ಶ್ರೀ ಸತ್ಯಪ್ರಮೋದತೀರ್ಥರ ಸ್ಮರಣಾರ್ಥ ₹108 ನಾಣ್ಯ ಬಿಡುಗಡೆ

| Published : Aug 31 2025, 01:09 AM IST

ಶ್ರೀ ಸತ್ಯಪ್ರಮೋದತೀರ್ಥರ ಸ್ಮರಣಾರ್ಥ ₹108 ನಾಣ್ಯ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹಂಸನಾಮಕ ಪರಮಾತ್ಮನ ಮುಖ್ಯ ಸಂಸ್ಥಾನ, ಮಾಧ್ವ ಪರಂಪರೆಯ ಉತ್ತರಾದಿಮಠದ ಪೀಠಾಧಿಪತಿಗಳಾಗಿದ್ದ ಸತ್ಯಪ್ರಮೋದ ತೀರ್ಥರ 108ನೇ ಜನ್ಮ ದಿನದ ಸ್ಮರಣಾರ್ಥ, ಭಾರತ ಸರ್ಕಾರವು ₹108 ಮುಖಬೆಲೆಯ ನಾಣ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಕನ್ನಡಪ್ರಭ ವಾರ್ತೆ ಹೈದರಾಬಾದ್‌

ಹಂಸನಾಮಕ ಪರಮಾತ್ಮನ ಮುಖ್ಯ ಸಂಸ್ಥಾನ, ಮಾಧ್ವ ಪರಂಪರೆಯ ಉತ್ತರಾದಿಮಠದ ಪೀಠಾಧಿಪತಿಗಳಾಗಿದ್ದ ಸತ್ಯಪ್ರಮೋದ ತೀರ್ಥರ 108ನೇ ಜನ್ಮ ದಿನದ ಸ್ಮರಣಾರ್ಥ, ಭಾರತ ಸರ್ಕಾರವು ₹108 ಮುಖಬೆಲೆಯ ನಾಣ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಸತ್ಯಪ್ರಮೋದ ತೀರ್ಥರ ಸಾಕ್ಷಾತ್ ಶಿಷ್ಯರಾದ ಸತ್ಯಾತ್ಮತೀರ್ಥರ 30ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಈ ಸ್ಮಾರಕ ನಾಣ್ಯದ ಲೋಕಾರ್ಪಣೆ ವಿಶೇಷವಾಗಿದೆ.

ಶನಿವಾರ (ಆ.30) ಹೈದರಾಬಾದಿನ ಉತ್ತರಾದಿಮಠದಲ್ಲಿ ನಡೆದ ಚಾತುರ್ಮಾಸ ಕಾರ್ಯಕ್ರಮದಲ್ಲಿ ನಾಣ್ಯವನ್ನು ಉತ್ತರಾದಿಮಠದ ಸತ್ಯಾತ್ಮತೀರ್ಥರ ಸಾನಿಧ್ಯದಲ್ಲಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎಸ್‌.ದಿನೇಶಕುಮಾರ್ ಹಾಗೂ ಬ್ರಹ್ಮೋಸ್ ಸಿಇಒ ಡಾ। ಜಯತೀರ್ಥ ಜೋಶಿ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.

ದೇಶ ಸ್ವಾತಂತ್ರ್ಯ ವೇಳೆ ಉತ್ತರಾದಿಮಠದ ಪೀಠಾರೋಹಣಗೈದಿದ್ದ ಸತ್ಯಪ್ರಮೋದ ತೀರ್ಥರು, ದೇಶದ ವಿಭಜನೆಯ ಕರಾಳ ದಿನಗಳಲ್ಲಿ ಹಿಂದೂ ಧರ್ಮದ ಸನಾತನ ಸಂಸ್ಕೃತಿ ಮತ್ತು ವೇದ ಪರಂಪರೆಯನ್ನು ಉಳಿಸಿ ಬೆಳೆಸಿದ ಧೀಮಂತರು. ದೇಶದ ವಿಭಜನೆಯ ಕಷ್ಟಕಾಲದಲ್ಲಿ ಗೋಹತ್ಯಾ ನಿಷೇಧದ ಕರೆ ನೀಡಿದ್ದು, ನೂರಾರು ಬಡ ಕುಟುಂಬದವರಿಗೆ ಉಚಿತ ಉಪನಯನ ವಿವಾಹಾದಿಗಳನ್ನು ಮಾಡಿಸಿದ್ದರು, ಜಯ ಸತ್ಯಪ್ರಮೋದ ನಿಧಿಯನ್ನು ಪ್ರಾರಂಭಿಸಿ, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಹಣ ಸಹಾಯ ಮಾಡಿದ್ದಾರೆ. ಜಯತೀರ್ಥ ವಿದ್ಯಾಪೀಠದ ಸ್ಥಾಪನೆ ಮೂಲಕ ಭಾರತೀಯ ತತ್ವಶಾಸ್ತ್ರಕ್ಕೆ ಮತ್ತು ಮಧ್ವಮತಕ್ಕೆ ಹಿರಿದಾದ ಕೊಡುಗೆ ನೀಡಿದ್ದು ಮುಂತಾದವುಗಳನ್ನು ಸ್ಮರಿಸಬಹುದಾಗಿದೆ.

ಬೆಂಗಳೂರಿನ ಶ್ರೀಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಪಂ.ರಂಗಾಚಾರ್ಯ ಗುತ್ತಲ್‌, ಪ್ರಾಂಶುಪಾಲರಾದ ಪಂ.ಸತ್ಯಧ್ಯಾನಾಚಾರ್ಯ ಕಟ್ಟಿ, ಉತ್ತರಾದಿಮಠದ ಕಾರ್ಯನಿರ್ವಾಹಕ ಅಧಿಕಾರಿ ಪಂ.ವಿದ್ಯಾಧೀಶಾಚಾರ್ಯ ಗುತ್ತಲ, ಮಠದ ದೀವಾನರಾದ ಪಂ.ಶಶಿ ಆಚಾರ್ಯ, ಹೈದರಾಬಾದ್ ಉತ್ತರಾದಿ ಮಠದ ಮಠಾಧಿಕಾರಿ ಪಂ.ಜಯತೀರ್ಥಾಚಾರ್ಯ ಪಗಡಾಲ, ಪಂ.ಮುಕ್ಕುಂದಿ ಶ್ರೀಕಾಂತಾಚಾರ್ಯ ಉಪಸ್ಥಿತರಿದ್ದರು. ಭಾರತೀಯ ತತ್ವಶಾಸ್ತ್ರದ ಎಲ್ಲ ವಿಭಾಗಗಳಲ್ಲೂ ಪಾಂಡಿತ್ಯದ ಮೇರುವಾಗಿ, ವಿಶೇಷವಾಗಿ ದೈತ ದರ್ಶನವನ್ನು ವಾದ ಮಂಡನೆ ಪಾಠ ಪ್ರವಚನ ಗ್ರಂಥ ರಚನೆ ಪ್ರಾಚೀನ ಹಸ್ತಪ್ರತಿಗಳ ಸಂಗ್ರಹ ಸಂಶೋಧನೆ ಅಪರೂಪದ ಪುಸ್ತಕಗಳ ಪ್ರಕಟಣೆ ಮುಂತಾದವುಗಳಿಂದ ಶ್ರೀಮಂತವನ್ನಾಗಿಸಿದವರು. ಈ ಹಿಂದೆ, ಶಂಕರ್ ದಯಾಳ್ ಶರ್ಮಾ ಅವರು ರಾಷ್ಟ್ರಪತಿಯಾಗಿದ್ದ ವೇಳೆ ತಿರುಪತಿ ತಿರುಮಲದಲ್ಲಿ ಸತ್ಯಪ್ರಮೋದ ತೀರ್ಥರ ಪಾಂಡಿತ್ಯವನ್ನು ನೋಡಿ ಬೆರಗಾಗಿದ್ದರು.