೆ, ಬಾವಿ ಸೇರಿದಂತೆ ಅಗತ್ಯ ಅಭಿವೃದ್ಧಿ ಕೆಲಸಗಳಿಗೂ ಅನುದಾನ ನೀಡುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸುವುದರಿಂದ ಆ ಭಾಗದ ಸಮಸ್ಯೆ ತಿಳಿದು ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.ಗ್ರಾಮದ ಖಂಡ್ಕ ಸೇರಿದಂತೆ ವಿವಿಧ ಕಡೆ ಅಗತ್ಯವಿರುವ ಸೇತುವೆ, ರಸ್ತೆ ಕಾಮಗಾರಿ, ಕೋಣಾರ ಶಾಲೆಗೆ ನೂತನ ಕಟ್ಟಡ ಮಾಡಿಕೊಡುವಂತೆ ಜನರು ಸಚಿವರಲ್ಲಿ ಮನವಿ ಮಾಡಿದರು.
ಕೋಣಾರ ಗುಡ್ಡದ ಮೇಲಿರುವ ಪಾಳು ಬಾವಿಯಲ್ಲಿ ಕೋಳಿ ಮತ್ತಿತರ ತ್ಯಾಜ್ಯ ಎಸೆಯುವುದರಿಂದ ಗ್ರಾಮದ ಕುಡಿಯುವ ನೀರಿನ ಬಾವಿಗೆ ಕೊಳಕು ನೀರು ಸೇರಿ ಬಾವಿಯ ನೀರು ಕುಡಿಯದಾಗಿದ್ದು, ಸಮಸ್ಯೆ ಆದಷ್ಟು ಬೇಗ ಬಗೆಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.ಸಚಿವರಿಗೆ ಗ್ರಾಮಸ್ಥರು ವಿವಿಧ ಅಭಿವೃದ್ಧಿ ಕೆಲಸದ ಬಗ್ಗೆ ಮನವಿ ಸಲ್ಲಿಸಿದರು. ಸಚಿವರು ಕೋಣಾರದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಜನಾರ್ದನ ದೇವಡಿಗ, ತಾಪಂ ಮಾಜಿ ಸದಸ್ಯೆ ಜಯಲಕ್ಷ್ಮೀ ಗೊಂಡ, ವೆಂಕಟ್ರಮಣ ಹೆಬ್ಬಾರ, ಊರ ಪ್ರಮುಖರು ಮುಂತಾದವರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ನಿರೂಪಿಸಿ, ವಂದಿಸಿದರು.