ಪಿಪಿಎಫ್ ಖಾತೆದಾರರಿಗೆ 11.60 ಲಕ್ಷ ರು. ಪಾವತಿಸಲು ನ್ಯಾಯಾಲಯದ ಆದೇಶ

| Published : May 11 2024, 12:01 AM IST

ಪಿಪಿಎಫ್ ಖಾತೆದಾರರಿಗೆ 11.60 ಲಕ್ಷ ರು. ಪಾವತಿಸಲು ನ್ಯಾಯಾಲಯದ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಸುದೀರ್ಘ ವಿಚಾರಣೆಯ ನಂತರ ಇದೀಗ ಬಳಕೆದಾರರ ಆಯೋಗವು ತೀರ್ಪು ಪ್ರಕಟಿಸಿದ್ದು, ಕಾಮತರ ಖಾತೆಯ ಬಡ್ಡಿ ಹಣ ಸುಮಾರು ೧೧,೦೦,೪೪೪ ರು. ಹಾಗೂ ಅಂಚೆ ಇಲಾಖೆಯ ಸೇವಾ ನ್ಯೂನತೆಗಾಗಿ ೫೦,೦೦೦ ರು. ದಂಡ ಮತ್ತು ವ್ಯಾಜ್ಯದ ಖರ್ಚು ೧೦,೦೦೦ ರು. ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಕೇಂದ್ರ ಸರ್ಕಾರ ಪ್ರಯೋಜಿತ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್ (ಪಿಪಿಎಫ್)‌ನಲ್ಲಿ ಹಣ ತೊಡಗಿಸಿದ ಕಾರ್ಕಳದ ಹಿರಿಯ ನಾಗರಿಕ ವೆಂಕಟೇಶ್‌ ಕಾಮತ್‌ ಎಂಬವರಿಗೆ ೧೧ ಲಕ್ಷ ರು.ಗಳಷ್ಟು ಬಡ್ಡಿ ಮೊತ್ತವನ್ನು ನೀಡಲು ನಿರಾಕರಿಸಿದ ಪ್ರಕರಣದಲ್ಲಿ ಅಂಚೆ ಇಲಾಖೆಯ ಸೇವಾ ನ್ಯೂನತೆಗಾಗಿ ಜಿಲ್ಲಾ ಬಳಕೆದಾರರ ನ್ಯಾಯಾಲಯವು ಬಡ್ಡಿಯ ಮೊತ್ತದೊಂದಿಗೆ ೫೦ ಸಾವಿರ ರು. ದಂಡವನ್ನು ವಿಧಿಸಿದೆ.

ಈ ಬಗ್ಗೆ ಹೋರಾಟ ನಡೆಸಿದ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವಿಂದ್ರ ಶ್ಯಾನುಭಾಗ್ಯೀ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾರ್ಕಳದ ಸಾಣೂರಿನ ವೆಂಕಟೇಶ ಕಾಮತ್‌ ಅವರು 2001ರಲ್ಲಿ ತಮ್ಮ ಕುಟುಂಬ ಸದಸ್ಯರ ರಕ್ಷಣೆಗಾಗಿ ಹಾಗೂ ತಮ್ಮ ಇಳಿವಯಸ್ಸಿನ ಜೀವನಾಧಾರಕ್ಕಾಗಿ ಕಾರ್ಕಳದ ಅಂಚೆ ಕಚೇರಿಯಲ್ಲಿ 15 ವರ್ಷಗಳ ಅವಧಿಯ ಕುಟುಂಬ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್ ಖಾತೆಯನ್ನು ತೆರೆದಿದ್ದರು. ಪ್ರತಿ ವರ್ಷ ಪಿ.ಪಿ.ಎಫ್‌ ದೇಣಿಗೆಯನ್ನು ತಪ್ಪದೇ ಪಾವತಿಸುತ್ತಿದ್ದರು.

೨೦೧೬ರಲ್ಲಿ ತಮ್ಮ ಹಣವನ್ನು ಹಿಂದೆ ಪಡೆಯಲು ಅಂಚೆ ಕಚೇರಿಯನ್ನು ಸಂಪರ್ಕಿಸಿದರು. ಆಗ ಅಂಚೆ ಅಧಿಕಾರಿಗಳು ಈ ಖಾತೆಯನ್ನು 5 ವರ್ಷಗಳ ಕಾಲ ವಿಸ್ತರಿಸಲು ಅವಕಾಶವಿದೆ ಎಂದು ಹೇಳಿದಂತೆ ಕಾಮತ್ ಅವರು, ಖಾತೆಯನ್ನು ೨೦೨೧ರ ವರೆಗೆ ಮುಂದುವರಿಸಿದರು. ೨೦೨೧ರಲ್ಲಿ ಮತ್ತೆ ಅಂಚೆ ಅಧಿಕಾರಿಗಳ ಸಲಹೆಯಂತೆ ಇನ್ನೂ ಐದು ವರ್ಷಗಳ ವರೆಗೆ ಮುಂದುವರಿಸಿದರು.

2023ರಲ್ಲಿ ಅದೇ ಅಂಚೆ ಅಧಿಕಾರಿ, ಕಾಮತರಿಗೆ ನೋಟಿಸ್ ನೀಡಿ, ತಮ್ಮ ಪಿ.ಪಿ.ಎಫ್‌. ಖಾತೆಯನ್ನು ತಕ್ಷಣವೇ ಮುಕ್ತಾಯಗೊಳಿಸುವಂತೆ, ಸೂಕ್ತ ದಾಖಲೆಗಳೊಂದಿಗೆ ಅಂಚೆ ಕಚೇರಿಗೆ ಭೇಟಿ ನೀಡಬೇಕೆಂದು ಹೇಳಿದ್ದರು.

ಗಾಬರಿಗೊಂಡ ಕಾಮತರು ಕೂಡಲೇ ಅಂಚೆ ಮಾಸ್ಟರರನ್ನು ಭೇಟಿ ಮಾಡಿ ವಿಚಾರಿಸಿದಾಗ ೨೦೦೫ರಲ್ಲಿ ಹೊಸ ನಿಯಮವೊಂದು ಜಾರಿಯಾಗಿದ್ದು, ಇನ್ನು ಮುಂದೆ ಪಿ.ಪಿ.ಎಫ್. ಖಾತೆಗಳನ್ನು ವೈಯಕ್ತಿಕ ನೆಲೆಯಲ್ಲಿ ಮಾತ್ರ ತೆರೆಯಬಹುದು, ಕುಟುಂಬ ಖಾತೆಯನ್ನು ತೆರೆಯಲು ಅವಕಾಶವಿಲ್ಲ. ಆದ್ದರಿಂದ ೨೦೦೫ರ ನಂತರ ಖಾತೆಗೆ ಬಡ್ಡಿ ಕೊಡಲಾಗುವುದಿಲ್ಲ ಎಂದು ಹೇಳಿದರು.

ತಮಗೆ ಅಂಚೆ ಅಧಿಕಾರಿಗಳು 2005ರ ನಂತರವೂ ಕುಟಂಬ ಪಿಪಿಎಫ್ ಖಾತೆಯನ್ನು ಮುಂದುವರಿಸಲು ತಪ್ಪು ಮಾಹಿತಿ ನೀಡಿದ ಬಗ್ಗೆ ಅವರು ಮೇಲಧಿಕಾರಿಗೆ ಲಿಖಿತವಾಗಿ ಪತ್ರ ಬರೆದು ಪ್ರತಿಭಟಿಸಿದರು.

ಅದಕ್ಕೆ ಅಂಚೆ ಇಲಾಖೆಯ ಲೆಕ್ಕ ಪರಿಶೋಧಕರು 2023ರಲ್ಲಿ ಖಾತೆಗಳ ಪರಿಶೀಲನೆ ನಡೆಸುತ್ತಿದ್ದಾಗ ಈ ವಿಚಾರ ಗಮನಕ್ಕೆ ಬಂತು. ಆದುದರಿಂದ ೨೦೨೩ರಲ್ಲಿಯೇ ನಿಮ್ಮ ಖಾತೆಯನ್ನು ೩೨,೬೩,೯೦೨ ರು.ಗಳಿಗೆ ಮುಕ್ತಾಯಗೊಳಿಸಲಾಗಿದೆ. ಈಗಾಗಲೇ ನೀಡಿರುವ ಅಧಿಕ ಬಡ್ಡಿ ೧೦,೪೪,೨೮೬ ರು.ಗಳನ್ನು ಕಳೆದು ಉಳಿದ ೨೨,೧೯,೬೧೬ ರು.ಗಳನ್ನು ಮಾತ್ರ ನೀಡಲಾಗುತ್ತದೆ ಎಂದು ಲಿಖಿತ ವಿವರಣೆ ನೀಡಿದರು.

ಈ ಬಗ್ಗೆ ಕಾಮತರು ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನಕ್ಕೆ ದೂರು ನೀಡಿದರು. ಪ್ರತಿಷ್ಠಾನವು ಅಂಚೆ ಸಚಿವಾಲಯಕ್ಕೂ, ಅರ್ಥಿಕ ಸಚಿವಾಲಯಕ್ಕೂ ಪ್ರತಿಭಟನಾ ಪತ್ರ ಬರೆಯಿತು. ೨೦೦೫ರಲ್ಲಿ ಜಾರಿಗೊಳಿಸಬೇಕಾದ ಹೊಸ ನಿಯಮವನ್ನು ಎರಡು ದಶಕಗಳ ಕಾಲ ಪಾಲಿಸದೇ ಬಳಕೆದಾರರಿಗೆ ನಷ್ಟ ಉಂಟು ಮಾಡಿದ ನೂರಾರು ಪ್ರಕರಣಗಳ ಕುರಿತು ಅವರ ಗಮನ ಸೆಳೆಯಲಾಯಿತು. ವಿವಿಧ ನ್ಯಾಯಾಲಯಗಳಲ್ಲಿ ಹಾಗೂ ಬಳಕೆದಾರರ ಆಯೋಗ ಬಳಕೆದಾರರ ಪರವಾಗಿ ಆದೇಶ ನೀಡಿದರೂ ನಿಯಮ ನಿರ್ಲಕ್ಷಿಸಿ ಪಿ.ಪಿ.ಎಫ್‌. ಖಾತೆ ಮುಂದುವರಿಸಿದ ಸ್ಟೇಟ್‌ ಬ್ಯಾಂಕ್‌ ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಏಕಿಲ್ಲ ಎಂದು ಕೇಳಿತು. ಇದುವರೆಗೂ ಈ ಎರಡು ಇಲಾಖೆಯಿಂದ ಯಾವ ಉತ್ತರವೂ ಬಂದಿಲ್ಲ.

ನಂತರ ಉಡುಪಿಯ ಬಳಕೆದಾರರ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ಸುದೀರ್ಘ ವಿಚಾರಣೆಯ ನಂತರ ಇದೀಗ ಬಳಕೆದಾರರ ಆಯೋಗವು ತೀರ್ಪು ಪ್ರಕಟಿಸಿದ್ದು, ಕಾಮತರ ಖಾತೆಯ ಬಡ್ಡಿ ಹಣ ಸುಮಾರು ೧೧,೦೦,೪೪೪ ರು. ಹಾಗೂ ಅಂಚೆ ಇಲಾಖೆಯ ಸೇವಾ ನ್ಯೂನತೆಗಾಗಿ ೫೦,೦೦೦ ರು. ದಂಡ ಮತ್ತು ವ್ಯಾಜ್ಯದ ಖರ್ಚು ೧೦,೦೦೦ ರು. ಆದೇಶಿಸಿದೆ ಎಂದು ಶ್ಯಾನುಭಾಗ್ ಹೇಳಿದರು.

ಈ ಸಂದರ್ಭದಲ್ಲಿ ಖಾತೆದಾರರಾದ ಹಿರಿಯ ನಾಗರಿಕ ವೆಂಕಟೇಶ್‌ ಕಾಮತ್ ಉಪಸ್ಥಿತರಿದ್ದರು.