ಸಾರಾಂಶ
ಅಂತರ ಶಾಲೆಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಮಂಡ್ಯ ಹಾಗೂ ಮದ್ದೂರು ತಾಲೂಕುಗಳಿಂದ ಸುಮಾರು 13ಕ್ಕೂ ಅಧಿಕ ಶಾಲೆಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಬಹುಮಾನ ವಿತರಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಎಸ್‌ಟಿಜಿ ಶಿಕ್ಷಣ ಸಂಸ್ಥೆ ದಶಮಾನೋತ್ಸವದ ಅಂಗವಾಗಿ ಶಾಲೆಯಲ್ಲಿ ಅಂತರ ಶಾಲಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆದವು.ಶಾಲೆ ಆರಂಭವಾಗಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದಶಮಾನೋತ್ಸವದ ಅಂಗವಾಗಿ ಚರ್ಚಾ ಸ್ಪರ್ಧೆ, ಇಂಗ್ಲಿಷ್ ಪೇಪರ್ ಪ್ರೆಸೆಂಟೇಷನ್, ಜಾನಪದ ನೃತ್ಯ, ದೇಶ ಭಕ್ತಿಗೀತೆ, ಬಾಲಕರಿಗೆ ವಾಲಿಬಾಲ್ ಹಾಗೂ ಬಾಲಕಿಯರಿಗೆ ಥ್ರೋ ಬಾಲ್ ಸ್ಪರ್ಧೆಗಳನ್ನು ನಡೆಸಲಾಯಿತು.
ಅಂತರ ಶಾಲೆಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಮಂಡ್ಯ ಹಾಗೂ ಮದ್ದೂರು ತಾಲೂಕುಗಳಿಂದ ಸುಮಾರು 13ಕ್ಕೂ ಅಧಿಕ ಶಾಲೆಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಬಹುಮಾನ ವಿತರಿಸಿದರು.ನಂತರ ಮಾತನಾಡಿದ ಸಂಸ್ಥೆ ಅಧ್ಯಕ್ಷರಾದ ಸಿ.ಎಸ್.ಪುಟ್ಟರಾಜು, ಕ್ರೀಡೆ ಮಕ್ಕಳ ದೈಹಿಕ ಬೆಳವಣಿಗೆಗೆ ಅತ್ಯಮೂಲ್ಯ. ಎಸ್‌ಟಿಜಿ ಶಿಕ್ಷಣ ಸಂಸ್ಥೆಯೂ ಆರಂಭಗೊಂಡು 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಮಕ್ಕಳು ಭಾಗವಹಿಸುವ ಮೂಲಕ ತಮ್ಮೊಳಗಿರುವ ಪ್ರತಿಭೆ ಹೊರಹಾಕಿದ್ದಾರೆ. ಕ್ರೀಡಾ ಸ್ಪರ್ಧೆಗಳಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯವಾಗಿದೆ ಎಂದರು.ಈ ವೇಳೆ ಶಾಲೆ ಪ್ರಾಂಶುಪಾಲೆ ಮಾಚಮ್ಮ, ಆಡಳಿತಾಧಿಕಾರಿ ನಿವೇದಿತಾ ನಾಗೇಶ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.