ಸಾರಾಂಶ
ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಕಾರಟಗಿತುಂಗಭದ್ರಾ ಜಲಾಶಯ ನಿರ್ವಹಣೆಗೆ ರಾಜ್ಯ ಸರ್ಕಾರ ₹೧೦೦ ಕೋಟಿ ಅನುದಾನ ಬಿಡುಗಡೆ ಮಾಡಬೇಕು ಮತ್ತು ನೀರು ಪೋಲಾಗದಂತೆ ತ್ವರಿತವಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಇಲ್ಲಿನ ನವಲಿ ವೃತ್ತದ ಬಸ್‌ನಿಲ್ದಾಣದ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ಬತ್ತದ ಕಣಜದಿಂದ ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರಾಜ್ಯಸ್ವಃ ಸಂಗ್ರಹವಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಅಣೆಕಟ್ಟೆ ನಿರ್ವಹಣೆಗೆ ಸೂಕ್ತ ಅನುದಾನ ನೀಡದೆ ನಿರ್ಲಕ್ಷ್ಯ ವಹಿಸಿದ್ದೇ ಇಂದು ಗೇಟ್ ಚೈನ್ ತುಂಡಾಗಲು ಮುಖ್ಯಕಾರಣ. ಈ ಬಾರಿ ಎರಡನೇ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಭಾರಿ ನಿರಾಶೆಯಾಗಿದ್ದು, ಮೊದಲ ಬೆಳೆಗೆ ಹಲವು ಕಡೆ ಇನ್ನೂ ಭತ್ತ ನಾಟಿ ಸಹ ಆಗಿಲ್ಲ, ಅಣೆಕಟ್ಟೆಯ ಕ್ರಸ್ಟ್‌ಗೇಟ್ ಮುರಿದು ಹೋಗಿದ್ದಕ್ಕೆ ನಾಲ್ಕು ಜಿಲ್ಲೆಯ ರೈತರು ಆತಂಕದಲ್ಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮೊದಲು ನೀರು ಪೋಲಾಗುವುದನ್ನು ತಡೆಗಟ್ಟುವ ಕೆಲಸ ಮಾಡಬೇಕು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಕ್ತ ತನಿಖೆ ನಡೆಸಬೇಕು ಎಂದು ರೈತರು ಆಗ್ರಹಿಸಿದರು.ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನಿ, ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯನವರು 13ರಂದು ಭೇಟಿ ನೀಡುತ್ತಿದ್ದು, ಮೊದಲು ಅನುದಾನ ಬಿಡುಗಡೆ ಮಾಡಿದ ನಂತರ ಇಲ್ಲಿಗೆ ಭೇಟಿ ಕೊಡಬೇಕು, ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿ ಹಿಟ್ನಾಳ ಗೇಟ್ ಬಳಿ ರೈತ ಸಂಘದಿಂದ ಪ್ರತಿಭಟನೆ ನಡೆಸಿ ಕಪ್ಪು ಬಾವುಟ ಹಾರಿಸಲಾಗುವುದು ಎಂದು ಎಚ್ಚರಿಸಿದರು.
ಮೊದಲು ೧೯ನೇ ಗೇಟ್ ದುರಸ್ತಿ ಮಾಡಿದ ಬಳಿಕ ಉಳಿದ ಎಲ್ಲ ಗೇಟ್‌ಗಳನ್ನು ಸಹ ಸರಿಪಡಿಸಬೇಕು, ಅಣೆಕಟ್ಟೆಗೆ ಧಕ್ಕೆಯಾದರೆ ರಾಜ್ಯ ಸರ್ಕಾರವೇ ಇದರ ಹೊಣೆ ಹೊರಬೇಕಾಗುತ್ತದೆ ಎಂದ ಹೇಳಿದರು.ಈ ವೇಳೆ ತಹಸೀಲ್ದಾರ್ ಮೂಲಕ ನೀರಾವರಿ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹನುಮಂತಪ್ಪ ನಾಯಕ್, ನಾಗರಾಜ್, ಶ್ರೀಕಾಂತ್, ಶರಣಪ್ಪ, ಮರಿಯಪ್ಪ ಸಾಲೋಣಿ, ಸಿದ್ದು ಪನ್ನಾಪುರ, ಭೀಮನಗೌಡ ಪನ್ನಾಪುರ, ವೀರನಗೌಡ, ರುದ್ರಗೌಡ, ಬಸನಗೌಡ ಸೇರಿದಂತೆ ಅನೇಕ ರೈತ ಮುಖಂಡರು ಇದ್ದರು.