ಅಕ್ರಮ ಹಣ ವರ್ಗಾವಣೆ ಸಂಬಂಧ ಟೆಕ್ಕಿಗೆ ಡಿಜಿಟೆಲ್‌ ಆರೆಸ್ಟ್‌ ಮಾಡಿ ₹11.83 ಕೋಟಿ ವಂಚನೆ

| Published : Dec 24 2024, 01:30 AM IST / Updated: Dec 24 2024, 08:16 AM IST

ಸಾರಾಂಶ

ಅಕ್ರಮ ಹಣ ವರ್ಗಾವಣೆ ಸಂಬಂಧ ಡಿಜಿಟೆಲ್‌ ಅರೆಸ್ಟ್‌ ಮಾಡಿ 1 ತಿಂಗಳು ನಗರದ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರನ್ನು ಬೆದರಿಸಿರುವ ಸೈಬರ್‌ ವಂಚಕರು, ವಿವಿಧ ಹಂತಗಳಲ್ಲಿ ಬರೋಬ್ಬರಿ ₹11.83 ಕೋಟಿ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.

 ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಸಂಬಂಧ ಡಿಜಿಟೆಲ್‌ ಅರೆಸ್ಟ್‌ ಮಾಡಿ 1 ತಿಂಗಳು ನಗರದ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರನ್ನು ಬೆದರಿಸಿರುವ ಸೈಬರ್‌ ವಂಚಕರು, ವಿವಿಧ ಹಂತಗಳಲ್ಲಿ ಬರೋಬ್ಬರಿ ₹11.83 ಕೋಟಿ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.

ಜಕ್ಕೂರು ನಿವಾಸಿ ಕೆ.ಎಸ್‌.ವಿಜಯ್‌ ಕುಮಾರ್‌ ಮೋಸಹೋದ ವ್ಯಕ್ತಿ. ಇವರು ನೀಡಿದ ದೂರಿನ ಮೇರೆಗೆ ಈಶಾನ್ಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ಏನಿದು ಪ್ರಕರಣ?

ನ.11ರಂದು ವಿಜಯ್‌ ಕುಮಾರ್‌ ಮೊಬೈಲ್‌ಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯ ತಾನು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ದಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಮೊಬೈಲ್‌ ಸಂಖ್ಯೆಯಿಂದ ತುಂಬಾ ಮೆಸೇಜ್‌ಗಳು ಹಾಗೂ ಜಾಹೀರಾತುಗಳು ಡೆಲಿವರಿಯಾಗಿವೆ. ಈ ಸಂಬಂಧ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ನಿಮ್ಮ ಸಿಮ್‌ ಕಾರ್ಡ್‌ ಬ್ಲಾಕ್‌ ಮಾಡುತ್ತಿರುವುದಾಗಿ ಹೇಳಿದ್ದಾನೆ.

ಡಿಜಿಟೆಲ್ ಅರೆಸ್ಟ್‌ ಡ್ರಾಮಾ:

ಮುಂದುವರೆದು, ನಿಮ್ಮ ಆಧಾರ್‌ ಕಾರ್ಡ್‌ ಸಂಖ್ಯೆ ಬಗ್ಗೆ ಮುಂಗೈ ಕೊಲಾಬಾ ಕ್ರೈಂ ಬ್ರಾಂಚ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಆಧಾರ್‌ ಕಾರ್ಡ್‌ ಸಂಖ್ಯೆ ಬಳಸಿಕೊಂಡು ನರೇಶ್‌ ಗೋಯೆಲ್‌ ಎಂಬಾತ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ₹6 ಕೋಟಿ ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಂಡಿದ್ದಾನೆ. ಹೀಗಾಗಿ ನಿಮ್ಮನ್ನು ಡಿಜಿಟೆಲ್‌ ಅರೆಸ್ಟ್‌ ಮಾಡುತ್ತಿರುವುದಾಗಿ ಅಪರಿಚಿತ ವ್ಯಕ್ತಿ ಹೆದರಿಸಿದ್ದಾನೆ.

₹11.83 ಕೋಟಿ ವರ್ಗಾಯಿಸಿಕೊಂಡು ವಂಚನೆ:

ಬಳಿಕ ವಿಜಯ್‌ ಕುಮಾರ್‌ ಅವರಿಂದ ಸ್ಕೈಪ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಸಿ, ನ.25ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇದೆ. ಇದರಿಂದ ನಿಮ್ಮ ಕುಟುಂಬಕ್ಕೆ ಅಪಾಯವಿದೆ ಎಂದು ಭಯಪಡಿಸಿದ್ದಾನೆ. ಹೀಗಾಗಿ ದುಷ್ಕರ್ಮಿಗಳ ಸೂಚನೆ ಮೇರೆಗೆ ವಿಜಯ್‌ ಕುಮಾರ್‌ ಯಲಹಂಕದ ಲಾಡ್ಜ್‌ವೊಂದರಲ್ಲಿ 1 ತಿಂಗಳು ಉಳಿದುಕೊಂಡಿದ್ದಾರೆ. ಬಳಿಕ ದುಷ್ಕರ್ಮಿಗಳು ನ.11ರಿಂದ ಡಿ.12ರವರೆಗೆ ವಿಜಯ್‌ ಕುಮಾರ್‌ ಅವರಿಂದ ಬರೋಬ್ಬರಿ ₹11.83 ಕೋಟಿ ಹಣ ವರ್ಗಾಯಿಸಿಕೊಂಡು ಬಳಿಕ ಸಂಪರ್ಕ ಕಡಿತಗೊಳಿಸಿದ್ದಾರೆ.

2 ವಿಶೇಷ ತಂಡ ರಚನೆ:

1 ತಿಂಗಳ ಬಳಿಕ ವಿಜಯ್‌ ಕುಮಾರ್‌ಗೆ ತಾನು ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ಈಶಾನ್ಯ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸೈಬರ್‌ ವಂಚಕರ ಪತ್ತೆಗೆ 2 ವಿಶೇಷ ತಂಡ ರಚಿಸಲಾಗಿದೆ. ಹಣ ವರ್ಗಾವಣೆಯ ಬ್ಯಾಂಕ್‌ ಖಾತೆಯ ಮಾಹಿತಿ ಮೇರೆಗೆ ಪೊಲೀಸರು ವಂಚಕರ ಪತ್ತೆಗೆ ಹೊರರಾಜ್ಯಗಳಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ.