ಸಾರಾಂಶ
ತಾಲೂಕು ಕೇಂದ್ರವಾದ ಕನಕಗಿರಿ ಪಟ್ಟಣದಲ್ಲಿ ಮೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೧೦೮೩ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಕನ್ನಡಪ್ರಭ ವಾರ್ತೆ ಕನಕಗಿರಿ
ತಾಲೂಕು ಕೇಂದ್ರವಾದ ಕನಕಗಿರಿ ಪಟ್ಟಣದಲ್ಲಿ ಮೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೧೦೮೩ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಇಂಗ್ಲಿಷ್ ಹಾಗೂ ಕನ್ನಡದ ವಿದ್ಯಾರ್ಥಿಗಳು ಕನ್ನಡ ಭಾಷೆಯ ಪರೀಕ್ಷೆ ಬರೆದರು. ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎರಡು ಪರೀಕ್ಷಾ ಕೇಂದ್ರಗಳನ್ನಾಗಿ ವಿಭಾಗಿಸಲಾಗಿದೆ. ಇನ್ನೂ ಮೂರನೇ ಪರೀಕ್ಷಾ ಕೇಂದ್ರವಾದ ರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಪರೀಕ್ಷೆ ನಡೆಯಿತು. ನಕಲು ನಡೆಯದಂತೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ೪೮ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಕೆಪಿಎಸ್‌ನ ಪರೀಕ್ಷಾ ಕೇಂದ್ರಗಳಲ್ಲಿ ಫ್ಯಾನ್‌ಗಳಿದ್ದರೂ ಇಲ್ಲದಂತಿರುವುದನ್ನು ಗಮನಿಸಿದ ತಹಸೀಲ್ದಾರ ವಿಶ್ವನಾಥ ಮುರುಡಿ ರಿಪೇರಿ ಮಾಡಿಸಲು ಸೂಚಿಸಿದರಲ್ಲದೇ ಫ್ಯಾನ್, ವಿದ್ಯುತ್ , ಕುಡಿಯವ ನೀರು ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು.ಮುಖ್ಯೋಪಾಧ್ಯಾಯರಾದ ಜಗದೀಶ ಹಾದಿಮನಿ, ಶಿವಕುಮಾರ, ಶಿಕ್ಷಕರಾದ ಮೌನೇಶ ಬಡಿಗೇರ, ತಿಪ್ಪಣ್ಣ ಹಿರೇಖೇಡ, ರಂಗಾರೆಡ್ಡಿ ಬಿ., ಪರಸಪ್ಪ ಹೊರಪೇಟೆ, ತಿಪ್ಪೇಶ ಮಲ್ಲಿಗೆವಾಡ, ಶೃತಿ ಬಿ., ಪದ್ಮಾವತಿ ವೈ. ನಾಯಕ ಸೇರಿದಂತೆ ಇತರರಿದ್ದರು.
ವಿಶೇಷಚೇತನ ಮಕ್ಕಳ ಕೊಠಡಿಗೆ ಭೇಟಿ:ವಿಶೇಷಚೇತನರ ಮಕ್ಕಳ ಪರೀಕ್ಷಾ ಕೊಠಡಿಗೆ ತಹಸೀಲ್ದಾರ ವಿಶ್ವನಾಥ ಭೇಟಿ ನೀಡಿ, ಪರಿಶೀಲಿಸಿದರು.
೭ ವಿಶೇಷಚೇತನರಿಗೆ ಪ್ರತ್ಯೇಕ ಕೊಠಡಿ ಆಯೋಜಿಸಲಾಗಿತ್ತು. ಉತ್ತಮವಾಗಿ ಪರೀಕ್ಷೆ ಬರೆದು, ಶಾಲೆಗೆ ಕೀರ್ತಿ ತರಬೇಕೆಂದು ಮಕ್ಕಳನ್ನು ಪ್ರೋತ್ಸಾಹಿಸಿದರು.ಯಲಬುರ್ಗಾದಲ್ಲಿ ಶಾಂತಿಯುತ ಪರೀಕ್ಷೆ:
ಯಲಬುರ್ಗಾ ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದಲ್ಲಿ ಒಟ್ಟು ೧೪ ಪರೀಕ್ಷೆ ಕೇಂದ್ರದಲ್ಲಿ ಶಾಂತಿಯುತವಾಗಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ನಡೆಯಿತು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀಮಂಜುನಾಥ ಪ್ರೌಢಶಾಲೆ ಹಾಗೂ ತಾಲೂಕಿನ ಬೇವೂರು, ಹಿರೇವಂಕಲಕುಂಟಾ, ಬಳೂಟಗಿ, ಹಿರೇಅರಳಿಹಳ್ಳಿ ಗ್ರಾಮಗಳ ಸರ್ಕಾರಿ ಪದವಿ ಪೂರ್ವ ಕಾಲೇಜಗಳು ಮತ್ತು ಮುಧೋಳ ತ್ರೀಲಿಂಗೇಶ್ವರ ಪ್ರೌಢಶಾಲೆ, ಚಿಕ್ಕಮ್ಯಾಗೇರಿಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪರೀಕ್ಷೆ ನಡೆಯಿತು.ಒಟ್ಟು ೪೯೫೦ ವಿದ್ಯಾರ್ಥಿಗಳ ಪೈಕಿ ೪೮೭೯ ಮಕ್ಕಳು ಪರೀಕ್ಷೆಗೆ ಹಾಜರಿದ್ದರು. ಇನ್ನೂ ೭೧ ಜನ ವಿದ್ಯಾರ್ಥಿಗಳು ಗೈರಾಗಿದ್ದರು. ೨೨೩ ಪರೀಕ್ಷೆ ಕೊಠಡಿಗಳನ್ನು ತೆರೆಯಲಾಗಿದ್ದು, ೪೬ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಎಲ್ಲಾ ಪರೀಕ್ಷೆ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಪರೀಕ್ಷೆ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ತಹಸೀಲ್ದಾರ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ, ಬಿಇಒ ಕೆ.ಟಿ. ನಿಂಗಪ್ಪ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.