ಕನ್ನಡಪ್ರಭ ವಾರ್ತೆ ಇಂಡಿ :
ತೀವ್ರ ಮಳೆ ಅಭಾವದಿಂದಾಗಿ ಜಿಲ್ಲೆಯಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು, ಭಾನುವಾರ ತಾಲೂಕಿನ ಹೊರ್ತಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಹಾನಿಗೀಡಾದ ಬೆಳೆಗಳನ್ನು ಪರಿಶೀಲಿಸಿ, ರೈತರ ಪರ ನಮ್ಮ ಸರ್ಕಾರವಿದೆ ಎಂದು ಭರವಸೆ ನೀಡಿದರು.ತಾಲೂಕಿನ ಹೊರ್ತಿ ಗ್ರಾಮದ ರೈತ ಮಾಳಪ್ಪ ಸೊನಕನಹಳ್ಳಿ ಅವರ 6 ಎಕರೆ ಜಮೀನಿನಲ್ಲಿ ಒಣಗುತ್ತಿರುವ ತೊಗರಿ ಬೆಳೆಯನ್ನು ಸಚಿವರು ಹಾಗೂ ಅಧಿಕಾರಿಗಳು ವೀಕ್ಷಿಸಿದರು. ಈ ವೇಳೆ ರೈತರ ಸಮಸ್ಯೆಯನ್ನು ಆಲಿಸಿದ ಸಚಿವರು, ರೈತರ ಕಷ್ಟ-ನಷ್ಟಗಳನ್ನು ತಿಳಿದುಕೊಳ್ಳಲು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ವೈಜ್ಞಾನಿಕ ವರದಿ ಸಿದ್ಧಪಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.ಶೇಕಡಾ ನೂರರಷ್ಟು ಹಾನಿ
ಇಂಡಿ ತಾಲೂಕಿನಲ್ಲಿ ಶೇ.100 ರಷ್ಟು ಬೆಳೆಗಳು ಹಾನಿಗೀಡಾಗಿವೆ. ಕಳೆದ ವಾರ ಕೆಲ ಕಡೆ ಭೇಟಿ ನೀಡಿದ ವೇಳೆ ಅಲ್ಲಿಯ ಬೆಳೆಗಳು ಶೇ.80ರಷ್ಟು ಹಾಳಾಗಿದ್ದವು. ಈಗ ಶೇ.20 ರಷ್ಟು ಹಾನಿಯಾಗಿವೆ. ಹಾಗಾಗಿ, ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ ಎಂದು ಸಚಿವರು ತಿಳಿಸಿದರು.ರೈತರ ಸಮಸ್ಯೆಯನ್ನು ಖುದ್ದಾಗಿ ಅನುಭವಿಸಿದೆ. ಅವರೆಲ್ಲ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಸತ್ಯ ಅರಿತಿರುವ ನಮ್ಮ ಸರ್ಕಾರ ರೈತರ ನೆರವಿಗೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಜಮೀನುಗಳಲ್ಲಿ ತೇವಾಂಶವಿಲ್ಲ. ಒಂದು ಫೀಟ್ ಬೆಳೆ ಇದೆ. ಹಸಿ ಮಳೆಯಾಗದೇ ಇರುವುದರಿಂದ ಸಮಸ್ಯೆಯಾಗಿದೆ. ತೇವಾಂಶವಿಲ್ಲದೇ ಬೆಳೆ ಒಣಗಿವೆ. ನೀರು ಜಾಸ್ತಿ ಇಂಗದೇ ಬೆಳೆ ಬೆಳವಣಿಗೆ ಆಗಿಲ್ಲ. ಜಿಲ್ಲೆಯ ಎಲ್ಲ ಭಾಗದಲ್ಲೂ ಈ ಸಮಸ್ಯೆಯಿದೆ. ನಿಮ್ಮ ಜೊತೆ ನಾವಿದ್ದೇವೆ. ಮಳೆಯಾಧಾರಿತ ಬೆಳೆ ಬೆಳವಣಿಗೆ ಕುಂಠಿತವಾಗಿವೆ. ಈ ಸಮಸ್ಯೆಯನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. ಸರ್ಕಾರಕ್ಕೆ ನಿಮ್ಮ ಸಮಸ್ಯೆ ತಿಳಿದಿದೆ. ಸಿಎಂಗೆ ಹಾಗೂ ಕೇಂದ್ರ ಸರ್ಕಾರಕ್ಕೆ ನಾನು ಸೇರಿದಂತೆ ಈ ಭಾಗದ ಶಾಸಕರು ಸೇರಿ ಮನವಿ ಮಾಡಿ, ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ರಿಷಿ ಆನಂದ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ರಾಮ ಬರಗಿಮಠ, ತಾಪಂ ಇಒ ಮಹಾದೇವಪ್ಪ ಏವೂರ ಸೇರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.------
ಕೋಟ್‌ಇಂಡಿ ತಾಲೂಕಿನಲ್ಲಿ 42 ಸಾವಿರ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕನಿಷ್ಠ ಪ್ರಮಾಣದ ಬಿತ್ತನೆಯಾಗಿದ್ದು, ಮುಂಗಾರು ಮಳೆಯ ಸಕಾಲದಲ್ಲಿ ಬಾರದೇ ಇರುವುದರಿಂದ ರೈತರು ತೀವ್ರ ಸಮಸ್ಯೆಯಲ್ಲಿದ್ದಾರೆ. ಕೃಷಿ ಜಮೀನುಗಳಿಗೆ ನೇರ ಭೇಟಿ ನೀಡಿ ಬೆಳೆ ಬೆಳವಣಿಗೆ ನೈಜ ಚಿತ್ರಣ ಪಡೆಯುವುದರ ಜೊತೆಗೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆಯ ಕುರಿತು ಪರಿಶೀಲಿಸಲಾಗುತ್ತಿದೆ.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು