ಸಾರಾಂಶ
- ಕ್ಷೇತ್ರ ವಿರುದ್ಧ ಷಡ್ಯಂತ್ರ ಹಿನ್ನೆಲೆ ಪ್ರಕರಣ ಎನ್ಐಎ ತನಿಖೆಗೊಪ್ಪಿಸಲು ಒತ್ತಾಯ
- - - - ಧರ್ಮಸ್ಥಳ ವಿರುದ್ಧ ಅಪಪ್ರಚಾರ ಕುತಂತ್ರಕ್ಕೆ ವಿದೇಶಿ ಫಂಡ್ ಬಂದಿರುವ ಶಂಕೆ- ಭಾನು ಅವರ ಪುಸ್ತಕಕ್ಕೆ ಪ್ರಶಸ್ತಿ ಬರಲು ಕಾರಣರಾದ ದೀಪಾ ಭಾಸ್ತಿಗೂ ಆಹ್ವಾನಿಸಬೇಕಾಗಿತ್ತು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಧರ್ಮದ ಉಳಿವಿಗಾಗಿ ಸೆ.1ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದು, ದಾವಣಗೆರೆ ಜಿಲ್ಲೆಯಿಂದ 10 ಸಾವಿರಕ್ಕೂ ಅಧಿಕ ಜನರು ಶ್ರೀಕ್ಷೇತ್ರಕ್ಕೆ ತೆರಳಲಿದ್ದೇವೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಕೆಲವರು, ಅದರಲ್ಲೂ ಕಾಂಗ್ರೆಸ್ಸಿನ ನಾಯಕರು ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದ 224 ಕ್ಷೇತ್ರ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಇದೀಗ 2ನೇ ಹಂತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೂಚನೆಯಂತೆ ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.
ಸೆ.1ರ ಮಧ್ಯಾಹ್ನ 2 ಗಂಟೆಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಮಾವೇಶ ನಡೆಸಲಾಗುವುದು. ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.ಕಾಂಗ್ರೆಸ್ ಸರ್ಕಾರ ಧರ್ಮಸ್ಥಳ ಕ್ಷೇತ್ರವನ್ನು ಅಪವಿತ್ರಗೊಳಿಸಲು ಹೊರಟಿತ್ತು. ಈ ಸರ್ಕಾರಕ್ಕೆ ಶ್ರೀ ಮಂಜುನಾಥ ಸ್ವಾಮಿ ಶಾಪ ತಟ್ಟಲಿದೆ. ಷಡ್ಯಂತ್ರದಲ್ಲಿ ತಮಿಳುನಾಡಿನ ಕಾಂಗ್ರೆಸ್ ಸಂಸದ ಸೆಂಥಿಲ್ ಕೈವಾಡವಿದೆ. ಮಹೇಶ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣನವರ್, ಸುಜಾತ ಭಟ್ ಇತರರು ಪಾತ್ರದಾರರಷ್ಟೇ. ಈ ಎಲ್ಲರ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಲು ಇಡೀ ಪ್ರಕರಣವನ್ನು ಎನ್ಐಎ ತನಿಖೆಗೊಪ್ಪಿಸಬೇಕು ಎಂದು ಆಗ್ರಹಿಸಿದರು.
ವಿದೇಶಿ ಫಂಡ್ ಶಂಕೆ:ಬುರುಡೆ ಚನ್ನಯ್ಯನ ಮಾತುಕೇಳಿ ಸರ್ಕಾರ ಎಸ್ಐಟಿ ರಚಿಸಿದ್ದು ಸರಿಯಲ್ಲ. ಆತನ ಪೂರ್ವಾಪರ ಪರಿಶೀಲಿಸಬೇಕಾಗಿತ್ತು. ಎಲ್ಲಿನವನು, ಎಲ್ಲಿಂದ ಬಂದಿದ್ದಾನೆ, ಆತನ ಮಾತಿನಲ್ಲಿ ಎಷ್ಟು ಸತ್ಯವಿದೆಯೆಂಬ ಬಗ್ಗೆಯೂ ಆಲೋಚನೆ ಮಾಡಬೇಕಾಗಿತ್ತು. ಧರ್ಮಸ್ಥಳದ ವಿರುದ್ಧದ ಅಪಪ್ರಚಾರದ ಹಿಂದೆ ದೊಡ್ಡ ಷಡ್ಯಂತ್ರದ ಜೊತೆಗೆ ವಿದೇಶಿ ಫಂಡ್ ಸಹ ಬಂದಿರುವ ಶಂಕೆ ಇದೆ ಎಂದು ಟೀಕಿಸಿದರು.
ದೀಪಾ ಭಾಸ್ತಿಗೂ ಆಹ್ವಾನಿಸಬೇಕಿತ್ತು:ಮೈಸೂರು ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ರಾಜ್ಯ ಸರ್ಕಾರಕ್ಕೆ ಇಂತಹದ್ದೊಂದು ಪ್ರಶಸ್ತಿ ಬರಲು, ಭಾನು ಅವರ ಪುಸ್ತಕಕ್ಕೆ ಪ್ರಶಸ್ತಿ ಬರಲು ಕಾರಣರಾದ ದೀಪಾ ಭಾಸ್ತಿಗೂ ಆಹ್ವಾನಿಸಬೇಕಾಗಿತ್ತು. ಮೈಸೂರು ದಸರಾ ಉದ್ಘಾಟನೆ ಅಲ್ಲಿನ ವಿಧಿ ವಿಧಾನ, ಪರಂಪರೆ, ಪದ್ಧತಿಯಂತೆ ನಡೆಯಬೇಕು ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿಕೆ ಖಂಡಿಸುತ್ತೇವೆ. ಕಪಾಲಿ ಬೆಟ್ಟದಲ್ಲೇ 10 ಎಕರೆ ಜಾಗ ನೀಡಲು ಹೊರಟಿದ್ದ ಡಿ.ಕೆ.ಶಿವಕುಮಾರ ಮತ್ತು ಕಾಂಗ್ರೆಸ್ಸಿಗರು ಓಟು ಬ್ಯಾಂಕ್‌ಗಾಗಿ ಹೀಗೆಲ್ಲಾ ಹೇಳಿಕೆ ನೀಡುವುದು ಸರಿಯಲ್ಲ ಎಂದು ರೇಣುಕಾಚಾರ್ಯ ಆಕ್ಷೇಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಚಂದ್ರಶೇಖರ ಪೂಜಾರ, ಮಾಡಾಳ ಮಲ್ಲಿಕಾರ್ಜುನ, ಧನಂಜಯ ಕಡ್ಲೇಬಾಳ್, ಅನಿಲಕುಮಾರ ನಾಯ್ಕ, ಆರ್.ಎಲ್. ಶಿವಪ್ರಕಾಶ, ತಾರೇಶ ನಾಯ್ಕ, ರಾಜು ವೀರಣ್ಣ, ಪ್ರವೀಣ ಜಾಧವ್ ಇತರರು ಇದ್ದರು.
- - -(ಬಾಕ್ಸ್) * ಡಿಜೆ ಬಳಸಿ, ನಿಮ್ಮೊಂದಿಗೆ ನಾವಿದ್ದೇವೆ: ರೇಣುಕಾಚಾರ್ಯ - ದಾವಣಗೆರೆಯಲ್ಲಿ ಡಿಜೆ ಬಳಕೆಗೆ ಜಿಲ್ಲಾಡಳಿತ ನಿರ್ಬಂಧಕ್ಕೆ ಮತ್ತೆ ಆಕ್ಷೇಪ ದಾವಣಗೆರೆ: ಗಣೇಶೋತ್ಸವದಲ್ಲಿ ಡಿಜೆ ಸೌಂಡ್ಸ್ ಬಳಸುವುದಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು ಸರಿಯಲ್ಲ. ಡಿಜೆ ಸೌಂಡ್ ಬಳಸಲು ಸಂಪೂರ್ಣ ನಿಷೇಧ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದದರು.
ಸುಪ್ರೀಂ ಕೋರ್ಟ್ ಸಹ ಡಿ.ಜೆ.ಗೆ ಅವಕಾಶ ಕಲ್ಪಿಸಿದೆ. ನ್ಯಾಯಾಲಯದ ಷರತ್ತುಗಳನ್ನು ಪಾಲಿಸಿ, ಡಿಜೆ ಸಿಸ್ಟಂ ಬಳಸಲು ದಾವಣಗೆರೆ ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕು. ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಹಾವೇರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಡಿಜೆ ಸೌಂಡ್ಸ್ ಬಳಸಲು ಅವಕಾಶ ನೀಡಲಾಗಿದೆ. ಆದರೆ, ದಾವಣಗೆರೆ ಜಿಲ್ಲೆಯಲ್ಲೇ ನಿಷೇಧಿಸಲಾಗಿದೆ. ಇದನ್ನೇ ನೆಪ ಮಾಡಿಕೊಂಡು, ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದರು.ಚನ್ನಗಿರಿ ತಾಲೂಕಿನ ಬಸವಾಪಟ್ಟಣದಲ್ಲಿ ಬುಧವಾರ ರಾತ್ರಿ ಡಿಜೆ ಸೌಂಡ್ ಸಿಸ್ಟಂನ್ನು ಪೊಲೀಸರು ವಶಕ್ಕೆ ಪಡೆದಿದ್ದು ಖಂಡನೀಯ. ಹಿಂದೂ ಯುವಕರು ಡಿ.ಜೆ. ಸೌಂಡ್ ಬಳಸಿ ಶಕ್ತಿ ಪ್ರದರ್ಶಿಸಬೇಕು. ಶ್ರೀ ಗಣೇಶೋತ್ಸವ ಮೆರವಣಿಗೆಗೆ ಸಂಘಟಕರು, ಯುವಜನರು ಡಿಜೆ ಬಳಸಿ. ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಕ್ರಮಕ್ಕೆ ಹೆದರಬೇಡಿ. ನಾವು ನಿಮ್ಮೊಂದಿಗಿದ್ದೇವೆ. ನಾವು ಪಲಾಯನವಾದಿಗಳಲ್ಲ. ಜಿಲ್ಲಾಡಳಿತ 3ನೇ ದಿನದ ಗಣೇಶ ವಿಸರ್ಜನೆ ವೇಳೆ ಮೆರವಣಿಗೆಗೆ ಡಿಜೆ ಸೌಂಡ್ ಬಳಕೆಗೆ ಅನುಮತಿ ನೀಡಲಿ ಎಂದು ಒತ್ತಾಯಿಸಿದರು.
- - --28ಕೆಡಿವಿಜಿ4.ಜೆಪಿಜಿ:
ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.