ಸಾರಾಂಶ
ಶಿಗ್ಗಾಂವಿ: ಶಿಗ್ಗಾಂವಿ ಕ್ಷೇತ್ರದ ನೀರಾವರಿ ಕಾಮಗಾರಿಗೆ ₹೧೦೦ ಕೋಟಿ ಅನುದಾನ ಮಂಜೂರಾಗಿದ್ದು, ₹೩೦ ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಯಾಸಿರ್ ಅಹ್ಮದ್‌ಖಾನ್ ಪಠಾಣ ತಿಳಿಸಿದರು.ತಾಲೂಕಿನ ತಡಸ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಆಡಳಿತದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಣ್ಣಿಹಳ್ಳ ಅಭಿವೃದ್ಧಿಗೆ ಮನವಿ ಬಂದಿದ್ದು, ಕೆರೆಗಳ ಅಭಿವೃದ್ಧಿಗೆ ₹೧೦ ಕೋಟಿ ಅನುದಾನ ಮಂಜೂರಾಗಿದೆ ಎಂದರು.ಶಿಕ್ಷಣ ಎಷ್ಟು ಮುಖ್ಯವೋ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ. ತಡಸ, ಬಂಕಾಪುರ, ನಾಗನೂರು, ಮೋತಿತಲಾಬ ಸೇರಿದಂತೆ ಐದು ಸಾವಿರ ಜನಸಂಖ್ಯೆ ಇರುವ ೧೦ ಗ್ರಾಮಗಳ ಕೆರೆಗಳನ್ನು ಗುರುತಿಸಲಾಗಿದ್ದು, ಕೆರೆಗಳನ್ನು ಸುಂದರ ತಾಣವಾಗಿಸಲು ಒತ್ತು ನೀಡಲಾಗಿದೆ ಹಾಗೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು. ಜೋಂಡಲಗಟ್ಟಿ ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ವಿದ್ಯುತ್ ಸಂಪರ್ಕ ಇಲ್ಲ. ರಾತ್ರಿ ಕಾಡುಪ್ರಾಣಿಗಳು ಮನೆ ಬಾಗಿಲಿಗೆ ಬರುತ್ತಿವೆ. ಕಳೆದ ೭೮ ವರ್ಷಗಳಿಂದ ವಾಸವಾಗಿರುವ ಸಾರ್ವಜನಿಕರಿಗೆ ಪಟ್ಟಾ ಇಲ್ಲದ ಕಾರಣ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇದು ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವ ಕೆಲಸವಾಗಿದೆ. ಆದಷ್ಟು ಶೀಘ್ರದಲ್ಲೇ ಜೊಂಡಲಗಟ್ಟಿ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವ ಕೆಲಸವಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊಂಡಲಗಟ್ಟಿ, ಮೂಕಬಸರಿಕಟ್ಟಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಉತಾರ ಇಲ್ಲದ ಸುಮಾರು ೧೫ ಸಾವಿರ ಹಾಗೂ ಶಿಗ್ಗಾವಿ, ಬಂಕಾಪುರ ಹಾಗೂ ಸವಣೂರ ಪುರಸಭೆ ವ್ಯಾಪ್ತಿಯಲ್ಲಿ ಏಳರಿಂದ ಎಂಟು ಸಾವಿರ ಮನೆಗಳಿವೆ. ಮೂರು ದಿನಗಳ ವಿಶೇಷ ಶಿಬಿರ ಆಯೋಜನೆ ಮೂಲಕ ಉತಾರ ಇಲ್ಲದ ಮನೆಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು. ಅಕ್ರಮ ಮನೆಗಳನ್ನು ಸಕ್ರಮ ಮಾಡಿ ಉತಾರ ನೀಡುವ ಕೆಲಸವನ್ನು ಆಯಾ ಅಧಿಕಾರಿಗಳು ಮಾಡಬೇಕು ಎಂದರು.ದುಂಢಶಿ ಹಾಗೂ ತಡಸ ಗ್ರಾಮದಲ್ಲಿ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಇಂತಹ ಜಮೀನುಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಲಾಗುತ್ತಿದೆ. ಇವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಮನಸ್ವಿನಿ, ವೃದ್ಧಾಪ್ಯವೇತನ, ವಿಧವಾ, ರೈತ ವಿಧವಾ ಸೇರಿದಂತೆ ವಿವಿಧ ಮಾಸಾಶನ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಕಾರ್ಮಿಕ ಇಲಾಖೆಯಿಂದ ಹೆಚ್ಚು ಅಂಕ ಪಡೆದ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ಹಾಗೂ ಕಾರ್ಮಿಕರಿಗೆ ವೆಲ್ಡಿಂಗ್ ಕಿಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಶೇಖಪ್ಪ ಮಣಕಟ್ಟಿ, ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಗ್ರಾಪಂ ಅಧ್ಯಕ್ಷೆ ರಜೀಯಾ ಅರಳಿಕಟ್ಟಿ, ಉಪಾಧ್ಯಕ್ಷ ಪ್ರಭು ನಿಂಜಪ್ಪನವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ತಹಸೀಲ್ದಾರ್ ರವಿ ಕೊರವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ ಮಣ್ಣವಡ್ಡರ ಇತರರು ಇದ್ದರು. ೧೭೫ ಅರ್ಜಿಗಳು ಸಲ್ಲಿಕೆವಿದ್ಯುತ್ ಕಂಬ ಸ್ಥಳಾಂತರ, ಮನೆಗಳ ಪಟ್ಟಾ, ಅರಣ್ಯ ಇಲಾಖೆ, ದಿನಗೂಲಿ ನೌಕರರ ವೇತನ ವಿಳಂಬ, ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ದೂರು ಸಲ್ಲಿಸಿದರು. ಕಲ್ಯಾಣ ಜಮೀನಿಗೆ ದಾರಿ, ಹನಕನಹಳ್ಳಿ ಗ್ರಾಮಸ್ಥರಿಂದ ಮತಗಟ್ಟೆ ಬೇಡಿಕೆ, ಶಿಗ್ಗಾಂವಿ ಏತ ನೀರಾವರಿ ಯೋಜನೆಗೆ ಭೂಮಿ ಸ್ವಾಧೀನ ಪರಿಹಾರ, ಮನೆಗಳ ನಿರ್ಮಾಣಕ್ಕೆ ಅನುದಾನ ವಿಳಂಬ, ವಿವಿಧ ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಬೇಡಿಕೆ ಸೇರಿದಂತೆ ೧೭೫ ಅರ್ಜಿಗಳು ಸಲ್ಲಿಕೆಯಾಗಿದ್ದವು.ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ..ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ನಾವು ಜನಪ್ರತಿನಿಧಿಗಳು ಸಮನ್ವಯ ಮಾಡುತ್ತೇವೆ. ಯಾವುದೇ ಅಧಿಕಾರಿಗಳು ಬೇಸರ ಮಾಡಿಕೊಳ್ಳಬಾರದು. ನಾವು- ನೀವು ಜನರ ಸೇವಕರು. ಸಾರ್ವಜನಿಕರ ಕೆಲಸ ಮಾಡಲು ಬಂದಿದ್ದೇವೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಶಾಸಕ ಯಾಸಿರ್ ಅಹ್ಮದ್‌ಖಾನ್ ಪಠಾಣ ಸಲಹೆ ನೀಡಿದರು.