ಈ ಬಾರಿ ಮೈಸೂರು ವಿವಿ ಘಟಿಕೋತ್ಸವದಲ್ಲಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಡಾ.ಟಿ. ಶಾಮ್ ಭಟ್ ಹಾಗೂ ಗ್ಲೋಬಲ್ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷ, ಪರಿಸರವಾದಿ ಪಿ. ಜಯಚಂದ್ರ ರಾಜು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುವುದು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವವನ್ನು ಜ.5ರ ಬೆಳಗ್ಗೆ 11.30ಕ್ಕೆ ಕ್ರಾಫರ್ಡ್ ಭವನದಲ್ಲಿ ಆಯೋಜಿಸಲಾಗಿದ್ದು, 30966 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ಇಸ್ರೋ ನಿವೃತ್ತ ಅಧ್ಯಕ್ಷ ಡಾ.ಎಸ್. ಸೋಮನಾಥ್ ಅವರು ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋತ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉಪಸ್ಥಿತರಿರುವರು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಬಾರಿ ಘಟಿಕೋತ್ಸವದಲ್ಲಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಡಾ.ಟಿ. ಶಾಮ್ ಭಟ್ ಹಾಗೂ ಗ್ಲೋಬಲ್ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷ, ಪರಿಸರವಾದಿ ಪಿ. ಜಯಚಂದ್ರ ರಾಜು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುವುದು ಎಂದರು.

30966 ವಿವಿಧ ಪದವಿ ಪ್ರದಾನ:

ಘಟಿಕೋತ್ಸವದಲ್ಲಿ ಕಲಾ, ವಾಣಿಜ್ಯ, ಶಿಕ್ಷಣ, ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ, ಎಂಜಿನಿಯರಿಂಗ್ ವಿಭಾಗದಿಂದ ಒಟ್ಟು 30966 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುತ್ತಿದೆ. ಇವರಲ್ಲಿ 18612 (ಶೇ.60.10) ಮಹಿಳೆಯರು ಮತ್ತು 12354 (ಶೇ.39.89) ಪುರುಷರಿದ್ದಾರೆ ಎಂದರು.

ಮೈಸೂರು ವಿವಿ ಎಂಜಿನಿಯರಿಂಗ್ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳು ಮೊದಲ ಬಾರಿಗೆ ಪದವಿ ಪಡೆಯುತ್ತಿದ್ದಾರೆ. 2020- 21ರಲ್ಲಿ ಮೈಸೂರು ವಿವಿಯಲ್ಲಿ ಎಂಜಿನಿಯರಿಂಗ್ ಪದವಿ ಆರಂಭಿಸಲಾಗಿದ್ದು, ಮೊದಲ ಬ್ಯಾಚಿನ 140 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ ಎಂದರು.

ವಿವಿಧ ವಿಷಯಗಳಲ್ಲಿ 449 ಸಂಶೋಧಕರು ಪಿಎಚ್‌.ಡಿ ಪದವಿ ಭಾಜನರಾಗಲಿದ್ದು, ಇದರಲ್ಲಿ 211 ಮಹಿಳೆಯರು, 238 ಪುರುಷರು ಇದ್ದಾರೆ. 442 ಪದಕಗಳು, 197 ಬಹುಮಾನಗಳನ್ನು 213 ಅಭ್ಯರ್ಥಿಗಳು ಸ್ವೀಕರಿಸಲಿದ್ದಾರೆ. ಇವರಲ್ಲಿ 156 ಮಹಿಳೆಯರಿದ್ದಾರೆ. 5796 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ, ಅವರಲ್ಲಿ 3551 ಮಹಿಳೆಯರಿದ್ದಾರೆ. ಹಾಗೆಯೇ, 24721 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪಡೆಯುತ್ತಿದ್ದು, ಇದರಲ್ಲಿ 14850 ಮಹಿಳೆಯರಿದ್ದಾರೆ ಎಂದು ಅವರು ವಿವರಿಸಿದರು.

ಪರೀಕ್ಷಾಂಗ ಕುಲಸಚಿ ಪ್ರೊ.ಎನ್. ನಾಗರಾಜ ಇದ್ದರು.ಚಿನ್ನದ ಪದಕ- ಬಹುಮಾನ ವಿಜೇತರು

ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಎಂ.ಎಸ್ಸಿ ರಸಾಯನಶಾಸ್ತ್ರ ವಿಷಯದಲ್ಲಿ ಎನ್. ಅದಿತಿ 24 ಪದಕ, 8 ನಗದು ಬಹುಮಾನ, ಎಂ.ಎಸ್ಸಿ ಗಣಿತದಲ್ಲಿ ಆರ್. ಪುನೀತ್ 6 ಪದಕ, 2 ನಗದು ಬಹುಮಾನ, ಬಿ.ಎಸ್ಸಿಯಲ್ಲಿ ಟಿ. ಹರ್ಮೈನ್ 6 ಪದಕ, 5 ನಗದು ಬಹುಮಾನ, ಬಿಎ- ಎಲ್‌ಎಲ್‌ ಬಿಯಲ್ಲಿ ನಯನಾ ಪಾಂಡೆ 1 ಪದಕ, ಎಲ್‌ಎಲ್‌ ಎಂನಲ್ಲಿ ಕೆ. ಶ್ರುತಿ 4 ಪದಕ, 3 ನಗದು ಬಹುಮಾನ ಸ್ವೀಕರಿಸಲಿದ್ದಾರೆ.

ಕಲಾ ವಿಭಾಗದಲ್ಲಿ ಬಿ.ಎಯಲ್ಲಿ ಎಂ.ಸಿ. ತ್ರೀವೇಣಿ 2 ಪದಕ, 2 ನಗದು, ಬಿ.ಎಸ್. ವರ್ಣಿಕಾ 5 ಪದಕ, 6 ನಗದು ಬಹುಮಾನ, ಎಂ.ಎ. ಕನ್ನಡ ವಿಷಯದಲ್ಲಿ ಚಂದ್ರಶೇಖರ್ 13 ಪದಕ, 2 ನಗದು ಬಹುಮಾನ ಪಡೆಯಲಿದ್ದಾರೆ.

ವಾಣಿಜ್ಯ ವಿಭಾಗದ ಬಿ.ಕಾಂ.ನಲ್ಲಿ ಬುಷರ್ ಕೌಸರ್ 3 ಪದಕ, 3 ನಗದು ಬಹುಮಾನ, ಎಂ.ಕಾಂ.ನಲ್ಲಿ ಎಂ. ಸುಮಲತಾ 7 ಪದಕ, 2 ನಗದು ಬಹುಮಾನ, ಶಿಕ್ಷಣ ವಿಭಾಗ ಬಿಪಿ.ಇಡಿನಲ್ಲಿ ಎನ್. ಅವಿನಾಶ್ 5 ಪದಕ, 1 ನಗದು ಬಹುಮಾನ, ಎಂ.ಇಡಿನಲ್ಲಿ ಎಚ್.ಪಿ. ದಿವಾಕರ್ 5 ಪದಕ, 3 ನಗದು ಬಹುಮಾನ ಸ್ವೀಕರಿಸುವರು.ಪಿಂಚಣಿ ಕೊಡಲು ವಿವಿಯಲ್ಲಿ ದುಡ್ಡಿಲ್ಲ

ಮೈಸೂರು ವಿವಿಯ ನಿವೃತ್ತ ನೌಕರರಿಗೆ ಪಿಂಚಣಿ ಕೊಡಲು ದುಡ್ಡಿಲ್ಲ. ಈಗಲೂ ಪರದಾಡುವ ಸ್ಥಿತಿ ಮುಂದುವರಿದಿದೆ. ಪಿಂಚಣಿಗಾಗಿ 157 ಕೋಟಿ ರೂ. ಬೇಕು. ಆದರೆ ಸರ್ಕಾರದಿಂದ ಬರುತ್ತಿರುವುದು 50 ಕೋಟಿ ರೂ. ಮಾತ್ರ. ಇದರಿಂದಾಗಿ ಸಮಸ್ಯೆ ಸೃಷ್ಟಿಯಾಗಿದೆ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ಈ ಕುರಿತು ರಾಜ್ಯ ಸರ್ಕಾರ ಗಮನ ಸೆಳೆಯಲಾಗಿದೆ. ವಿವಿಯ ಪಿಂಚಣಿ ನಿಧಿಯಲ್ಲಿ ನಿರ್ವಹಿಸುವಂತೆ ಸೂಚಿಸಿಸಲಾಗಿತ್ತು. ಅದೂ ಕಳೆದ ವರ್ಷ ಬರಿದಾಗಿದೆ. ಕೊರೋನಾ ಸಂದರ್ಭದಲ್ಲಿ ಪಿಂಚಣಿಗೆ ಸರ್ಕಾರದ ಆರ್ಥಿಕ ನೆರವು ತಗ್ಗಿದೆ. ಬಳಿಕ ಸುಧಾರಣೆಯಾಗಿಲ್ಲ ಎಂದರು.

ಹೊಸ ವಿವಿಗಳ ಸ್ಥಾಪನೆಯಿಂದ ಮೈಸೂರು ವಿವಿ ಮೈಸೂರು ಜಿಲ್ಲೆಗಷ್ಟೇ ಸೀಮಿತವಾಗಿ, ಆದಾಯ ಕಡಿಮೆ ಆಗಿದೆ. ಆದರೆ, ನಿರ್ವಹಣಾ ಖರ್ಚು ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ, ನಿರ್ವಹಣೆ ಮೊದಲಾದವುಗಳಿಗೆ ಖರ್ಚು ನಿಭಾಯಿಸಲು ಸರ್ಕಾರದ ಆರ್ಥಿಕ ನೆರವು ಬೇಕಾಗಿದೆ. ಕಳೆದ 14 ವರ್ಷಗಳಿಂದ ಬೋಧಕರ ನೇಮಕಾತಿಯೂ ಆಗಿಲ್ಲ ಎಂದು ಅವರು ಹೇಳಿದರು.