ಸಾರಾಂಶ
ಜಾರಕಿಹೊಳಿ ಸಿಎಂ ಆಗೋದು ನೂರಕ್ಕೆ ನೂರು ಸತ್ಯ: ಶಾಸಕ ವೈದ್ಯ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದರೂ ಅದನ್ನು ಗಮನಕ್ಕೆ ತೆಗೆದುಕೊಳ್ಳದೇ ಮತ್ತೆ ಸಿಎಂ ಆಗುವ ಹೇಳಿಕೆ ಮತ್ತೆ ಸಂಚಲನ ಮೂಡಿಸಿದೆ.ಸವದತ್ತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಅವರು ಸೋಮವಾರ ಜಿಲ್ಲೆಯ ಯರಗಟ್ಟಿಯಲ್ಲಿ ಮಾತನಾಡಿ, ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿರುವುದು ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಯರಗಟ್ಟಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ಕೂಡ ಅಷ್ಟೇ ಸತ್ಯ. ಅವರು ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ. ಅವರನ್ನು ಸಿಎಂ ಆಗಿ ನೋಡಬೇಕೆಂದು ಜನರು ಬಯಸುತ್ತಿದ್ದಾರೆ. ಮುಂದಿನ ದಿನದಲ್ಲಿ ಬೆಳಗಾವಿ ಗಡಿ ಭಾಗದಿಂದ ಒಬ್ಬ ಸಿಎಂ ಆಗಲಿದ್ದಾರೆ ಎಂದರು.ಸತೀಶ ಜಾರಕಿಹೊಳಿ ಅವರ ಪರಮಾಪ್ತರಲ್ಲಿ ಶಾಸಕ ವಿಶ್ವಾಸ ವೈದ್ಯ ಕೂಡ ಒಬ್ಬರು. ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡಿದ್ದ ಸಚಿವ ಸತೀಶ ಜಾರಕಿಹೊಳಿ ಅವರನ್ನು ಪಕ್ಷದ ಹೈಕಮಾಂಡ್ ಸಮಾಧಾನಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ, ಬಹಿರಂಗವಾಗಿ ಪಕ್ಷದ ನಾಯಕರು ಯಾರೂ ಹೇಳಿಕೆ ನೀಡದಂತೆ ತಾಕೀತು ಕೂಡ ಮಾಡಿತ್ತು. ಈ ಎಲ್ಲ ಸೂಚನೆಗಳ ನಡುವೆಯೂ ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರ ಈ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.