ಕೊಡಗು ಜಿಲ್ಲಾದ್ಯಂತ ಅಂತಾರಾಷ್ಟ್ರೀಯ 10ನೇ ಯೋಗ ದಿನಾಚರಣೆ

| Published : Jun 22 2024, 12:50 AM IST

ಕೊಡಗು ಜಿಲ್ಲಾದ್ಯಂತ ಅಂತಾರಾಷ್ಟ್ರೀಯ 10ನೇ ಯೋಗ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ10 ನೇ ಯೋಗ ದಿನಾಚರಣೆ ನಗರದ ಗೌಡ ಸಮಾಜದಲ್ಲಿ ಶುಕ್ರವಾರ ನಡೆಯಿತು. ಮದೆನಾಡು ಬಿಜಿಎಸ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಯೋಗ ಪ್ರದರ್ಶನ ಮೂಲಕ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ10 ನೇ ಯೋಗ ದಿನಾಚರಣೆ ನಗರದ ಗೌಡ ಸಮಾಜದಲ್ಲಿ ಶುಕ್ರವಾರ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೊಡಗು ವೈದ್ಯಕೀಯ ಶಿಕ್ಷಣ, ಜಿಲ್ಲಾ ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಸಮಾಜ ಕಲ್ಯಾಣ, ಪದವಿ ಪೂರ್ವ ಶಿಕ್ಷಣ, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕ, ನೆಹರು ಯುವ ಕೇಂದ್ರ, ಕೊಡಗು ಯುವ ಒಕ್ಕೂಟ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಯೋಗ ಭಾರತಿ, ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ, ಆರ್ಟ್ ಆಪ್ ಲಿವಿಂಗ್, ಸ್ಕೌಟ್ಸ್ ಮತ್ತು ಗೈಡ್ಸ್, ನೀಮಾ ಸಂಸ್ಥೆ ಹೀಗೆ ಸರ್ಕಾರಿ ಮತ್ತು ಸರ್ಕಾರೇತರ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ದಿನಾಚರಣೆ ನಡೆಯಿತು.

‘ಯೋಗ ಫಾರ್ ಸೆಲ್ಫ್ ಅಂಡ್ ಸೊಸೈಟಿ’ ಹೆಸರಿನಲ್ಲಿ ನಡೆದ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಯೋಗ ಶಿಕ್ಷಕ ಮಹೇಶ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯಿ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ನೀಮಾ ಜಿಲ್ಲಾ ಅಧ್ಯಕ್ಷ ಡಾ.ರಾಜಾರಾಮ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ದೇಹ ಮತ್ತು ಮನಸ್ಸಿನ ನಡುವೆ ಸಮನ್ವಯ ಸಾಧಿಸಲು ಯೋಗಾಭ್ಯಾಸ ಅಗತ್ಯವಾಗಿದೆ ಎಂದರು.

ಆರೋಗ್ಯವೇ ಭಾಗ್ಯವಾಗಿದ್ದು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗ ಸಹಕಾರಿ ಎಂದು ಹೇಳಿದರು.

ಯೋಗ/ ವ್ಯಾಯಾಮ ಮಾಡುವುದರಿಂದ ಪ್ರತಿನಿತ್ಯ ಚಟುವಟಿಕೆಯಿಂದ ಇರಲು ಸಾಧ್ಯ. ಆ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ವ್ಯಾಯಾಮ ಮಾಡುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಯೋಗ ಶಿಕ್ಷಕ ಮಹೇಶ್ ಕುಮಾರ್ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹಲವು ದಿನಗಳಿಂದ ಯೋಗ ಪೂರ್ವಾಭ್ಯಾಸ ನಡೆಸಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ ಮಾತನಾಡಿ, ಯೋಗ ದಿನಾಚರಣೆಗೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಕೈಜೋಡಿಸಿ ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.

ಯೋಗ ಶಿಕ್ಷಕ ಮಹೇಶ್ ಕುಮಾರ್ಯೋಗಾಭ್ಯಾಸ ಶಿಕ್ಷಣ ನೀಡಿದರು. ಸೂರ್ಯ ನಮಸ್ಕಾರ, ವೃಕ್ಷಾಸನ, ಪಾದಹಸ್ತಾಸನ, ಉರ್ದ್ವಾಸನ, ತಾಡಾಸನ, ಅರ್ಧ ಮತ್ಸೇಂದ್ರಾಸನ, ಭುಜಂಗಾಸನ, ಪವನಮುಕ್ತಾಸನ, ಭದ್ರಾಸನ, ತ್ರಿಕೋನಾಸನ, ಉಷ್ಟ್ರಾಸನ, ವಜ್ರಾಸನ, ಶಲಭಾಸನ, ಶಶಾಂಕಾಸನ, ಮಂಡೂಕಾಸನ, ವಕ್ರಾಸನ, ಮಕರಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಶವಾಸನ, ಕಪಾಲಭಾತಿ, ಶೀತಲಿ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ, ಧ್ಯಾನ, ನಾಡಿಶೋಧ ಪ್ರಾಣಾಯಾಮ ಹೀಗೆ ಹಲವು ರೀತಿಯ ಯೋಗಾಸನ ಪ್ರದರ್ಶನ ಮಾಡಲಾಯಿತು.

ಮದೆನಾಡು ಬಿಜಿಎಸ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಯೋಗ ಪ್ರದರ್ಶನ ಮೂಲಕ ಗಮನ ಸೆಳೆದರು.