ಸಮರ್ಥನಂ ಸಂಸ್ಥೆಯ ‘ಕನ್ನಡಪ್ರಭ’, ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಸಹಯೋಗದ ಬೆಂಗಳೂರು ವಾಕಥಾನ್‌ನಲ್ಲಿ 10000 ಮಂದಿ ಭಾಗಿ

| Published : Dec 15 2024, 02:01 AM IST / Updated: Dec 15 2024, 08:12 AM IST

ಸಮರ್ಥನಂ ಸಂಸ್ಥೆಯ ‘ಕನ್ನಡಪ್ರಭ’, ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಸಹಯೋಗದ ಬೆಂಗಳೂರು ವಾಕಥಾನ್‌ನಲ್ಲಿ 10000 ಮಂದಿ ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮರ್ಥನಂ ಸಂಸ್ಥೆಯು ‘ಕನ್ನಡಪ್ರಭ’, ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 18ನೇ ‘ಬೆಂಗಳೂರು ವಾಕಥಾನ್-2024’ ರಲ್ಲಿ ಸುಮಾರು ಹತ್ತು ಸಾವಿರಕ್ಕೂ ಪಾಲ್ಗೊಂಡು ಹೆಜ್ಜೆ ಹಾಕಿ ಸ್ಫೂರ್ತಿ ಮೆರೆದರು.

 ಬೆಂಗಳೂರು : ಸಮರ್ಥನಂ ಸಂಸ್ಥೆಯು ‘ಕನ್ನಡಪ್ರಭ’, ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 18ನೇ ‘ಬೆಂಗಳೂರು ವಾಕಥಾನ್-2024’ ರಲ್ಲಿ ಸುಮಾರು ಹತ್ತು ಸಾವಿರಕ್ಕೂ ಪಾಲ್ಗೊಂಡು ಹೆಜ್ಜೆ ಹಾಕಿ ಸ್ಫೂರ್ತಿ ಮೆರೆದರು.

ಓಪನ್‌ ಟೆಕ್ಸ್ಟ್‌ಸಹಭಾಗಿತ್ವದಲ್ಲಿ ಶನಿವಾರ ‘ಸರ್ವರಿಗೂ ಆರೋಗ್ಯ’ ಪರಿಕಲ್ಪನೆಯಡಿ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ವಾಕಥಾನ್‌ ನಡೆಯಿತು. ಸಾಕಷ್ಟು ಅಂಗವಿಕಲರು, ವಿವಿಧ ಶಾಲಾ ಕಾಲೇಜುಗಳ ಸಾವಿರಾರು ಯುವಕ ಯುವತಿಯರು, ಜನತೆ ವಾಕಥಾನ್‌ನಲ್ಲಿ ಪಾಲ್ಗೊಂಡು ಕ್ರೀಡಾಂಗಣದಲ್ಲಿ ನಡೆದು ಸಂಭ್ರಮಿಸಿದರು.

ವಾಕಥಾನ್ ರಾಯಬಾರಿ ನಟ ಡಾಲಿ ಧನಂಜಯ, ಕತೆಗಳಿಗೆ ಬದಲಾವಣೆ ತರುವ ಶಕ್ತಿ ಇರುತ್ತದೆ. ಈ ವಾಕಥಾನ್ ಅಂಥದ್ದೊಂದು ಭರವಸೆ, ಒಳಗೊಳ್ಳುವಿಕೆಯ ಮತ್ತು ದೃಢತೆಯ ಕತೆ ಹೇಳುತ್ತಿದೆ. ಎಲ್ಲರಲ್ಲೂ ವಿಜ್ಞಾನ, ಕಲೆ,‌ ಕ್ರೀಡೆಯ ಪ್ರತಿಭೆ ಇರುತ್ತದೆ. ನಮ್ಮಲ್ಲಿ ನ್ಯೂನ್ಯತೆಗಳು ಇರಬಹುದು, ಆದರೆ, ಅದನ್ನು ಮೀರಿ ಸಾಧಿಸಬೇಕು ಎಂಬ ಛಲ ಯಾವಾಗಲೂ ಇರಬೇಕು ಎಂದು ಕರೆಕೊಟ್ಟರು.

ಆರೋಗ್ಯ ಎಲ್ಲರಿಗೂ ಸಮಾನವಾಗಿ ದೊರೆಯಲೇಬೇಕಾದ ಹಕ್ಕು. ಜೊತೆಯಾಗಿ ನಡೆದರೆ ನಾವು ಎಲ್ಲ ಸವಾಲುಗಳನ್ನು ನಿಭಾಯಿಸಬಹುದು ಎಂಬುದನ್ನು ಈ ನಡಿಗೆ ತಿಳಿಸಿಕೊಟ್ಟಿದೆ. ಇದು ಬುದ್ಧಿ ಮತ್ತು ಹೃದಯವನ್ನು ಉತ್ತಮ ನಾಳೆಗಾಗಿ ಕರೆದೊಯ್ಯುವ ಉತ್ತಮ ಪ್ರಯತ್ನ ಎಂದು ಹೇಳಿದರು. ಜತೆಗೆ ನಮ್ಮ ಸಿನಿಮಾದ ಡೈಲಾಗ್‌ ಹೇಳುವ ಮೂಲಕ ನೆರೆದವರನ್ನು ರಂಜಿಸಿದರು.

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ, ವಿಕಲಚೇತನರ ಸಬಲೀಕರಣಕ್ಕೆ ಉತ್ತಮ ಆರೋಗ್ಯ ಸೇವೆಯ ಲಭ್ಯತೆ ಬಹಳ ಮುಖ್ಯ. ಸಮರ್ಥನಂ ಸಂಸ್ಥೆ ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಸಮರ್ಥನಂ ಟ್ರಸ್ಟ್ ಫಾರ್ ಡಿಸೇಬಲ್‌ನ ಸಂಸ್ಥಾಪಕ ಟ್ರಸ್ಟಿ ಮತ್ತು ಕ್ರಿಕೆಟ್ ಅಸೋಸಿಯೇಷನ್ ​​ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ)ದ ಚೇರ್‌ಮನ್ ಡಾ.ಮಹಾಂತೇಶ್ ಜಿ. ಕಿವಡಸನ್ನವರ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ವಾಕಥಾನ್ ಹೆಚ್ಚು ವಿಸ್ತಾರವಾಗುತ್ತಿದ್ದು, ಹೆಚ್ಚಿನವರು ಪಾಲ್ಗೊಳ್ಳುತ್ತಿದ್ದಾರೆ. ವಾಕಥಾನ್ ನಮ್ಮ ಸಶಕ್ತತೆಯ ಸಂಕೇತ. ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಮರ್ಥನಂ ತನ್ನ ಕಾರ್ಯ ಮುಂದುವರಿಸಲಿದೆ ಎಂದರು.

ಓಪನ್‌ಟೆಕ್ಷ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೋಜ್ ನಾಗ್‌ಪಾಲ್, 18ನೇ ಆವೃತ್ತಿಯ ಬೆಂಗಳೂರು ವಾಕಥಾನ್‌ ಆಯೋಜನೆಯಲ್ಲಿ ಸಮರ್ಥನಂ ಜೊತೆಗೆ ಕೈ ಜೋಡಿಸಿರುವುದು ಹೆಮ್ಮೆಯ ವಿಚಾರ. ಇಂತಹ ಸಾಮಾಜಿಕ ಕಳಕಳಿಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ವಕ್ತಾರೆ ಸಮಂತಾ ಜಾಕ್ಸನ್, ಪ್ರತಿಯೊಬ್ಬರೂ ಆರೋಗ್ಯಯುತವಾಗಿ ಬದುಕುವ ಹಕ್ಕನ್ನು ಪಡೆದಿದ್ದಾರೆ. ವಿಕಲಚೇತನರು ಎಲ್ಲರಂತೆ ದೇಶದ ಸಂಪತ್ತು. ಅವರ ಕಲ್ಯಾಣಕ್ಕಾಗಿ, ಅವರನ್ನು ಮುಖ್ಯವಾಹಿನಿಗೆ ಕರೆತಂದು ಸಾಮಾನ್ಯರಂತೆ ಬದುಕು ಕಟ್ಟಿಕೊಳ್ಳುವಂತೆ ಮಾಡುವುದು ಸಮಾಜದ ಕರ್ತವ್ಯ. ಈ ನಿಟ್ಟಿನಲ್ಲಿ ಅಮೇರಿಕಾ ಭಾರತ ಒಟ್ಟಾಗಿ ಸಾಕಷ್ಟು ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಈ ವೇಳೆ ಸಮರ್ಥನಂ ಸಂಸ್ಥೆಯ ಕಾರ್ಯದ ಕುರಿತಾದ ಪುಸ್ತಕವನ್ನು ನಟ ಧನಂಜಯ್ ಬಿಡುಗಡೆ ಮಾಡಿದರು. ಆಸ್ಟ್ರೇಲಿಯನ್ ಹೈ ಕಮಿಷನ್ ಡೆಪ್ಯೂಟಿ ಕಾನ್ಸುಲ್ ಲ್ಯೂಕ್ ಮಾತನಾಡಿದರು. ಹೈರ್ ರೈಟ್ ಎಪಿಎಸಿಓ ಆಪರೇಷನ್ಸ್ ಉಪಾಧ್ಯಕ್ಷ ಸಾಮ್ರಾಟ್ ದಾಸ್ , ಎಪಿಎಸಿಓ ಆಪರೇಷನ್ಸ್ ಉಪಾಧ್ಯಕ್ಷ ಶ್ರೀ ಸಾಮ್ರಾಟ್ ದಾಸ್, ಜಿಕೆಎನ್ ಏರೋಸ್ಪೇಸ್ ಎಂಜಿನ್ ಸಿಸ್ಟಮ್ಸ್ ಹೆಚ್ಆರ್ ವಿಭಾಗದ ಮುಖ್ಯಸ್ಥೆ ಯು.ಪ್ರಾರ್ಥನಾ ಹಾಜರಿದ್ದರು.