ಅಂಜನಾದ್ರಿಗೆ ₹ 100 ಕೋಟಿ ಬರಲೇ ಇಲ್ಲ

| Published : Mar 07 2025, 12:51 AM IST

ಸಾರಾಂಶ

ಕಳೆದ ವರ್ಷ ರಾಜ್ಯ ಸರ್ಕಾರ ಮಂಡಿಸಿದ್ದ ಬಜೆಟ್‌ನಲ್ಲಿ ನಿರೀಕ್ಷೆ ಮೀರಿ ಘೋಷಣೆಯಾಗಿದ್ದ ಯೋಜನೆಗಳು ಜಾರಿಯಾಗಿದ್ದು ಅಷ್ಟಕಷ್ಟೇ. ಬಹುತೇಕ ಯೋಜನೆಗಳು ಘೋಷಣೆಯಾಗಿದ್ದನ್ನು ಹೊರತುಪಡಿಸಿದರೆ ನಂತರ ಅದರ ಜಾರಿ ಕುರಿತು ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಕೆಲವೊಂದು ಯೋಜನೆಗಳು ಜಾರಿಯ ಆರಂಭಿಕ ಹಂತದಲ್ಲಿವೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕಳೆದ ವರ್ಷ ರಾಜ್ಯ ಸರ್ಕಾರ ಮಂಡಿಸಿದ್ದ ಬಜೆಟ್‌ನಲ್ಲಿ ನಿರೀಕ್ಷೆ ಮೀರಿ ಘೋಷಣೆಯಾಗಿದ್ದ ಯೋಜನೆಗಳು ಜಾರಿಯಾಗಿದ್ದು ಅಷ್ಟಕಷ್ಟೇ. ಬಹುತೇಕ ಯೋಜನೆಗಳು ಘೋಷಣೆಯಾಗಿದ್ದನ್ನು ಹೊರತುಪಡಿಸಿದರೆ ನಂತರ ಅದರ ಜಾರಿ ಕುರಿತು ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಕೆಲವೊಂದು ಯೋಜನೆಗಳು ಜಾರಿಯ ಆರಂಭಿಕ ಹಂತದಲ್ಲಿವೆ.

ಕಳೆದ ಬಾರಿ ಬಜೆಟ್‌ನಲ್ಲಿ ಕೊಟ್ಟಿದ್ದನ್ನು ರಾಜ್ಯ ಸರ್ಕಾರ ಇದುವರೆಗೂ ಪರಿಪೂರ್ಣವಾಗಿ ಈಡೇರಿಸಿಲ್ಲ. ಈಗ ಮತ್ತೊಂದು ಬಜೆಟ್ ಸಹ ಬಂದಿದ್ದು, ಮತ್ತೆ ಅದೇ ನಿರೀಕ್ಷೆ ಎನ್ನುವಂತೆ ಆಗಿದೆ. ಯಲಬುರ್ಗಾ ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣಕ್ಕೆ ಘೋಷಿಸಿದ್ದು ₹ 9 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆಯೂ ಆಗಿದೆ. ಕಳೆದ ತಿಂಗಳು ನಿರ್ಮಾಣಕ್ಕೆ ಚಾಲನ ದೊರೆತಿದೆ.

ಕೆರೆ ನೀರು ಯೋಜನೆ ನನೆಗುದಿಗೆ:

ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೂ ಸಹ ನನೆಗುದಿಗೆ ಬಿದ್ದಿದೆ. ಕೇವಲ ಕೆರೆಗೆ ನೀರು ತುಂಬಿಸುವುದಲ್ಲ, ಹೊಸ ಕೆರೆ ನಿರ್ಮಿಸಿ ನೀರು ತುಂಬಿಸುವ ಯೋಜನೆ ಇದಾಗಿತ್ತು. ಈ ಯೋಜನೆಗೆ ಕಡಿಮೆ ದರದಲ್ಲಿ ಭೂಮಿ ನೀಡಲು ರೈತರು ಒಪ್ಪುತ್ತಿಲ್ಲ. ಎಕರೆಗೆ ₹ 10 ಲಕ್ಷ ಆಗುವುದಿಲ್ಲ. ಕನಿಷ್ಠ ₹ 20ರಿಂದ ₹ 30 ಲಕ್ಷ ನೀಡಬೇಕೆಂದು ಪಟ್ಟು ಹಿಡಿದ ಕಾರಣ ಯೋಜನೆಗೆ ಹಿನ್ನಡೆಯಾಗಿದೆ.

ಕುಕನೂರು, ಯಲಬುರ್ಗಾ ತಾಲೂಕಿನ ಕೆಲವೊಂದು ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ಯೋಜನೆಯೂ ಪ್ರಾರಂಭಿಸಿಲ್ಲ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಸ್ಥಾಪಿಸುವ ಯೋಜನೆ ಘೋಷಣೆಯಾಯಿತೇ ಹೊರತು, ಕಾರ್ಯಗತವಾಗಲೇ ಇಲ್ಲ.

ಕಳೆದ ವರ್ಷ ಅಂಜನಾದ್ರಿ ಬೆಟ್ಟದ ಸುತ್ತಮುತ್ತ ಪ್ರವಾಸಿ ಸೌಲಭ್ಯಕ್ಕಾಗಿ ₹ 100 ಕೋಟಿ ಘೋಷಿಸಲಾಗಿದೆ. ಈ ಹಿಂದೇ ಬಿಜೆಪಿ ಸರ್ಕಾರದ ಅವಧಿಯಲ್ಲೂ ₹ 120 ಕೋಟಿ ಘೋಷಿಸಲಾಗಿತ್ತು. ಆದರೆ, ಅದರ ಪೈಕಿ ₹ 25 ಕೋಟಿ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ ವರ್ಷ ಘೋಷಣೆ ಮಾಡಿದ್ದ ₹ 100 ಕೋಟಿ ಪೈಕಿ ₹ 32 ಕೋಟಿ ವೆಚ್ಚದ ಡಿಪಿಆರ್ ಮಾಡುವ ಕಾರ್ಯ ಈಗಷ್ಟೇ ನಡೆದಿದೆ.

ಬಜೆಟ್‌ನಲ್ಲಿ ಘೋಷಣೆಯಾಗಿರುವಂತೆ ಶ್ರೀಹುಲಿಗೆಮ್ಮ ದೇವಾಲಯದ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಆದರೆ, ಪ್ರಾಧಿಕಾರ ಸಂಪೂರ್ಣವಾಗಿ ಕಾರ್ಯಗತವಾಗುತ್ತಿಲ್ಲ. ದೇವಸ್ಥಾನದ ಖಾತೆಯಲ್ಲಿಯೇ ಇರುವ ₹ 75 ಕೋಟಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಮಾಡುವ ಮಾಸ್ಟರ್ ಪ್ಲಾನ್ ಸಹ ಜಾರಿಯಾಗುತ್ತಿಲ್ಲ. ನಗರದಲ್ಲಿರುವ ಮೆಡಿಕಲ್ ಕಾಲೇಜು ಅಧೀನದಲ್ಲಿ 450 ಹಾಸಿಗೆ ಆಸ್ಪತ್ರೆಯನ್ನು ನಿರ್ಮಿಸಿದ್ದು ಅದಕ್ಕೆ ಬೇಕಾಗಿರುವ ಪೂರಕ ಉಪಕರಣ ಮತ್ತು ಪೀಠೋಪಕರಣ ನೀಡುವ ಕುರಿತು ಘೋಷಿಸಲಾಗಿತ್ತು. ಇದಕ್ಕಾಗಿ ₹ 250 ಕೋಟಿ ನಿಗದಿ ಮಾಡಲಾಗಿದೆಯಾದರೂ ಅದು ಸಹ ಪರಿಪೂರ್ಣವಾಗಿ ಜಾರಿಯಾಗುತ್ತಲೇ ಇಲ್ಲ.

ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ವಿಟಿಯು ಸಹಯೋಗದಲ್ಲಿ ಜಿಟಿಟಿಸಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭವಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯ ಆಗಬೇಕಾಗಿದೆ. ಇದಲ್ಲದೆ ಜಿಲ್ಲೆಯಲ್ಲಿರುವ ಅನೇಕ ಏತನೀರಾವರಿ ಯೋಜನೆಗಳ, ರೈಸ್ ಪಾರ್ಕ್, ತೋಟಗಾರಿಕಾ ಪಾರ್ಕ್, ಜಾನಪದ ಲೋಕ, ಸಿಂಗಟಾಲೂರು ಏತನೀರಾವರಿ ಯೋಜನಗಳು ಬಹುವರ್ಷಗಳಿಂದ ಕುಂಟುತ್ತಾ ಸಾಗುತ್ತಲೇ ಇವೆಯೇ ಹೊರತು ಪೂರ್ಣಗೊಂಡು, ಸಾರ್ವಜನಿಕರಿಗೆ ಅನುಕೂಲವಾಗಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರ ಸ್ವಯಂ ಆಸಕ್ತಿಯಿಂದ 2023ರಲ್ಲಿಯೇ ಘೋಷಣೆಯಾದ ಜನಪದ ಲೋಕ ಸ್ಥಾಪಿಸಲು ಈಗಷ್ಟೇ ಭೂಮಿ ಗುರುತಿಸಲಾಗಿದ್ದು, ನಯಾಪೈಸೆ ಕಾಮಗಾರಿ ಪ್ರಾರಂಭವಾಗಿಲ್ಲ. ನವಲಿ ಸಮಾಂತರ ಜಲಾಶಯ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿಪಿಆರ್ ಮಾಡಲು ₹ 1000 ಕೋಟಿ ಘೋಷಿಸಿದರೂ ಕಾರ್ಯಗತವಾಗಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಘೋಷಣೆಗೆ ಮಾತ್ರ ಸೀಮಿತವಾಯಿತು. 14 ವರ್ಷದ ಹಿಂದೆ ಲೋಕಾರ್ಪಣೆಗೊಂಡಿರುವ ಸಿಂಗಟಾಲೂರು ಏತ ನೀರಾವರಿಯಿಂದ ಕಾಲುವೆ ನಿರ್ಮಿಸಿ ರೈತರ ಭೂಮಿಗೆ ನೀರು ಕೊಡಲು ಆಗುತ್ತಿಲ್ಲ.