ಬೃಂದಾವನ ಬಡಾವಣೆಯಲ್ಲಿ ಒಂದೇ ಬಾರಿಗೆ 1021 ಗಣೇಶ ದರ್ಶನ

| Published : Aug 29 2025, 01:00 AM IST

ಸಾರಾಂಶ

ಬೃಂದಾವನ ಬಡಾವಣೆ ಗಣಪತಿ ದೇವಸ್ಥಾನದ ವಿಶಾಲವಾದ ಆವರಣದಲ್ಲಿ ಆಕರ್ಷಕ ವಿದ್ಯುತ್‌ ದೀಪಾಲಂಕಾರದೊಂದಿಗೆ ನಿರ್ಮಿಸಿರುವ ಮಂಟಪದಲ್ಲಿ ವೇದಿಕೆಯ ಪದಾಧಿಕಾರಿಗಳು ಬಹಳ ಶ್ರಮಪಟ್ಟು ಪ್ರತಿಷ್ಠಾಪಿಸಿರುವ 1021 ಗಣಪತಿಯು ಬಹು ಆಕರ್ಷಣೆಯಾಗಿದ್ದು, ಮೈಸೂರಿನ ಭಕ್ತರು ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಎಲ್.ಎಸ್. ಶ್ರೀಕಾಂತ್‌

ಕನ್ನಡಪ್ರಭ ವಾರ್ತೆ ಮೈಸೂರು

ಇದೇ ಪ್ರಥಮ ಬಾರಿಗೆ ಮೈಸೂರಿನ ಬೃಂದಾವನ ಬಡಾವಣೆ ನಾಗರೀಕರ ಹಿತರಕ್ಷಣಾ ವೇದಿಕೆಯು ಅತ್ಯಾಕರ್ಷಕವಾಗಿ 1021 ಗಣಪತಿಗಳನ್ನು ಒಂದೇ ಸೂರಿನಡಿಯಲ್ಲಿ ಪ್ರತಿಷ್ಠಾಪಿಸಿ ಇತಿಹಾಸ ಸೃಷ್ಟಿಸಿದೆ.

ಬಡಾವಣೆ ಗಣಪತಿ ದೇವಸ್ಥಾನದ ವಿಶಾಲವಾದ ಆವರಣದಲ್ಲಿ ಆಕರ್ಷಕ ವಿದ್ಯುತ್‌ ದೀಪಾಲಂಕಾರದೊಂದಿಗೆ ನಿರ್ಮಿಸಿರುವ ಮಂಟಪದಲ್ಲಿ ವೇದಿಕೆಯ ಪದಾಧಿಕಾರಿಗಳು ಬಹಳ ಶ್ರಮಪಟ್ಟು ಪ್ರತಿಷ್ಠಾಪಿಸಿರುವ 1021 ಗಣಪತಿಯು ಬಹು ಆಕರ್ಷಣೆಯಾಗಿದ್ದು, ಮೈಸೂರಿನ ಭಕ್ತರು ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಗಣಪತಿಗಳ ಪ್ರತಿಷ್ಠಾಪನೆಗಾಗಿ ವಿಶೇಷವಾಗಿ ನಿರ್ಮಿಸಿರುವ ಮಂಟಪದ ಶಂಖ, ಚಕ್ರವಿರುವ ಮುಖ್ಯದ್ವಾರವೇ ಭಕ್ತಾದಿಗಳಿಗೆ ಹೆಚ್ಚು ಆಕರ್ಷಣಿಯವಾಗಿದೆ.

ಒಂದೇ ಬಾರಿಗೆ 101 ಗಣಪತಿ ದರ್ಶನ ಮಾಡಿದರೆ ಪುಣ್ಯ ಲಭಿಸಲಿದೆ ಎನ್ನುತ್ತಿದ್ದ ಹಿರಿಯರು, ಇದೀಗ 1021 ಗಣಪತಿಗಳನ್ನು ಒಂದೇ ಬಾರಿಗೆ ದರ್ಶನ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಬೃಂದಾವನ ಬಡಾವಣೆಯ ನಾಗರೀಕರ ಹಿತರಕ್ಷಣಾ ವೇದಿಕೆಗೆ ಭಕ್ತರು ಅಭಿನಂದಿಸಿದ್ದಾರೆ.

ಈ 1021 ಗಣಪತಿ ದರ್ಶನ ಪಡೆಯಲು ಮೈಸೂರಿನ ಎಲ್ಲ ಕಡೆಗಳಿಂದ ಬಂದು ಭಕ್ತರು ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ಗಣಪತಿ ದರ್ಶನ ಮೆಚ್ಚುಗೆ ವ್ಯಕ್ತಿಪಡಿಸಿದ್ದಾರೆ.

ಶ್ರೀಕೃಷ್ಣನ ಅವಾತರದಲ್ಲಿ ಗಣಪತಿ:

1021 ಗಣಪತಿಗಳಲ್ಲಿ ಸುಮಾರು 5 ಅಡಿ ಎತ್ತರವಿರುವ ಕೊಳಲನ್ನು ನುಡಿಸುತ್ತಿರುವ ಗೋವಿನ ಮೇಲೆ ಕುಳಿತಿರುವ ಶ್ರೀ ಕೃಷ್ಣನ ಅವಾತರದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಮುದ್ದುಮುದ್ದಾದ ಗಣಪತಿಗಳು:

ಪ್ರತಿಯೊಂದು ಗಣಪತಿಯು ಮುದ್ದುಮುದ್ದಾಗಿದ್ದು, ಮಕ್ಕಳನ್ನು ಹೆಚ್ಚಾಗಿ ಆಕರ್ಷಿತಗೊಂಡಿದ್ದು, ಬಲಮುರಿ, ಎಡಮುರಿ ಸೇರಿದಂತೆ ವಿವಿಧ ಆಕೃತಿಗಳ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಸೆ.4ರವರೆಗೆ ದರ್ಶನಕ್ಕೆ ಅವಕಾಶ:

ಸೆ.4ರವರೆಗೂ ಗಣಪತಿ ದರ್ಶನಕ್ಕೆ ಅವಕಾಶವಿದ್ದು, ಭಕ್ತಾದಿಗಳು ಬಂದು 1021 ಗಣಪತಿ ದರ್ಶನ ಪಡೆದು ಪುನೀತರಾಗುವಂತೆ ವೇದಿಕೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಸೆ.4 ರವರೆಗೆ ಪ್ರತಿದಿನ ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸೆ.4 ರವರೆಗೆ ನಡೆಯುವ ಕಾರ್ಯಕ್ರಮಗಳ ವಿವರ

ಆ. 29ರ ಸಂಜೆ 7.30ಕ್ಕೆ ಗಾಯಕರಾದ ಎ.ಡಿ. ಶ್ರೀನಿವಾಸನ್‌ಮತ್ತು ತಂಡದವರಿಂದ ಭಾವತರಂಗ (ಭಾವಗೀತೆ) ಕಾರ್ಯಕ್ರಮ, ಆ. 30ರ ಸಂಜೆ 6.30ಕ್ಕೆ ನಗರದ ಪುಟ್ಟಪುಟ್ಟ ಮಕ್ಕಳಿಂದ ಫ್ಯಾನ್ಸಿ ಡ್ರಸ್‌ಕಾರ್ಯಕ್ರಮ ಹಾಗೂ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನೆರವೇರಲಿದೆ.

ಆ. 31ರ ಬೆಳಗ್ಗೆ 8ಕ್ಕೆ ಶ್ರೀ ಮಹಾಗಣಪತಿ ದೇವಸ್ಥಾನದ ಮೂಲ ವಿಗ್ರಹಕ್ಕೆ 101 ಲೀಟರ್‌ಕ್ಷೀರಾಭಿಷೇಕ ನಂತರ 9ಕ್ಕೆ ಬೃಂದಾವನ ಬಡಾವಣೆಯ ಮಕ್ಕಳಿಗೆ ಚಿಣ್ಣರ ಮೇಳ ಹಾಗೂ ಟಾಂಗಾ ಸವಾರಿ ಏರ್ಪಡಿಸಿದೆ. ಬೆಳಗ್ಗೆ 10ಕ್ಕೆ ಬೃಂದಾವನ ಬಡಾವಣೆಯ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ. ಸಂಜೆ 7ಕ್ಕೆ ನಗರದ ಗಾಯಕರಿಂದ ಮೈಸೂರು ಗಾಯನ (ರಾಗ ಭಾವಗಳ ಸಮ್ಮಿಲನ ಚನಲಚಿತ್ರಗೀತೆಗಳು) ಪ್ರಸ್ತುತಪಡಿಸುವರು.

ಸೆ. 1 ರ ಸಂಜೆ 7ಕ್ಕೆ ಕರ್ನಾಟಕದ ಹೆಸರಾಂತಹ ಹಾಸ್ಯ ಕಲಾವಿದರಿಂದ ಗಿಚ್ಚಿ-ಗಿಲಿಗಿಲಿ ಬೃಂದಾವನ ಹಾಸ್ಯ ದರ್ಬಾರ್‌ನಡೆಯಲಿದೆ.

ಸೆ.2 ಬೆಳಗ್ಗೆ 8.30ಕ್ಕೆ ಗಣ ಹೋಮಕ್ಕೆ ಸಂಕಲ್ಪ ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಮತ್ತು ಪ್ರಸಾದ ವಿನಿಯೋಗವಾಗಲಿದೆ. ಸಂಜೆ 7ಕ್ಕೆ ಮೈಸೂರಿನ ಡಾ. ರೂಪಶ್ರೀ ಶೇಷಾದ್ರಿ ಅವರ ಗಾನ ಲಹರಿ ತಂಡದಿಂದ ರಸಸಂಜೆ (ಸಂಗೀತ ಸಂಜೆ) ನಡೆಯಲಿದೆ.

ಸೆ.3ರ ಸಂಜೆ 7ಕ್ಕೆ ಸರಿಗಮಪ, ಕನ್ನಡ ಕೋಗಿಲೆ ಕಾರ್ಯಕ್ರಮದ ಪುರುಷೋತ್ತಮ್‌ಅವರ ಪಿ.ವಿ.ಆರ್‌. ಈವೆಂಟ್ಸ್‌ವತಿಯಿಂದ ಗಾನ ವೈಭವ ನಡೆಯಲಿದೆ.

ಸೆ.4ರ ಸಂಜೆ 5ಕ್ಕೆ 1021 ಶ್ರೀ ಮಹಾಗಣಪತಿ ಮೂರ್ತಿಯ ವಿಸರ್ಜನೆ ನಂತರ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಶ್ರೀ ಮಹಾಗಣಪತಿಯನ್ನು ವಿಶೇಷ ತಾಳ ಮೇಳಗಳೊಂದಿಗೆ ಮೆರವಣಿಗೆ ನೆರವೇರಲಿದೆ.