108 ಈಡುಗಾಯಿ ಒಡೆದು ಹರಕೆ ತೀರಿಸಿದ ಕಾಂಗ್ರೆಸ್ಸಿಗರು

| Published : Jun 12 2024, 12:30 AM IST

108 ಈಡುಗಾಯಿ ಒಡೆದು ಹರಕೆ ತೀರಿಸಿದ ಕಾಂಗ್ರೆಸ್ಸಿಗರು
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ 25 ವರ್ಷದ ನಂತರ ಕಾಂಗ್ರೆಸ್ ಪಕ್ಷ ಜಯ ಸಾಧಿಸಿದೆ. ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ಪಕ್ಷದ ಹಿರಿಯ ಮುಖಂಡರಾದ ಮಟ್ಟಿಕಲ್ಲು ವೀರಭದ್ರಸ್ವಾಮಿ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ ನೇತೃತ್ವದಲ್ಲಿ ನಗರದ ಹಳೇ ಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ 108 ಈಡುಗಾಯಿ ಒಡೆಯುವ ಮೂಲಕ ಹರಕೆ ತೀರಿಸಲಾಯಿತು.

- ಸಿದ್ದೇಶ್ವರ ಕುಟುಂಬಕ್ಕಷ್ಟೇ ಸೋಲು, ಬಿಜೆಪಿ ಸೋತಿಲ್ಲ: ಮಟ್ಟಿಕಲ್ಲು ವೀರಭದ್ರಸ್ವಾಮಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆಯಲ್ಲಿ 25 ವರ್ಷದ ನಂತರ ಕಾಂಗ್ರೆಸ್ ಪಕ್ಷ ಜಯ ಸಾಧಿಸಿದೆ. ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ಪಕ್ಷದ ಹಿರಿಯ ಮುಖಂಡರಾದ ಮಟ್ಟಿಕಲ್ಲು ವೀರಭದ್ರಸ್ವಾಮಿ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ ನೇತೃತ್ವದಲ್ಲಿ ನಗರದ ಹಳೇ ಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ 108 ಈಡುಗಾಯಿ ಒಡೆಯುವ ಮೂಲಕ ಹರಕೆ ತೀರಿಸಲಾಯಿತು.

ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಮಾಳದ ಸದ್ದು, ಪುರವಂತರ ವಡಪಿನ ಸಮೇತ ದೇವಸ್ಥಾನ ಅಂಗಳದಲ್ಲಿ ಪ್ರಾರ್ಥಿಸಿ, ತೆಂಗಿನ ಕಾಯಿಗಳ ಒಡೆದು ಭಕ್ತಿ ಸಮರ್ಪಿಸಿದ್ದು ವಿಶೇಷ.

ಇದೇ ವೇಳೆ ಮಾತನಾಡಿದ ಮಟ್ಟಿಕಲ್ಲು ವೀರಭದ್ರಸ್ವಾಮಿ ಅವರು, ಬಿಜೆಪಿ ಸಂಸದರಾಗಿದ್ದವರ ಅಹಂಕಾರ, ಮಾತುಗಳು, ಸರ್ವಾಧಿಕಾರಿ ಧೋರಣೆಯಿಂದಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ರೋಸಿ ಹೋಗಿದ್ದರು. ತಾವು ಸೇರಿದಂತೆ ಅನೇಕರು ಇಂತಹ ವರ್ತನೆಯಿಂದ ಮಾತೃಪಕ್ಷ ಬಿಜೆಪಿ ತೊರೆದು, ಕಾಂಗ್ರೆಸ್ಸಿಗೆ ಸೇರಿದ್ದೇ ಸಾಕ್ಷಿ. ಈ ಚುನಾವಣೆಯಲ್ಲಿ ವಿದ್ಯಾವಂತೆ ಡಾ.ಪ್ರಭಾ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದರು. ನಾವು ಅವರ ಗೆಲುವಿಗೆ ಪಣತೊಟ್ಟಿದ್ದು, ಅದರಂತೆ ಕಾಂಗ್ರೆಸ್ ಗೆದ್ದ ಹಿನ್ನೆಲೆ ಹರಕೆ ತೀರಿಸುತ್ತಿದ್ದೇನೆ ಎಂದು ತಿಳಿಸಿದರು.

ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಗೆಲುವಿಗಾಗಿ ಏ.30ರಂದು ಹಳೆಪೇಟೆ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಗುಗ್ಗಳ ಸಮೇತ ದೀಡು ನಮಸ್ಕಾರದ ಸೇವೆ ಸಲ್ಲಿಸಿದ್ದೆ. ಬಳಿಕ ಬಾಯಿಗೆ ಶಸ್ತ್ರ, ನಾಲಿಕೆಗೆ 108 ಶಿವದಾರ ಹಾಕಿಸಿಕೊಂಡು, ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದೆ. ಈ ಹಿಂದೆ ಬಿಜೆಪಿ ಗೆಲ್ಲಲೆಂದು ಪ್ರಾರ್ಥಿಸಿ, ಇದೇ ರೀತಿ ಹರಕೆ ಹೊತ್ತು ಹರಕೆ ತೀರಿಸಿದ್ದೆ. ಆದರೆ, ಸಿದ್ದೇಶ್ವರರ ದುರಾಡಳಿತದಿಂದ ಬೇಸತ್ತು, ಕಾಂಗ್ರೆಸ್‌ಗೆ ಸೇರಿ, ಗೆಲುವಿಗೆ ಶ್ರಮಿಸಿದ್ದೇವೆ. ಇನ್ನಾದರೂ ಬಿಜೆಪಿ ಮಾಜಿ ಸಂಸದರು ತಮ್ಮ ಮಾತು, ವರ್ತನೆ ತಿದ್ದಿಕೊಳ್ಳಲಿ. ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದರು.

ಜಿಲ್ಲೆಯಲ್ಲಿ ಹಿಂದುತ್ವದ ಪರವಾಗಿ ಹಲವಾರು ಹೋರಾಟಗಳನ್ನು ಮಾಡಿ ಜೈಲಿಗೆ ಹೋಗಿ ಬಂದಿದ್ದೇನೆ. ನನ್ನಂತೆಯೇ ಸಾವಿರಾರು ಜನರು ಹಿಂದುತ್ವಕ್ಕಾಗಿ, ಬಿಜೆಪಿಗಾಗಿ ಹಗಲಿರುಳು ದುಡಿದಿದ್ದರು. ಅಂತಹ ಎಲ್ಲರನ್ನೂ ತಿರಸ್ಕಾರ ಮನೋಭಾವದಿಂದ ನೋಡಿದ ಕಾರಣ, ಸಿದ್ದೇಶ್ವರರ ಪತ್ನಿ ಗಾಯತ್ರಿ ಸಿದ್ದೇಶ್ವರ ಸೋಲು ಕಾಣಬೇಕಾಯಿತು. ಇದು ಸಿದ್ದೇಶ್ವರರ ಕುಟುಂಬದ ಸೋಲಷ್ಟೇ. ಬಿಜೆಪಿಯ ಸೋಲಲ್ಲ ಎಂದು ಅವರು ತಿಳಿಸಿದರು.

ಮುಖಂಡರಾದ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಡಾ.ಟಿ.ಜಿ.ರವಿಕುಮಾರ, ಶಶಿಶೇಖರ, ಅಣಜಿ ಬಸವರಾಜ, ಕರೂರು ಗಣೇಶ, ಡಿ.ಕೆ. ರಾಜೇಂದ್ರ, ಸಿರಿಗೆರೆ ಬಸವರಾಜ, ಅಣಜಿ ಪ್ರಶಾಂತ, ಕಾಯಿಪೇಟೆ ಹಾಲೇಶಣ್ಣ, ಜಯಣ್ಣ ಇತರರು ಇದ್ದರು.

- - - -11ಕೆಡಿವಿಜಿ9:

ದಾವಣಗೆರೆ ಹಳೇಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಟ್ಟಿಕಲ್ಲು ವೀರಭದ್ರಸ್ವಾಮಿ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಡಾ.ಟಿ.ಜಿ.ರವಿಕುಮಾರ ಇತರರು 108 ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ತೀರಿಸಿದರು.