ಗದಗ ಜಿಲ್ಲೆಯಲ್ಲಿಯೂ 11 ಬಾಣಂತಿಯರ ಸಾವು!

| Published : Dec 10 2024, 12:31 AM IST

ಸಾರಾಂಶ

ರಾಜ್ಯಾದ್ಯಂತ ತಲ್ಲಣ ಉಂಟು ಮಾಡಿರುವ ಬಾಣಂತಿಯರ ಸಾವು ಪ್ರಕರಣ ಹಸಿರಾಗಿರುವಾಗಲೇ ಗದಗ ಜಿಲ್ಲೆಯಲ್ಲಿಯೂ ಕಳೆದ ನಾಲ್ಕೈದು ತಿಂಗಳಲ್ಲಿ 11 ಜನ ಬಾಣಂತಿಯರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಶಿವಕುಮಾರ ಕುಷ್ಟಗಿ

ಗದಗ: ರಾಜ್ಯಾದ್ಯಂತ ತಲ್ಲಣ ಉಂಟು ಮಾಡಿರುವ ಬಾಣಂತಿಯರ ಸಾವು ಪ್ರಕರಣ ಹಸಿರಾಗಿರುವಾಗಲೇ ಗದಗ ಜಿಲ್ಲೆಯಲ್ಲಿಯೂ ಕಳೆದ ನಾಲ್ಕೈದು ತಿಂಗಳಲ್ಲಿ 11 ಜನ ಬಾಣಂತಿಯರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ನವೆಂಬರ್ ವರೆಗೆ ಒಟ್ಟು 11 ಬಾಣಂತಿಯರು‌ ಸಾವನ್ನಪ್ಪಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಜನರಲ್ಲಿ ಜಾಗೃತಿ ಮೂಡಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದೆಲ್ಲದರ ಮಧ್ಯೆ ಇಷ್ಟೊಂದು ಬಾಣಂತಿಯರ ಸಾವು ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ.

ಜಿಲ್ಲಾಸ್ಪತ್ರೆಯಲ್ಲೇ ಹೆಚ್ಚು ಸಾವು

ಕಳೆದ ಕೆಲವು ತಿಂಗಳಲ್ಲಿ ಜಿಲ್ಲೆಯಲ್ಲಿ ಸಾವನ್ನಪ್ಪಿರುವ ಬಾಣಂತಿಯರಲ್ಲಿ ಹೆಚ್ಚಿನ ಸಾವು ಸಂಭವಿಸಿರುವುದು ಜಿಲ್ಲಾ ಆಸ್ಪತ್ರೆಯಲ್ಲಿಯೇ. ಸಾವಿಗೆ ಬೇರೆ ಬೇರೆ ಕಾರಣಗಳಿವೆ ಎನ್ನುವುದನ್ನು ಆಸ್ಪತ್ರೆಯಲ್ಲಿನ ಹಿರಿಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆಯವರು ಖಚಿತ ಪಡಿಸುತ್ತಾರೆ. ಆದರೆ, ಬಾಣಂತಿಯರ ಸಾವು ಎನ್ನುವುದು ಒಂದು ಕುಟುಂಬಕ್ಕೆ ಅತೀವ ನೋವು ಕೊಡುವ ಮತ್ತು ಜನಿಸುವ ಮಗು ಹುಟ್ಟುತ್ತಲೇ ಅನಾಥವಾಗುವ ಹಿನ್ನೆಲೆಯಲ್ಲಿ ವೈದ್ಯರು ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿನ ಜನರಲ್ಲಿ ಇನ್ನೂ ಹೆಚ್ಚಿನ ತಿಳಿವಳಿಕೆ ಮೂಡಿಸಬೇಕಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಇಲ್ಲಿನ ಸಾವುಗಳೇ ಬೇರೆ

ಬಳ್ಳಾರಿ ಜಿಲ್ಲೆಯಲ್ಲಿ ನಡೆದಿರುವ ಬಾಣಂತಿಯರ ಸರಣಿ ಸಾವಿಗೂ ಗದಗ ಜಿಲ್ಲೆಯಲ್ಲಿ 11 ಜನ ಬಾಣಂತಿಯರ ಸಾವೇ ಬೇರೆ. ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಔಷಧಿ ಪೂರೈಕೆ ಮಾಡಿರುವ ಕಂಪನಿ (ಪಶ್ಚಿಮ ಬಂಗಾಳ) ಒಂದೇ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಬೇಗನೇ ಎಚ್ಚೆತ್ತುಕೊಂಡು ಆ ಕಂಪನಿಯಿಂದ ಪೂರೈಕೆ ಮಾಡಿದ ಔಷಧಿಗಳ ಬಳಕೆ ಸ್ಥಗಿತಗೊಳಿಸಿ, ಎಲ್ಲ ಆಸ್ಪತ್ರೆಗಳಿಂದ ಮರಳಿ ಪಡೆದು ಸಂಗ್ರಹಿಸಿದ್ದಾರೆ. ಹಾಗಾಗಿ, ಗದಗ ಜಿಲ್ಲೆಯಲ್ಲಿನ ಬಾಣಂತಿಯರ ಸಾವಿಗೆ ಅನ್ಯ ಕಾರಣಗಳಿವೆ ಎನ್ನುತ್ತಾರೆ ಜಿಮ್ಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು. ಇನ್ಶಿಟ್ಯೂಶನ್‌ ಆಡಿಟ್

ಗದಗ ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಇಲ್ಲಿ ವರೆಗೆ 11 ಬಾಣಂತಿಯರ ಸಾವು ಸಂಭವಿಸಿದೆ. ಆದರೆ, ಈ ಸಾವುಗಳು ಬೇರೆ ಬೇರೆ ಕಾರಣಗಳಿಂದ ಆಗಿವೆ. ಈಗಾಗಲೇ ಈ ಕುರಿತು ಇನ್ಶಿಟ್ಯೂಶನ್‌ ಆಡಿಟ್ ಮಾಡಲಾಗಿದೆ, ಕಮ್ಯೂನಿಟಿ ಆಡಿಟ್ ಪೂರ್ಣಗೊಂಡಿದೆ. ಮೃತರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಸಾವು ಸಂಭವಿಸಿದ ಆಸ್ಪತ್ರೆಗಳ ವೈದ್ಯರು, ಅಲ್ಲಿನ ಸಿಬ್ಬಂದಿ ಸೇರಿದಂತೆ ಎಲ್ಲರ ವಿಚಾರಣೆ ನಡೆಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಚರ್ಚಿಸಿ ಅಗತ್ಯ ದಾಖಲೆಗಳೊಂದಿಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಬಳ್ಳಾರಿ ಪ್ರಕರಣಗಳೇ ಬೇರೆ ಗದಗ ಜಿಲ್ಲೆಯ ಪ್ರಕರಣಗಳೇ ಬೇರೆ. ಗದಗ ಜಿಲ್ಲೆಯಲ್ಲಿ ಇನ್ನಿತರ ಕಾರಣಗಳಿಂದಾಗಿ ಸಾವು ಸಂಭವಿಸಿದೆ. ಇದನ್ನು ಕಡಿಮೆ ಮಾಡಲು ವಿಶೇಷ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗದಗ ಡಿಎಚ್ಒ ಡಾ. ಎಸ್.ಎಸ್. ನೀಲಗುಂದ ತಿಳಿಸಿದ್ದಾರೆ.