ಉತ್ತರ ಕರ್ನಾಟಕದ ಊಟದ ತಟ್ಟೆಯಲ್ಲಿ ರೊಟ್ಟಿಯೇ ಪ್ರಧಾನ. ರೊಟ್ಟಿ, ಪಲ್ಯ, ಚಟ್ನಿ ಇಲ್ಲದ ಊಟವನ್ನು ಈ ಭಾಗದ ಜನರು ಕಲ್ಪಿಸಿಕೊಳ್ಳುವುದೂ ಕಷ್ಟ. ಆದರೆ, ಜೋಳದ ರೊಟ್ಟಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಅಜೀಜಅಹ್ಮದ ಬಳಗಾನೂರಕನ್ನಡಪ್ರಭ ವಾರ್ತೆ ಹುಬ್ಬಳ್ಳಿ:ಉತ್ತರ ಕರ್ನಾಟಕದ ಊಟದ ತಟ್ಟೆಯಲ್ಲಿ ರೊಟ್ಟಿಯೇ ಪ್ರಧಾನ. ರೊಟ್ಟಿ, ಪಲ್ಯ, ಚಟ್ನಿ ಇಲ್ಲದ ಊಟವನ್ನು ಈ ಭಾಗದ ಜನರು ಕಲ್ಪಿಸಿಕೊಳ್ಳುವುದೂ ಕಷ್ಟ. ಆದರೆ, ಜೋಳದ ರೊಟ್ಟಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ.ಕೆಲವೇ ದಿನಗಳ ಹಿಂದೆ ಕ್ವಿಂಟಲ್ಗೆ ₹5ರಿಂದ ₹ 6,000ದ ಆಸುಪಾಸಿನಲ್ಲಿದ್ದ ಜೋಳದ ಧಾರಣೆ ಈಗ ₹9ರಿಂದ ₹10 ಸಾವಿರಕ್ಕೆ ಜಿಗಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹100ರ ಗಡಿ ದಾಟಿದೆ. ಪರಿಣಾಮ, ರೊಟ್ಟಿ ಖಾನಾವಳಿಗಳ ನಿರ್ವಹಣೆಯೇ ದುಸ್ತರವಾಗಿದ್ದು, ಮುಂದಿನ ದಿನಗಳಲ್ಲಿ ಊಟದ ದರವೂ ಏರಿಕೆಯಾಗುವ ಆತಂಕ ಎದುರಾಗಿದೆ.ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜೋಳದ ರೊಟ್ಟಿ ಜನರ ದೈನಂದಿನ ಆಹಾರದ ಪ್ರಮುಖ ಭಾಗ. ಹೀಗಾಗಿ ಜೋಳದ ಬೆಲೆ ಏರಿಕೆ ಕೇವಲ ಮಾರುಕಟ್ಟೆಯ ಸಮಸ್ಯೆಯಾಗಿ ಉಳಿದಿಲ್ಲ. ಪ್ರತಿದಿನ ನೂರಾರು ರೊಟ್ಟಿಗಳನ್ನು ತಯಾರಿಸುವ ಖಾನಾವಳಿಗಳಿಂದ ಹಿಡಿದು ಹೊರಗಡೆ ಊಟವನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾಮಾನ್ಯ ಗ್ರಾಹಕರಿಗೂ ಇದರ ಬಿಸಿ ತಟ್ಟುವಂತಾಗಿದೆ.ಉತ್ಪಾದನೆ ಕುಸಿತ-ಬೇಡಿಕೆ ಹೆಚ್ಚಳ:ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಕೊರತೆ, ಬರದ ಪರಿಸ್ಥಿತಿಯಿಂದ ಜೋಳದ ಇಳುವರಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮತ್ತೊಂದೆಡೆ, ರೈತರು ಜೋಳ, ಗೋಧಿಯಂತಹ ಆಹಾರ ಧಾನ್ಯಗಳ ಬದಲಿಗೆ ಕಡಲೆ, ಈರುಳ್ಳಿ, ಮೆಣಸಿನಕಾಯಿ, ಗೋವಿನಜೋಳ ಹಾಗೂ ಸೂರ್ಯಕಾಂತಿಯಂತಹ ವಾಣಿಜ್ಯ ಬೆಳೆಗಳತ್ತ ಒಲವು ತೋರುತ್ತಿದ್ದಾರೆ. ಇದರಿಂದ ಜೋಳದ ಬಿತ್ತನೆ ಪ್ರದೇಶವೂ ಕುಸಿದಿದೆ.ವಿಶೇಷವಾಗಿ ರೊಟ್ಟಿ ತಯಾರಿಕೆಗೆ ಬೇಡಿಕೆಯಿರುವ ವಿಜಯಪುರ-ಬಾಗಲಕೋಟೆ ಭಾಗದಲ್ಲಿ ಬೆಳೆಯುವ ಜನಪ್ರೀಯ ಮಾಲ್ದಂಡಿ ಮತ್ತು ಧಾರವಾಡ, ವಿಜಯಪುರ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಬೆಳೆಯುವ ಗುಂಡು ತೆನೆ ಜೋಳದ ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದು ಬೆಲೆ ಏರಿಕೆಗೆ ಮತ್ತಷ್ಟು ಪುಷ್ಟಿ ನೀಡಿದೆ.ಲೆಕ್ಕಾಚಾರ ಏರುಪೇರು:ಜೋಳದ ಜತೆಗೆ ಅಕ್ಕಿ, ಸಜ್ಜೆ ಹಾಗೂ ಬೇಳೆಕಾಳುಗಳ ಬೆಲೆಯೂ ಹೆಚ್ಚಿರುವುದರಿಂದ ಖಾನಾವಳಿಗಳ ನಿರ್ವಹಣಾ ವೆಚ್ಚ ಏರಿಕೆಯಾಗಿದೆ. ಆದರೆ, ವೆಚ್ಚ ಹೆಚ್ಚಿದಂತೆ ಊಟದ ದರ ಏರಿಸಿದರೆ ಗ್ರಾಹಕರು ಕಡಿಮೆಯಾಗಬಹುದು ಎಂಬ ಆತಂಕ ಮಾಲೀಕರನ್ನು ಕಾಡುತ್ತಿದೆ. ಹೀಗಾಗಿ ದರ ಹೆಚ್ಚಿಸದೆ ನಷ್ಟ ಸಹಿಸಿಕೊಂಡು ಉದ್ಯಮ ನಡೆಸಬೇಕಾದ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ.ಬೇಕಿದೆ ಸೂಕ್ತ ಪ್ರೋತ್ಸಾಹ:ರೈತರು ಜೋಳ ಬೆಳೆದಾಗ ಸೂಕ್ತ ಬೆಲೆ ಸಿಗದ ಕಾರಣ ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಜೋಳದ ಉತ್ಪಾದನೆ ಕುಸಿಯುತ್ತಿದೆ. ಸರ್ಕಾರ ಜೋಳ ಮತ್ತು ಗೋಧಿ ಬೆಳೆಯುವ ರೈತರಿಗೆ ಸೂಕ್ತ ಬೆಂಬಲ ಬೆಲೆ, ಖರೀದಿ ವ್ಯವಸ್ಥೆ ಹಾಗೂ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಉತ್ಪಾದನೆ ಹೆಚ್ಚಿಸಲು ಸಾಧ್ಯ ಎನ್ನುತ್ತಾರೆ ಗ್ರಾಹಕ ಮೋಹನ ಹಂಪಣ್ಣವರ.(ಬಾಕ್ಸ್...)ಬೆಲೆ ಹೆಚ್ಚಿಸಿದರೆ ಗ್ರಾಹಕರ ಸಂಖ್ಯೆ ಕಡಿಮೆ:ನಮ್ಮಲ್ಲಿ ಶೇ.100ರಷ್ಟು ಗ್ರಾಹಕರು ರೊಟ್ಟಿ ಊಟವನ್ನೇ ಬಯಸುತ್ತಾರೆ. ಹಿಂದೆ ಕೆ.ಜಿ.ಗೆ ₹40ರಿಂದ ₹50ರಷ್ಟಿದ್ದ ಜೋಳ ಈಗ ₹ 90ರಿಂದ ₹100ರ ಗಡಿ ದಾಟಿದೆ. ಸದ್ಯ ಒಂದು ಊಟಕ್ಕೆ ₹120 ಪಡೆಯುತ್ತಿದ್ದೇವೆ. ದರ ಹೆಚ್ಚಿಸಿದರೆ ಗ್ರಾಹಕರು ಕಡಿಮೆಯಾಗುವ ಆತಂಕವಿದೆ. ಆದರೆ, ಇದೇ ಪರಿಸ್ಥಿತಿ ಮುಂದುವರಿದರೆ ಅನಿವಾರ್ಯವಾಗಿ ಊಟದ ದರ ಹೆಚ್ಚಿಸಬೇಕಾಗುತ್ತದೆ ಎನ್ನುತ್ತಾರೆ ಖಾನಾವಳಿ ಮಾಲೀಕ ಚನ್ನಬಸು ಹೊಸೂರ.
(ಬಾಕ್ಸ್...)ಹುಬ್ಬಳ್ಳಿ ಎಪಿಎಂಸಿಯಲ್ಲಿ ಬಿಳಿ ಜೋಳದ ದರ ಏರಿಳಿತ:ದಿನಾಂಕಕನಿಷ್ಠಗರಿಷ್ಠ (ಕ್ವಿಂಟಲ್)ನ.113,5356,099ನ.122,7098,408ನ.13 2,210 8,005ಕೋಟ್...ಕಳೆದ 15-20 ದಿನಗಳಿಂದ ಗ್ರಾಹಕರು ಬಂದು ಜೋಳದ ಬೆಲೆ ಕೇಳಿ ಹೌಹಾರುತ್ತಿದ್ದಾರೆ. ಒಂದೇ ತಿಂಗಳಲ್ಲಿ ಇದರ ಬೆಲೆ ದುಪ್ಪಟ್ಟಾಗಿದೆ. ಖರೀದಿಸುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.- ಭರತ್ ಪಟೇಲ, ಕಿರಾಣಿ ಅಂಗಡಿ ಮಾಲಿಕ.