ಸಾರಾಂಶ
ಹಾವೇರಿ: ನಗರದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಒಟ್ಟಾರೆ ಹಾವೇರಿ ನಗರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ನವ ಹಾವೇರಿ ನಿರ್ಮಾಣಕ್ಕೆ 100 ಕೋಟಿ ರು. ವಿಶೇಷ ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗುವುದು. ನಾನು ಹಾವೇರಿ ನಗರದ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.ನಗರದ ಜಿಲ್ಲಾ ಗುರುಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಕೆಯುಐಡಿಎಫ್‌ಸಿ ಹಾಗೂ ಹಾವೇರಿ ನಗರಸಭೆ ಸಹಯೋಗದಲ್ಲಿ 49.19 ಕೋಟಿ ರು. ಮೊತ್ತದ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಹಾಗೂ 1.02 ಕೋಟಿ ರು. ಮೊತ್ತದ ಕಾಮಗಾರಿಗೆ ಚಾಲನೆಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದಾರೆ. ಇಷ್ಟಕ್ಕೆ ಕೆಲಸ ಮುಗಿಯುವುದಿಲ್ಲ. ನಗರದಲ್ಲಿ ಉತ್ತಮ ರಸ್ತೆ, ರಿಂಗ್ ರೋಡ್ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ನನ್ನ ಅಧಿಕಾರ ಅವಧಿಯಲ್ಲಿ ಭೂ ವೀರಾಪುರ ಸಮೀಪದ 10 ಎಕರೆ ಜಮೀನು ಖರೀದಿಸುವ ಮೂಲಕ ಆಶ್ರಯ ಸಮಿತಿ ಹಸ್ತಾಂತರಿಸಲಾಗಿತ್ತು. 1112 ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. 558 ಫಲಾನುಭವಿಗೆ ಹಂಚಿಕೆ ಮಾಡಲಾಗಿದೆ. ಬರುವ ಮಾರ್ಚ್ ತಿಂಗಳೊಳಗೆ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ನಾಗೇಂದ್ರನಮಟ್ಟಿ ಜಿ ಪ್ಲಸ್ 1 ಮನೆಗಳನ್ನು 300 ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಅವರು ವಿವಿಧ ಕಾಮಗಾರಿಗಳ ಅನುಷ್ಠಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಲ್ಯಾಪ್‌ಟಾಪ್ ವಿತರಣೆ:ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾದ ಕಾರ್ಮಿಕರ ಮಕ್ಕಳು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಆರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ.ಹಿರೇಮಠ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ.ಮೈದೂರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕರಾದ ಮಮತಾ ಹೊಸಗೌಡ್ರ, ನಗರಸಭೆ ಸದಸ್ಯರಾದ ಮಂಜುನಾಥ ಬಿಷ್ಟಣ್ಣವರ, ರೇಣುಕಾ ಪುತ್ರನ್, ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ವಿ.ಗಾಜಿಗೌಡ್ರ, ನಗರಸಭೆ ವಿವಿಧ ಸದಸ್ಯರು, ನಾಮನಿರ್ದೇಶನ ಸದಸ್ಯರು, ಇತರರು ಇದ್ದರು. ಉಪ ವಿಭಾಗಾಧಿಕಾರಿ ಹಾಗೂ ಹಾವೇರಿ ನಗರಸಭೆ ಪ್ರಭಾರ ಆಯುಕ್ತ ಚೆನಪ್ಪ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು. ತಹಶೀಲ್ದಾರ ಶರಣಮ್ಮ ವಂದಿಸಿದರು. 4.50 ಕೋಟಿ ಅನುದಾನ: ನಗರದ ಅಕ್ಕಮಹಾದೇವಿ ಹೊಂಡದ ಅಭಿವೃದ್ಧಿಗೆ 4.50 ಕೋಟಿ ರು. ಮಂಜೂರಾಗಿದೆ. ಅಕ್ಕಮಹಾದೇವಿ ಮೂರ್ತಿ ಸ್ಥಾಪನೆ, ಸುಸಜ್ಜಿತ ಪಾತ್ ವೇ, ಫುಡ್‌ಕೋರ್ಟ್, ಮನರಂಜನೆ ವ್ಯವಸ್ಥೆಗೆ ಚಿಂತನೆ ಮಾಡಲಾಗಿದೆ. ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಅಭಿವೃದ್ಧಿಗೆ ಹಾಗೂ ಬಸವಣ್ಣನವರ ಮೂರ್ತಿ ಸ್ಥಾಪನೆಗೆ ಚಿಂತನೆ ಮಾಡಲಾಗಿದೆ. ಎಲ್ಲರೂ ಪಕ್ಷಬೇಧ ಮರೆತು ಹಾವೇರಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯೋಣ ಎಂದು ಶಾಸಕ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕರೆ ನೀಡಿದರು.ಕಾಮಗಾರಿಗಳು ಶೀಘ್ರ ಪೂರ್ಣ: ಹಾವೇರಿ ನಗರದ 24-7 ಕುಡಿಯುವ ನೀರಿನ ಯೋಜನೆ ಹಾಗೂ ಯುಜಿಡಿ ಕಾಮಗಾರಿಯನ್ನು ನನ್ನ ಅಧಿಕಾರ ಅವಧಿಯಲ್ಲಿ ಮುಗಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬೆಂಬಲ ನೀಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ನಡೆಸುವ ಮೂಲಕ ಎಲ್ಲ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಶಾಸಕ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.