ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ 26 ಕ್ರಸ್ಟ್ ಗೇಟ್‌ಗಳ ಮೂಲಕ 98,235 ಕ್ಯುಸೆಕ್ ಸೇರಿದಂತೆ ಒಟ್ಟು 102089 ಕ್ಯುಸೆಕ್ ನೀರು ನದಿಗೆ ಹರಿಸಲಾಯಿತು. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಜಲಾಶಯದಲ್ಲಿ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಲು ನಿರ್ಧರಿಸಿರುವ ಹಿನ್ನೆಲೆ ಮೇಲ್ಭಾಗದಿಂದ ಹರಿದು ಬರುತ್ತಿರುವ ಹೆಚ್ಚುವರಿ ನೀರನ್ನು ಭಾನುವಾರ ನದಿಗೆ ಹರಿಸಲಾಯಿತು.ಜಲಾಶಯದ 12 ಕ್ರಸ್ಟ್ ಗೇಟ್ ಗಳನ್ನು 3 ಅಡಿ ಮತ್ತು 14 ಗೇಟ್ ಗಳನ್ನು 4 ಅಡಿ ಎತ್ತರಿಸಿ ನದಿಗೆ ನೀರು ಹರಿಸಲಾಗುತ್ತಿದೆ.ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸಿರುವ ಹಿನ್ನೆಲೆ ಹಂಪಿಯಲ್ಲಿ ನದಿ ಪಾತ್ರದ ಸ್ಮಾರಕಗಳು ಮುಳುಗಡೆಯಾಗಿವೆ. ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದ್ದು, ಮೇಲಿನ ಧ್ವಜ ಮಾತ್ರ ಗೋಚರವಾಗುತ್ತಿದೆ. ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿಲಿಂಗ ಜಲಾವೃತವಾಗಿವೆ. ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಕಾಲು ಸೇತುವೆ, ಜನಿವಾರ ಮಂಟಪಗಳು ಸಂಪೂರ್ಣ ಮುಳುಗಡೆಯಾಗಿವೆ. ಕೋದಂಡರಾಮಸ್ವಾಮಿ ದೇವಾಲಯದ ಬಳಿಯ ಮಂಟಪಗಳು ಕೂಡ ಜಲಾವೃತವಾಗಿವೆ.ಹಂಪಿಯ ಚಕ್ರತೀರ್ಥದ ಬಳಿ ಭಾರೀ ಪ್ರಮಾಣದಲ್ಲಿ ನೀರು ನದಿಯಲ್ಲಿ ಹರಿಯುತ್ತಿದೆ. ಈಗಾಗಲೇ ಹರಿಗೋಲು ಹಾಗೂ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಹಂಪಿ ತುಂಗಭದ್ರಾ ನದಿ ತೀರದಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ಹಂಪಿ- ಗಂಗಾವತಿ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ.
ಜಲಾಶಯದ ಒಳ ಹರಿವು 82,874 ಕ್ಯುಸೆಕ್ ಇದ್ದು, ಇನ್ನೂ ಏರುತ್ತಲೇ ಸಾಗುತ್ತಿದೆ. ಹಾಗಾಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ತುಂಗಭದ್ರಾ ಮಂಡಳಿ ಎಚ್ಚರಿಕೆ ಸಂದೇಶ ರವಾನಿಸಿದೆ. ಇನ್ನು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ನದಿಪಾತ್ರದ ಜನರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.ವಾರಾಂತ್ಯದಲ್ಲಿ ಪ್ರವಾಸಿಗರ ದಂಡು:ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವ ಹಿನ್ನೆಲೆ ನದಿಯಲ್ಲಿ ರಭಸವಾಗಿ ಹರಿಯುವ ನೀರನ್ನು ಕಣ್ಣದುಂಬಿಕೊಳ್ಳಲು ಜನರು ತಂಡೋಪತಂಡವಾಗಿ ಜಲಾಶಯಕ್ಕೆ ಬರುತ್ತಿದ್ದಾರೆ. ಹಂಪಿಯ ತುಂಗಭದ್ರಾ ನದಿ ತೀರದಲ್ಲೂ ಜನರು ಆಗಮಿಸಿ ನದಿಯಲ್ಲಿ ಹರಿಯುತ್ತಿರುವ ನೀರನ್ನು ವೀಕ್ಷಿಸುತ್ತಿದ್ದಾರೆ. ಹಂಪಿಯಲ್ಲಿ ಭಾರೀ ಪ್ರಮಾಣದಲ್ಲಿ ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆ ವೈಭವದ ಸೊಬಗು ಕಾಣಲು ಜನರು ಬರುತ್ತಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))