ಮಿಶನ್ ಶಕ್ತಿಗಾಗಿ 100 ದಿನಗಳ ವಿಶೇಷ ಜಾಗೃತಿ

| Published : Jul 16 2024, 12:40 AM IST

ಮಿಶನ್ ಶಕ್ತಿಗಾಗಿ 100 ದಿನಗಳ ವಿಶೇಷ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ತಾಲೂಕಿನ ನರಸಾಪುರ ಗ್ರಾಮದ ಆಶ್ರಯ ಕಾಲನಿಯಲ್ಲಿರುವ 281ನೇ ಅಂಗನವಾಡಿ ಕೇಂದ್ರದಲ್ಲಿ ಮಿಶನ್ ಶಕ್ತಿಗಾಗಿ 100 ದಿನಗಳ ವಿಶೇಷ ಜಾಗೃತಿ ಹಾಗೂ ನೋಂದಣಿ ಕಾರ್ಯಕ್ರಮ ಜರುಗಿತು.

ಗದಗ: ತಾಲೂಕಿನ ನರಸಾಪುರ ಗ್ರಾಮದ ಆಶ್ರಯ ಕಾಲನಿಯಲ್ಲಿರುವ 281ನೇ ಅಂಗನವಾಡಿ ಕೇಂದ್ರದಲ್ಲಿ ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಮಿಶನ್ ಶಕ್ತಿಗಾಗಿ 100 ದಿನಗಳ ವಿಶೇಷ ಜಾಗೃತಿ ಹಾಗೂ ನೋಂದಣಿ ಕಾರ್ಯಕ್ರಮ ಜರುಗಿತು.

ಈ ವೇಳೆ ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಹನುಮಂತಪ್ಪ ಮ್ಯಾಳಾ ಮಾತನಾಡಿ, ಅಂಗನವಾಡಿ ವ್ಯಾಪ್ತಿಗೆ ಒಳಪಡುವ ವಿವಿಧ ಯೋಜನೆಗಳ ಫಲಾನುಭವಿಗಳ ಆಧಾರ್ ಸೀಡಿಂಗ್, ಸುಕನ್ಯಾ ಸಮೃದ್ಧಿ ಯೋಜನೆಯ ಕುರಿತು ಮಾಹಿತಿ ನೀಡಿದರು.

ಅಂಚೆ ಇಲಾಖೆ ಸಿಬ್ಬಂದಿ ಕವಿತಾ ರಡ್ಡೇರ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಇರುವ ಉಳಿತಾಯ ಯೋಜನೆಗಳ ಕುರಿತು ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಮೇಟಿ ಮಾತನಾಡಿ, 2005ರಲ್ಲಿ ಕೌಟುಂಬಿಕ ದೌರ್ಜನ್ಯ ಯೋಜನೆ ಜಾರಿಗೆ ಬಂದಿದ್ದು, ಕುಟುಂಬದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಉಂಟಾದಲ್ಲಿ ಇಲಾಖೆಗೆ ಆಗಮಿಸಿ ರಕ್ಷಣೆ ಪಡೆಯುವಂತೆ ತಿಳಿಸಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಖಾ ಮಲ್ಲಾಪುರ ಮಾತನಾಡಿ, ಇಲಾಖೆಯ ಮಾತೃವಂದನಾ, ಮಾತೃಪೂರ್ಣ ಯೋಜನೆ ಹಾಗೂ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಯೋಜನೆ, ಸ್ತ್ರೀ ಶಕ್ತಿ ಯೋಜನೆ ಕುರಿತು ವಿವರಿಸಿದರಲ್ಲದೇ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಂತೆ ತಿಳಿಸಿದರು.

ಆಶಾ ಕಾರ್ಯಕರ್ತೆಯರು ಮಾತನಾಡಿ, ಪ್ರತಿಯೊಬ್ಬರೂ ಮನೆಯಲ್ಲಿ ಹಾಗೂ ಮನೆಯ ಸುತ್ತಲಿನ ಖಾಲಿ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಲಾರ್ವಾ ಹುಳು ಉತ್ಪತ್ತಿಯಾಗದಂತೆ ಮುಂಜಾಗ್ರತೆ ವಹಿಸಿ ಡೆಂಘೀ ಜ್ವರ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಈ ವೇಳೆ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ, ಭಾರತೀಯ ನ್ಯಾಯ ಸಂಹಿತೆ ತರಬೇತಿ, ಮಕ್ಕಳ ಮತ್ತು ಮಹಿಳೆಯರ ಸಂಬಂಧಿತ ಕಾನೂನು ಅರಿವು, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಪೋಸ್ಟ್, ಬ್ಯಾಂಕ್‌ಗಳಲ್ಲಿ ಮಹಿಳಾ ಆಧಾರಿತ ಯೋಜನೆಗಳು, ಕೌಟುಂಬಿಕ ದೌರ್ಜನ್ಯ ತಡೆ, ವರದಕ್ಷಿಣೆ ನಿಷೇಧ, ಬಾಲ್ಯವಿವಾಹ ನಿಷೇಧ ಅರಿವು, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಕುರಿತು ಮಾಹಿತಿ ನೀಡಲಾಯಿತು.

ಅಂಗನವಾಡಿ ಶಿಕ್ಷಕಿ ಶೈಲಜಾ ಕೋಟೆಣ್ಣವರ, ಸಹಾಯಕಿ ಶರಣಪ್ಪ ಹಿರೇಮಠ, ಪಾಲಕರಾದ ಐಶ್ವರ್ಯ ಹಿರೇಮಠ, ಪವಿತ್ರಾ ಮಡಿವಾಳರ, ಅನಿತಾ ಶಿಗ್ಲಿ, ನಗೀನಾ ಅಣ್ಣಿಗೇರಿ ಸೇರಿ ಹಲವರಿದ್ದರು.