ಕಾಫಿಗೆ ಹಲವು ಕಾಯಿಲೆ ಗುಣಪಡಿಸುವ ಶಕ್ತಿ ಇದೆ

| Published : Oct 02 2024, 01:03 AM IST

ಸಾರಾಂಶ

ಕಾಫಿ ಬೆಳೆಗೆ ಸಾಕಷ್ಟು ಇತಿಹಾಸವಿದ್ದು, ಕಾಫಿ ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯದು

ಕನ್ನಡಪ್ರಭ ವಾರ್ತೆ ಮೈಸೂರು

ಕಾಫಿ ಬಗ್ಗೆ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿದೆ. ಕಾಫಿ ತುಂಬಾ ಆರೋಗ್ಯಕರವಾಗಿದ್ದು, ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಈಗ ಬಂದ ವರದಿಯಲ್ಲಿ ತಿಳಿದು ಬಂದಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕರ್ನಾಟಕ ಗ್ರೋವರ್ಸ್ ಫೆಡರೇಶನ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘವು ಮಂಗಳವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕಾಫಿ ಬೆಳೆಗೆ ಸಾಕಷ್ಟು ಇತಿಹಾಸವಿದ್ದು, ಕಾಫಿ ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯದು ಮತ್ತು ಆರೋಗ್ಯಕ್ಕೆ ಹಾನಿಕಾರಕರದ ಅಂಶಗಳು ಇದೆ ಎಂದು ಹಿಂದಿನ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ. ಕೆಲವು ದೇಶದಲ್ಲಿ ಕಾಫಿಗೆ ನಿಷೇಧ ಹೇರಲಾಯಿತು. ನಂತರ ಆ ನಿಷೇಧವನ್ನು ತೆಗೆದಿದ್ದಾರೆ ಎಂದರು.

ಜಗತ್ತಿನಲ್ಲೇ ರಫ್ತಿನಲ್ಲಿ ಕಾಫಿ 6ನೇ ಸ್ಥಾನದಲ್ಲಿದೆ. ಅದಕ್ಕೆ ಕಾಫಿ ಬೆಳೆಗಾರರ ಕೊಡುಗೆ ಹೆಚ್ಚಿದೆ. ಹಾಸನ, ಸಕಲೇಶಪುರ ಭಾಗದವರೇ ಹೆಚ್ಚು ಎಂಬುದೇ ಸಂತಸ ವಿಚಾರವಾಗಿದೆ. ಕಾಫಿ ಬೆಳೆಗಾರರಿಗೆ ಸಮಸ್ಯೆ ಇದೆ ಇರುತ್ತದೆ. ಬೆಳೆಯಲ್ಲಿ ಏರುಪೇರು ಆಗಬಹುದು. ಆದರೆ, ಅದಕ್ಕೆ ಎದೆಗುಂದದ್ದೆ ನಿರಂತವಾಗಿ ಕಾಫಿ ಬೆಳೆಯುವ ಕಾಯಕದಲ್ಲಿ ತೊಡಗಿಸಿಕೊಂಡರೆ ಯಶಸ್ಸು ಸಾಧಿಸಬಹುದು ಎಂದು ಅವರು ಹೇಳಿದರು.

ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ಕಾಫಿ ಬೆಳೆಯುವ ಖುಷಿ, ರಾಜಕಾರಣದಲ್ಲಿ ಸಿಗುವುದಿಲ್ಲ. ಮಲೆನಾಡು ಭಾಗದ ಮಹಿಳೆಯರು ಕಾಫಿ ಉದ್ಯಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕಾಫಿ ಬೆಳೆಗಾರರ ಪರವಾಗಿ ಸರ್ಕಾರ ಇದೆ. ದುಡ್ಡಿಗಿಂತ ಕಾಫಿ ಬೆಳೆಗಾರರನ್ನು ಪೋಷಿಸಬೇಕು. ಈಗ ಕಾಫಿಯಲ್ಲಿ ಕೂಡ ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು ಎಂದರು.

ಇಂದಿನ ಕಾಲಘಾಟ್ಟದಲ್ಲಿ ಹಲವಾರು ರೀತಿಯಲ್ಲಿ ಕಾಫಿ ಬೆಳೆಗಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಗ್ಗಟ್ಟು ಪ್ರದರ್ಶಿಸಿದರೆ ಕಾಫಿ ಬೆಳೆಗಾರರ ಪರವಾಗಿ ಹೋರಾಟ ಮಾಡಬಹುದು. ಈ ವರ್ಷ 6 ರಿಂದ 7 ತಿಂಗಳು ಉತ್ತಮ ಮಳೆ ಆಗಿದ್ದು, ಹಲವಾರು ಬೆಳೆ ಹಾನಿ ಉಂಟಾಗಿದೆ. ಅದಕ್ಕೆ ಸರ್ವೇ ಕಾರ್ಯವು ನಡೆಯುತ್ತಿದೆ. ಸಂಶೋಧನಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ತಿಳಿಸಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕರಾದ ಮಂಜುನಾಥ್, ಟಿ.ಎಸ್. ಶ್ರೀವತ್ಸ, ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಸದಸ್ಯರಾದ ಎನ್.ಬಿ. ಉದಯ್ ಕುಮಾರ್, ಜಿ.ಕೆ. ಕುಮಾರ್, ಕರ್ನಾಟಕ ಗ್ರೋವರ್ಸ್ ಫೆಡರೇಶನ್ ಅಧ್ಯಕ್ಷ ಡಾ.ಎಚ್.ಟಿ. ಮೋಹನ್ ಕುಮಾರ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಎ.ಎಸ್. ಪರಮೇಶ್, ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಕೆ.ಬಿ. ಲೋಹಿತ್, ಜಂಟಿ ಕಾರ್ಯದರ್ಶಿ ಅರುಣ್ ಕುಮಾರ್, ಖಜಾಂಚಿ ಎಂ.ಜೆ. ಸಚಿನ್ ಇದ್ದರು.