ಮಾದಕ ವಸ್ತು ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ರಾಜಸ್ಥಾನದ ಇಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಸೋಮವಾರ ಮಧ್ಯಾಹ್ನ ಬಂಧಿಸಿ, ₹1 ಲಕ್ಷ ನಗದು ಸೇರಿದಂತೆ ₹11 ಲಕ್ಷ ಮೌಲ್ಯದ ಸ್ವತ್ತನ್ನು ವಿದ್ಯಾನಗರ ಪೊಲೀಸರು ಜಪ್ತಿ ಮಾಡಿ, ತಲೆಮರೆಸಿಕೊಂಡ ಮೂವರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

- ಪಟೇಲ್ ಬಡಾವಣೆಯಲ್ಲಿ ರಾಜಸ್ಥಾನದ ಇಬ್ಬರು ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ । ಮೂವರ ಪತ್ತೆಗೆ ಪೊಲೀಸರು ಚುರುಕು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾದಕ ವಸ್ತು ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ರಾಜಸ್ಥಾನದ ಇಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಸೋಮವಾರ ಮಧ್ಯಾಹ್ನ ಬಂಧಿಸಿ, ₹1 ಲಕ್ಷ ನಗದು ಸೇರಿದಂತೆ ₹11 ಲಕ್ಷ ಮೌಲ್ಯದ ಸ್ವತ್ತನ್ನು ವಿದ್ಯಾನಗರ ಪೊಲೀಸರು ಜಪ್ತಿ ಮಾಡಿ, ತಲೆಮರೆಸಿಕೊಂಡ ಮೂವರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

ರಾಜಸ್ಥಾನದ ಜೋಧಪುರದ ಲೂಣಿ ಗ್ರಾಮದ ಹಮೀರ ನಗರದ ಮೇರಿಯನಾಡ ವಾಸಿ, ಕಾರ್ಪೆಂಟರ್ ಕೆಲಸಗಾರ ರಾಮ್ ಸ್ವರೂಪ್ (33), ಜೋಧಪುರದ ಲೂಣಿ ಗ್ರಾಮದ ಅಡುಗೆ ಕೆಲಸಗಾರ ಧೋಲಾರಾಮ್‌ (36), ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ಅಲ್ಯುಮಿನಿಯಂ ಕೆಲಸಗಾರ ದೇವ್ ಕಿಶನ್ (35) ಹಾಗೂ ಶಾಬನೂರು ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ, ಕಾಂಗ್ರೆಸ್ ಮುಖಂಡ ಎಸ್.ಜಿ. ವೇದಮೂರ್ತಿ ಶಾಮನೂರು (ಶಾಮನೂರು ವೇದ) ಬಂಧಿತ ಆರೋಪಿಗಳು.

ದಾವಣಗೆರೆ ಹೊರವಲಯದ ಜೆ.ಎಚ್.ಪಟೇಲ್ ಬಡಾವಣೆ ಪಾರ್ಕ್‌ನಲ್ಲಿ ನಾಲ್ವರು ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಎಎಸ್‌ಪಿ ಪರಮೇಶ್ವರ ಹೆಗಡೆ, ನಗಡ ಡಿವೈಎಸ್ಪಿ ಶರಣ ಬಸವೇಶ್ವರ ಭೀಮರಾವ್, ವಿದ್ಯಾನಗರ ಠಾಣೆ ಇನ್ಸಪೆಕ್ಟರ್‌ ವೈ.ಎಸ್.ಶಿಲ್ಪಾ ಮಾರ್ಗದರ್ಶನದಲ್ಲಿ ಎಸ್ಐಗಳಾದ ಜಿ.ನಾಗರಾಜ ಹಾಗೂ ಸಿಬ್ಬಂದಿ ದಾಳಿ ನಡೆಸಿದರು.

ಈ ವೇಳೆ ಆರೋಪಿಗಳಿಂದ ಸುಮಾರು ₹10 ಲಕ್ಷ ಮೌಲ್ಯದ ಒಟ್ಟು 90 ಗ್ರಾಂ ಎಂಡಿಎಂಎ, 200 ಗ್ರಾಂ ಒಪಿಎಂ ಎಂಬ ಮಾದಕ ವಸ್ತುಗಳು ಹಾಗೂ ₹1 ಲಕ್ಷ ಸೇರಿದಂತೆ ಒಟ್ಟು ₹11 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರ ಪೈಕಿ ರಾಮ್ ಸ್ವರೂಪ್ ಮೇಲೆ ರಾಜಸ್ಥಾನದ ಜೋಧಪುರದಲ್ಲಿ ಎನ್‌ಡಿಪಿಎಸ್‌ ಹಾಗೂ ಆರ್ಮ್ಸ್‌ ಆಕ್ಟ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತನಿಖೆ ಮುಂದುವರಿದಿದೆ.

ವಿದ್ಯಾನಗರದ ಠಾಣೆ ಸಿಬ್ಬಂದಿ ಗೋಪಿನಾಥ ಬಿ. ನಾಯ್ಡು, ವಿ.ಮಾಲೇಶ, ಅಂಬರೀಷ, ಸ್ವಾಮಿಲಿಂಗಪ್ಪ, ರವಿಕುಮಾರ, ಕೊಟ್ರೇಶ, ಎನ್.ಎ. ಬಸವರಾಜ, ಮಾದಕ ದ್ರವ್ಯ ನಿಗ್ರಹ ಪಡೆಯ ವಿಭಾಗದ ಎಸ್ಐ ಸಾಗರ್ ಅತ್ತರವಾಲಾ, ಎಚ್.ಪ್ರಕಾಶ, ಎಸ್.ಗೋವಿಂದರಾಜ, ಎಂ.ಮಂಜಪ್ಪ, ಕೆ.ಷಣ್ಮುಖ, ಎಂ.ಎಸ್. ಶಿವರಾಜ ದಾಳಿಯಲ್ಲಿ ಪಾಲ್ಗೊಂಡಿದ್ದರು.

- - -

(ಬಾಕ್ಸ್‌)

* ವೇದ ಹಿಂಬಾಲಕರ ಬಗ್ಗೆಯೂ ತನಿಖೆ: ಎಸ್‌ಪಿ ಉಮಾ ದಾವಣಗೆರೆ: ಮಾದಕ ವಸ್ತುಗಳ ಕೇಸ್‌ನಲ್ಲಿ ಭಾಗಿಯಾದವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದ್ದಾರೆ.

ದಾವಣಗೆರೆ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ವಿದ್ಯಾನಗರ ಪೊಲೀಸರು ದಾಳಿ ಮಾಡಿ, ನಾಲ್ವರನ್ನು ಬಂಧಿಸಿದ್ದಾರೆ. ಪರಾರಿಯಾಗಿ ತಲೆಮರೆಸಿಕೊಂಡವರನ್ನೂ ಬಂಧಿಸುತ್ತೇವೆ. ಬಂಧಿತರಿಂದ ಒಟ್ಟು 290 ಗ್ರಾಂ ಸಿಂಥೆಟಿಕ್ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ ಎಂದರು.

ಬಂಧಿತರು ಇಲ್ಲಿಗೆ ಮಾದಕ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದಾರೆಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಶಾಮನೂರು ವೇದ ಅಲಿಯಾಸ್ ಜಿ.ಎಸ್. ವೇದಮೂರ್ತಿ ತನ್ನ ಸ್ನೇಹಿತರಿಗೂ ಡ್ರಗ್ಸ್ ಪೂರೈಸುತ್ತಿದ್ದನೆಂಬುದು ಕಂಡುಬಂದಿದೆ. ನಿನ್ನೆಯಷ್ಟೇ ಪ್ರಕರಣ ದಾಖಲಾಗಿದೆ. ಇದನ್ನೆಲ್ಲಾ ಗಮನಿಸಿದಾಗ ಕಾಂಗ್ರೆಸ್ ಮುಖಂಡರೂ ಇದರ ಹಿಂದಿದ್ದಾರೆಂದು ಹೇಳುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

- - -

-23ಕೆಡಿವಿಜಿ001: ಉಮಾ ಪ್ರಶಾಂತ್, ಜಿಲ್ಲಾ ಎಸ್‌ಪಿ