ಹೆಣ್ಣನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. ಧಾರಣ ಶಕ್ತಿ, ಚೈತನ್ಯ ಶಕ್ತಿ, ಫೀನಿಕ್ಸ್ ನಂತೆ ಎದ್ದು ಬರುವ ಶಕ್ತಿ ಹೆಣ್ಣಿಗಿದೆ. ವಿದ್ಯೆಯಿಂದ ಮಾತ್ರ ಎಲ್ಲವನ್ನೂ ಗೆಲ್ಲುವುದಕ್ಕೆ ಸಾಧ್ಯ. ಹೀಗಾಗಿ, ಓದುವುದು ಅನಿವಾರ್ಯ. ಇಂದು ಜೀವನವನ್ನು ಹಣದಿಂದ ಅಳೆಯಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಇತ್ತೀಚೆಗೆ ಮಕ್ಕಳು ಮೌಲ್ಯಗಳು ಕುಸಿಯುತ್ತಿದೆ. ಚಾರಿತ್ರ್ಯ ಶುದ್ಧಿಯನ್ನು ಮಾಡಿಕೊಂಡು ನಮ್ಮ ಜೀವನ ಬೇರೆಯವರಿಗೆ ಮಾದರಿಯಾಗುವಂತೆ ಬದುಕಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಕಿವಿಮಾತು ಹೇಳಿದರು.ನಗರದ ಶ್ರೀ ನಟರಾಜ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಏಕೈಕ ಮಾರ್ಗ ಶಿಕ್ಷಣ. ಹೀಗಾಗಿ, ಹೆಣ್ಣು ಮಕ್ಕಳು ಶಿಕ್ಷಣವನ್ನೂ ಪಡೆಯಬೇಕು ಎಂದರು.
ಹೆಣ್ಣನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. ಧಾರಣ ಶಕ್ತಿ, ಚೈತನ್ಯ ಶಕ್ತಿ, ಫೀನಿಕ್ಸ್ ನಂತೆ ಎದ್ದು ಬರುವ ಶಕ್ತಿ ಹೆಣ್ಣಿಗಿದೆ. ವಿದ್ಯೆಯಿಂದ ಮಾತ್ರ ಎಲ್ಲವನ್ನೂ ಗೆಲ್ಲುವುದಕ್ಕೆ ಸಾಧ್ಯ. ಹೀಗಾಗಿ, ಓದುವುದು ಅನಿವಾರ್ಯ. ಇಂದು ಜೀವನವನ್ನು ಹಣದಿಂದ ಅಳೆಯಲಾಗುತ್ತಿದೆ. ಹೀಗಾಗಿ, ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ. ಇಂದು ಭ್ರಷ್ಟಾಚಾರ ಎಲ್ಲಾ ಕ್ಷೇತ್ರಗಳಲ್ಲೂ ಅಡಗಿ ಕುಳಿತಿದೆ. ಭ್ರಷ್ಟಾಚಾರವನ್ನು ಮೀರಿ ನಾವೆಲ್ಲ ಬದುಕಬೇಕು ಎಂದು ಅವರು ತಿಳಿಸಿದರು.ವಿದ್ಯೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಭವಿಷ್ಯದಲ್ಲಿ ಗುರಿ ಇಟ್ಟುಕೊಂಡು ಆ ಗುರಿಯನ್ನು ಹಿಂಬಾಲಿಸಿಕೊಂಡು ಹೊರಟರೆ ಯಾವ ಹಣವೂ ಇಲ್ಲದೆ ನಮ್ಮ ಬದುಕನ್ನು ರೂಪಿಸಕೊಳ್ಳಬಹುದು ಎಂದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕಿ ಎಂ.ಪಿ. ನಾಗಮ್ಮ ಮಾತನಾಡಿ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಬಹುಮಾನ ಪಡೆದಿರುವ ಮಕ್ಕಳು ವಿದ್ಯಾಭ್ಯಾಸದ ಕಡೆಗೂ ಹೆಚ್ಚು ಒತ್ತು ನೀಡಬೇಕು. ಓದುವ ಸಮಯದಲ್ಲಿ ಅತ್ಯುನ್ನತ ಸ್ಥಾನವನ್ನು ತಲುಪಬೇಕಾದರೆ ಶ್ರದ್ಧೆ, ಸತತ ಪರಿಶ್ರಮ, ಉತ್ತಮ ಗ್ರಹಿಕೆ ಮುಖ್ಯವಾಗುತ್ತದೆ. ಇದಕ್ಕೆ ಪೋಷಕರು ಮಕ್ಕಳ ಕಲಿಕೆಗೆ ಪೂರಕವಾಗಿ ಪ್ರಯತ್ನಿಸಬೇಕು ಎಂದರು.ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಆಡಳಿತಾಧಿಕಾರಿ ಡಾ.ಟಿ.ಸಿ.ಪೂರ್ಣಿಮಾ ಮಾತನಾಡಿ, ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು. ನಾಗರಿಕ ಸಮಾಜದ ಕಡೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನಾವು ಮಾಡುವ ತಪ್ಪುಗಳ ಅರಿವಿರಬೇಕು. ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕು. ಆಗ ಮಾತ್ರ ಮನಸ್ಸು ನಿರಾಳವಾಗುತ್ತದೆ. ಬದುಕಿನಲ್ಲಿ ಗುರಿ ದೊಡ್ಡದಾಗಿರಬೇಕು. ಪ್ರತಿದಿನವು ಆ ಗುರಿಯತ್ತಾ ಹೆಜ್ಜೆ ಇಡುತ್ತಾ ಮುಂದೆ ಸಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಹೆಚ್ಚು ಒತ್ತನ್ನು ಕೊಡಬೇಕು ಎಂದು ಸಲಹೆ ನೀಡಿದರು.
ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ವಿ.ಡಿ. ಸುನೀತಾ ರಾಣಿ ಇದ್ದರು. ಉಪನ್ಯಾಸಕರಾದ ಎಸ್. ವೇದಾವತಿ ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ಆರ್.ರಾಧಾ ಓದಿದರು. ವಿ.ಪ್ರದೀಪ್ ವಂದಿಸಿದರು. ಬಿ.ರಾಧಾ ನಿರೂಪಿಸಿದರು.