ಕನ್ನಡಪ್ರಭ ವಾರ್ತೆ ಮದ್ದೂರು

ಲೋಕ ಕಲ್ಯಾಣಾರ್ಥ, ಉತ್ತಮ ಮಳೆ ಬಂದು ಅನ್ನದಾತರಿಗೆ ಒಳ್ಳೆಯದಾಗಲಿ, ರಾಜ್ಯ ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿ ಹಾಗೂ ಅಧಿಕ ಮಾಸದ ಅಂಗವಾಗಿ ನಗರದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುದಲ್ಲಿ ಬೆಂಗಳೂರು ಉದ್ಯಮಿ ಶ್ರುತಿ ಶ್ರೀನಿಧಿ ದಂಪತಿ ದೇವರಿಗೆ 1008 ಕೆಜಿ ಮಧು ಅಭಿಷೇಕ ಮಾಡಿಸಿ ಗಮನ ಸೆಳೆದರು.

ದಂಪತಿ ಭಾನುವಾರ ದೇಗುಲಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಪ್ರಾಣ ದೇವರಾದ ಶ್ರೀ ಹೊಳೆ ಆಂಜನೇಯಸ್ವಾಮಿ ಮಧು ಅಭಿಷೇಕ ಮಾಡಿಸಿ ಸರ್ವರಿಗೂ ಹಾಗೂ ಸಕಲ ಜೀವರಾಶಿಗೂ ದೇವರು ಶುಭ ತರಲಿ ಎಂದು ಹಾರೈಸಿದರು.

ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಅವರ ನೇತೃತ್ವದಲ್ಲಿ ಸುಮಾರು 6 ರಿಂದ 7 ಜನ ಸಹ ಅರ್ಚಕರು ದೇವರ ಮಂತ್ರಗಳನ್ನು ಪಠಿಸುತ್ತ ಶಾಸ್ತ್ರೊಕ್ತವಾಗಿ ಪ್ರಾಣ ದೇವರಿಗೆ ಮಧು ಅಭಿಷೇಕ ಮಾಡಿದರು.

ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಮಧು ಅಭಿಷೇಕ ನೋಡಿ ಕಣ್ತುಂಬಿಕೊಂಡು ದೇವರ ಕೃಪೆಗೆ ಒಳಗಾದರು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಿತು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.


ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಪ್ರಶಂಸೆ:

ಉದ್ಯಮಿ ಶ್ರುತಿಶ್ರೀನಿಧಿ ದಂಪತಿ ಲೋಕ ಕಲ್ಯಾಣಾರ್ಥಕ್ಕಾಗಿ, ಅಧಿಕ ಮಾಸದ ಪರ್ವ ಕಾಲದಲ್ಲಿ ಹೊಳೆ ಆಂಜನೇಸ್ವಾಮಿ ದೇಗುಲದಲ್ಲಿ 1008 ಲೀಟರ್ ಮಧು ಅಭಿಷೇಕ ಮಾಡಿಸುತ್ತಿರುವ ಬಗ್ಗೆ ಉಡುಪಿ ಶ್ರೀವಿಶ್ವಪ್ರಸನ್ನ ತಿರ್ಥ ಪ್ರಸನ್ನ ಸ್ವಾಮೀಜಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಮಾತನಾಡಿ, ಉದ್ಯಮಿ ಶ್ರುತಿಶ್ರೀನಿಧಿ ದಂಪತಿ ಸರ್ವರಿಗೂ ಶುಭವಾಗಲಿ ಎಂಬ ಉದ್ದೇಶದಿಂದ 1008 ಲೀಟರ್ ಮಧು ಅಭಿಷೇಕ ಮಾಡಿಸುತ್ತಿರುವುದು ಪ್ರಶಂಸನೀಯ ಸಂಗತಿಯಾಗಿದೆ.