ರಾಜ್ಯದಲ್ಲಿ 11.80ಲಕ್ಷ ಅನುಮಾನಾಸ್ಪದ ಪಿಂಚಣಿದಾರರು

| Published : Jul 23 2025, 02:14 AM IST

ರಾಜ್ಯದಲ್ಲಿ 11.80ಲಕ್ಷ ಅನುಮಾನಾಸ್ಪದ ಪಿಂಚಣಿದಾರರು
Share this Article
  • FB
  • TW
  • Linkdin
  • Email

ಸಾರಾಂಶ

ಅರ್ಹ ವ್ಯಕ್ತಿಗಳಿಗೆ ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿಯ ಪ್ರಯೋಜನ ದೊರೆಯಬೇಕು

ಕಾರವಾರ: ರಾಜ್ಯದಲ್ಲಿ ಸುಳ್ಳು ದಾಖಲೆ ಸಲ್ಲಿಸಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ 11.80 ಲಕ್ಷ ಅನುಮಾನಾಸ್ಪದ ಪ್ರಕರಣಗಳು ಕಂಡು ಬಂದಿದ್ದು, ಇವುಗಳ ನೈಜತೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಅವರು ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದರು.

ಅರ್ಹ ವ್ಯಕ್ತಿಗಳಿಗೆ ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿಯ ಪ್ರಯೋಜನ ದೊರೆಯಬೇಕು, ಆದರೆ ರಾಜ್ಯದಲ್ಲಿ 11.80 ಲಕ್ಷ ಮಂದಿ ಅನುಮಾನಾಸ್ಪದವಾಗಿ ಸುಳ್ಳು ದಾಖಲೆ ಸಲ್ಲಿಸಿ ವೃದ್ದಾಪ್ಯ ಪಿಂಚಣಿ ಪಡೆಯುತ್ತಿರುವುದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದ್ದು, ಇದರಲ್ಲಿ 13702 ಮಂದಿ ಆದಾಯ ತೆರಿಗೆ ಪಾವತಿದಾರರು, 117 ಮಂದಿ ಸರ್ಕಾರಿ ನೌಕರರು ಮತ್ತು ಎಪಿಎಲ್ ಕಾರ್ಡುದಾರರಿದ್ದಾರೆ.

ಆಧಾರ್ ಪರಿಶೀಲನೆ ವೇಳೆಯಲ್ಲಿ ಇವರ ವಯಸ್ಸು ಯೋಜನೆಗೆ ಅರ್ಹವಾದ ವಯಸ್ಸಿಗಿಂತ ಕಡಿಮೆ ಇರುವುದು ಕಂಡು ಬಂದಿದೆ. ಅಲ್ಲದೇ ಆರೋಗ್ಯಕರವಾಗಿರುವವರು ಕೂಡಾ ವಿಕಲಚೇತನ ಪ್ರಮಾಣ ಪತ್ರ ಪಡೆದು ವಿಕಲಚೇತನರ ಪಿಂಚಣಿ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇಂತಹ ಪ್ರಕರಣಗ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು, ಇದು ಸರ್ಕಾರಕ್ಕೆ ಮಾಡುವ ವಂಚನೆ ಮಾತ್ರವಲ್ಲದೇ ಸಾರ್ವಜನಿಕರಿಗೆ ಮಾಡುವ ವಂಚನೆಯಾಗಿದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 11956 ಮಂದಿ ಈ ರೀತಿಯಾಗಿ ಅನುಮಾನಾಸ್ಪದವಾಗಿ ಪಿಂಚಣಿ ಪಡೆಯುತ್ತಿದ್ದು, ಇದರಲ್ಲಿ 351 ಮಂದಿ ಆದಾಯ ತೆರಿಗೆ ಪಾವತಿದಾರರು ಎಂದರು.

ರಾಜ್ಯದಲ್ಲಿ ಪೌತಿ ಖಾತೆ ಆಂದೋಲನವನ್ನು ಆನ್‌ಲೈನ್ ಮೂಲಕ ಆರಂಭ ಮಾಡಲಾಗಿದ್ದು, ರಾಜ್ಯದಲ್ಲಿ 52.55 ಲಕ್ಷ ಜಮೀನುಗಳು ಮೃತ ರೈತರ ಹೆಸರಿನಲ್ಲಿ ಮುಂದುವರದಿದ್ದು ಕೇಂದ್ರ ಸರ್ಕಾರ ಮೃತರ ಹೆಸರಿನಲ್ಲಿ ಇರುವ ಜಮೀನುಗಳಿಗೆ ಪಿಎಂ ಕಿಸಾನ್ ಸೇರಿದಂತೆ ಇತರೇ ಯೋಜನೆಗಳ ಸಬ್ಸಡಿ ನೀಡಿದಂತೆ ಸೂಚಿಸಿದ್ದು ಇದರಿಂದ ಮೃತರ ಹೆಸರಿನಲ್ಲಿರುವ ಜಮಿನುಗಳನ್ನು ಅವರ ವಾರಸುದಾರಿಗೆ ಖಾತೆ ಬದಲಾವಣೆ ಮಾಡುವ ಅನಿವಾರ್ಯತೆ ಇದೆ. ಇದಕ್ಕಾಗಿ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಜನರ ಮನೆ ಬಾಗಿಲಿಗೆ ತೆರಳಿ ಖಾತೆ ಬದಲಾವಣೆ ಮಾಡಿ ಕೊಡಲಾಗುತ್ತಿದೆ. ರಾಜ್ಯದಲ್ಲಿ ಒಂದು ತಿಂಗಳ ಅವಧಿಯಲ್ಲಿ 20000 ರೈತರ ಜಮೀನುಗಳನ್ನು ಮೃತರ ವಾರಿಸುದಾರರಿಗೆ ವರ್ಗಾವಣೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯ ಇನಷ್ಟು ಶೀಘ್ರದಲ್ಲಿ ಮಾಡಲಾಗುವುದು. ಉತ್ತರ ಕನ್ನಡ ಜಿಲ್ಲೆಯಲ್ಲಿ 1.90 ಲಕ್ಷ ಜಮೀನುಗಳು 57000 ಮೃತ ರೈತರ ಹೆಸರಿನಲ್ಲಿವೆ, 6 ತಿಂಗಳಲ್ಲಿ ಇದನ್ನು ಅವರ ವಾರಿಸುದಾರರಿಗೆ ಉಚಿತವಾಗಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕಂದಾಯ ದಾಖಲೆಗಳ ನಕಲಿ ಸೃಷ್ಠಿ, ತಿದ್ದುಪಡಿ ಮತ್ತು ಪೋರ್ಜರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಅಂದಾಜು 100 ಕೋಟಿ ಪುಟಗಳ ಕಂದಾಯ ದಾಖಲೆಗಳಲ್ಲಿ ಇದುವರೆಗೆ 33.1 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದ್ದು, ಮುಂದಿನ 6 ತಿಂಗಳ ಒಳಗೆ ಈ ಎಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಸೂಚನೆ ನೀಡಲಾಗಿದೆ. ಇದರಿಂದ ಸಾರ್ವಜನಿಕರು ತಮ್ಮ ಕಂದಾಯ ದಾಖಲೆಗಳಿಗೆ ತಾಲೂಕು ಕಚೇರಿಗೆ ಅಲೆದಾಡದೇ ಮನೆಯಲ್ಲಿಯೇ ಕುಳಿತು ಭೂ ಸುರಕ್ಷಾ ಆನ್ ಲೈನ್ ಪೋರ್ಟಲ್ ಮೂಲಕ ಅಧಿಕೃತವಾಗಿ ಉಚಿತವಾಗಿ ಪಡೆಯಬಹುದು ಎಂದರು.

ಕಂದಾಯ ಇಲಾಖೆಯಲ್ಲಿ ಜನಪರ ಆಡಳಿತ ಸುಧಾರಣೆಯು ಎಲ್ಲ ಹಂತದಲ್ಲಿ ನಡೆಯುತ್ತಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ತಹಸೀಲ್ದಾರ್ ಕೋರ್ಟನಲ್ಲಿ ಈ ಹಿಂದೆ ಕೇಸ್ ಬಾಕಿಯಿದ್ದ ಅವಧಿ ಮೀರಿದ 10774 ಪ್ರಕರಣ ಆಂದೋಲನ ಮಾದರಿಯಲ್ಲಿ ವಿಲೇ ಮಾಡಲಾಗುತ್ತಿದ್ದು ಪ್ರಸ್ತುತ ಇವುಗಳ ಸಂಖ್ಯೆಯನ್ನು 457ಕ್ಕೆ ಇಳಿಸಲಾಗಿದೆ. ಎಸಿ ಕೋರ್ಟ್ ನಲ್ಲಿದ್ದ 62857ಅವಧಿ ಮೀರಿದ ಪ್ರಕರಣ ಪ್ರಸ್ತುತ 19219 ಕ್ಕೆ ಇಳಿದಿದ್ದು, ಶೇ. 66 ವಿಲೇವಾರಿ ಮಾಡಲಾಗಿದೆ ಎಂದರು.

ಸಭೆಯಲ್ಲಿ ಶಾಸಕ ಸತೀಶ್ ಸೈಲ್, ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಅಪರ ಜಿಲ್ಲಾದಿಕಾರಿ ಸಾಜಿದ್ ಮುಲ್ಲಾ, ಎಎಸ್ಪಿ ಜಗದೀಶ್, ಭೂ ದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ಉಮೇಶ್ ಮತ್ತಿತರರು ಇದ್ದರು.