6 ಪದವೀಧರ ಕ್ಷೇತ್ರ ಜತೆಗೆ 11 ಎಂಎಲ್‌ಸಿ ಸ್ಥಾನಕ್ಕೂ ಶೀಘ್ರ ಚುನಾವಣೆ

| Published : May 04 2024, 12:33 AM IST

ಸಾರಾಂಶ

ಪದವೀಧರ ಕ್ಷೇತ್ರಗಳಿಂದ ಆಯ್ಕೆಯಾದ ವಿಧಾನ ಪರಿಷತ್‌ ಸದಸ್ಯರ ಅಧಿಕಾರ ಅವಧಿ ಜೂನ್‌ 21ಕ್ಕೆ ಕೊನೆಗೊಳ್ಳಲಿದೆ. ಆದರೆ 11 ವಿಧಾನ ಪರಿಷತ್‌ ಸ್ಥಾನಗಳ ಅವಧಿ ಅದಕ್ಕೂ ಮೊದಲೇ ಜೂನ್‌ 17ಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಾಗಿ ಈ 11 ಸ್ಥಾನಗಳ ಚುನಾವಣೆಯೂ ಶೀಘ್ರವೇ ಘೋಷಣೆಯಾಗಲಿದೆ.

ಆತ್ಮಭೂಷಣ್‌ಕನ್ನಡಪ್ರಭ ವಾರ್ತೆ ಮಂಗಳೂರುರಾಜ್ಯದ ಆರು ಪದವೀಧರ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿರುವಂತೆಯೇ ಶಾಸಕರಿಂದ ಆಯ್ಕೆಯಾಗುವ ಇನ್ನೂ 11 ವಿಧಾನಪರಿಷತ್‌ ಸ್ಥಾನಗಳಿಗೂ ಶೀಘ್ರವೇ ಚುನಾವಣೆ ದಿನಾಂಕ ಪ್ರಕಟವಾಗಲಿದೆ.

ಪದವೀಧರ ಕ್ಷೇತ್ರಗಳಿಂದ ಆಯ್ಕೆಯಾದ ವಿಧಾನ ಪರಿಷತ್‌ ಸದಸ್ಯರ ಅಧಿಕಾರ ಅವಧಿ ಜೂನ್‌ 21ಕ್ಕೆ ಕೊನೆಗೊಳ್ಳಲಿದೆ. ಆದರೆ 11 ವಿಧಾನ ಪರಿಷತ್‌ ಸ್ಥಾನಗಳ ಅವಧಿ ಅದಕ್ಕೂ ಮೊದಲೇ ಜೂನ್‌ 17ಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಾಗಿ ಈ 11 ಸ್ಥಾನಗಳ ಚುನಾವಣೆಯೂ ಶೀಘ್ರವೇ ಘೋಷಣೆಯಾಗಲಿದೆ. ಕರಾವಳಿಗೆ ಬಿಜೆಪಿ ಟಿಕೆಟ್‌ ಇಲ್ಲ?: ಖಾಲಿಯಾಗುವ 11 ಪರಿಷತ್‌ ಸ್ಥಾನಗಳ ಪೈಕಿ ಮಲೆನಾಡು-ಕರಾವಳಿಯ ಮೂರು ಮಂದಿ ಪರಿಷತ್‌ ಸದಸ್ಯರು ಇದ್ದಾರೆ. ಬಿಜೆಪಿಯಲ್ಲಿ ಶಿವಮೊಗ್ಗದ ರುದ್ರೇ ಗೌಡ, ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹರೀಶ್‌ ಕುಮಾರ್‌ ಹಾಗೂ ಜೆಡಿಎಸ್‌ನ ಬಿ.ಎಂ.ಫರೂಕ್‌ ಇವರ ಅವಧಿ ಮುಕ್ತಾಯಗೊಳ್ಳುತ್ತಿದೆ.

ಒಟ್ಟು 11 ಸ್ಥಾನಗಳಲ್ಲಿ 7 ಕಾಂಗ್ರೆಸ್‌, 3 ಬಿಜೆಪಿ ಹಾಗೂ 1 ಸ್ಥಾನಗಳಲ್ಲಿ ಜೆಡಿಎಸ್‌ ಗೆಲ್ಲುವ ಲೆಕ್ಕಾಚಾರ ನಡೆಯುತ್ತಿದೆ. ಬಿಜೆಪಿ ಗೆಲ್ಲುವ 3 ಸ್ಥಾನಗಳ ಪೈಕಿ ಶಿವಮೊಗ್ಗದಲ್ಲಿ ಡಾ.ಧನಂಜಯ ಸರ್ಜಿ ಹೆಸರು ಕೇಳಿಬರುತ್ತಿದೆ. ಉಡುಪಿ ಮಾಜಿ ಶಾಸಕ ರಘುಪತಿ ಭಟ್‌ ಕೂಡ ಪ್ರಮುಖ ಟಿಕೆಟ್‌ ಆಕಾಂಕ್ಷಿ. ಉಳಿದಂತೆ ಬಿಜೆಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್‌ಸಿಂಹ ನಾಯಕ್‌ ವಿಧಾನ ಪರಿಷತ್‌ ಪ್ರತಿನಿಧಿಸುತ್ತಿದ್ದಾರೆ. ಅವರ ಅವಧಿ ಇನ್ನೂ ಇದೆ. ಹಾಗಾಗಿ ಬಿಜೆಪಿ ಮತ್ತೊಮ್ಮೆ ಕರಾವಳಿಗೆ ಪರಿಷತ್‌ ಸ್ಥಾನ ನೀಡುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಬಿ.ಎಂ.ಫಾರೂಕ್‌ ಸ್ಥಾನಕ್ಕೆ ಮತ್ತೆ ದ.ಕ.ಜಿಲ್ಲೆಯವರನ್ನು ಆಯ್ಕೆ ಮಾಡುವ ಸಾಧ್ಯತೆ ಸ್ಪಷ್ಟವಾಗಿಲ್ಲ.ಕಾಂಗ್ರೆಸ್‌ನಲ್ಲಿ ಹಲವರು ಆಕಾಂಕ್ಷಿ: ಕಾಂಗ್ರೆಸ್‌ನಲ್ಲಿ 7 ಸ್ಥಾನ ಪೈಕಿ ಹರೀಶ್‌ ಕುಮಾರ್‌ ಅವರಿಂದ ತೆರವಾಗುವ ಸ್ಥಾನಕ್ಕೆ ದ.ಕ.ಜಿಲ್ಲೆಯಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿರುವ ಐವನ್‌ ಡಿಸೋಜಾ ತೀವ್ರ ಪ್ರಯತ್ನದಲ್ಲಿ ತೊಡಗಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಆಪ್ತರಾಗಿರುವ ಮಿಥುನ್‌ ರೈ, ಅಲ್ಲದೆ, ಗೌಡ ಅಥವಾ ಹಿಂದುಳಿದ ವರ್ಗವೇ ಮೊದಲಾದ ಬೇರೆ ಸಮುದಾಯಕ್ಕೆ ಅವಕಾಶ ನೀಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಈ ನಡುವೆ ಬಿಲ್ಲವ ಪ್ರಾತಿನಿಧ್ಯ ಸಲುವಾಗಿ ಹರೀಶ್‌ ಕುಮಾರ್‌ ಅವರನ್ನೇ ಮತ್ತೆ ಮುಂದುವರಿಸಿದರೂ ಅಚ್ಚರಿ ಇಲ್ಲ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು.ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುವುದೇ?

ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಪರಿಷತ್‌ ಚುನಾವಣೆಯಲ್ಲೂ ಮುಂದುವರಿಯುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪದವೀಧರ ಕ್ಷೇತ್ರಗಳ ಪೈಕಿ ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ ಪ್ರತಿನಿಧಿಸುತ್ತಿದೆ. ಈ ಬಾರಿ ಕೂಡ ಭೋಜೇ ಗೌಡ ಮತ್ತೊಮ್ಮೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಮೈತ್ರಿ ವಿಚಾರ ಮೇ 7ರ ಬಳಿಕ ನಡೆಯುವ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಅಭ್ಯರ್ಥಿ ಘೋಷಣೆ ಮೊದಲೇ ಜೆಡಿಎಸ್‌ನ ಭೋಜೇ ಗೌಡ ಹಾಗೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಒಂದು ಸುತ್ತಿನ ಪ್ರಚಾರ ಪೂರೈಸಿದ್ದಾರೆ. ಬಿಜೆಪಿಯಿಂದ ಮಂಗಳೂರು ವಿವಿ ಸಿಂಡಿಕೇಟ್‌ ಮಾಜಿ ಸದಸ್ಯರಾದ ಹರೀಶ್‌ ಆಚಾರ್ಯ, ರಮೇಶ್‌ ಶೆಟ್ಟಿ, ಎರಡು ಬಾರಿ ಪ್ರತಿನಿಧಿಸಿದ್ದ ಕ್ಯಾ.ಗಣೇಶ್ ಕಾರ್ಣಿಕ್‌, ಮಾಜಿ ಶಾಸಕ ರಘುಪತಿ ಭಟ್‌, ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಕಮ್ಮರುಡಪ್ಪ ಹೆಸರು ಕೇಳಿಬರುತ್ತಿದೆ. ಅದರಲ್ಲೂ ಹರೀಶ್‌ ಆಚಾರ್ಯ ಒಂದು ಸುತ್ತಿನ ಪ್ರಚಾರ ಪೂರೈಸಿದ್ದಾರೆ. ಕಾಂಗ್ರೆಸ್‌ ಈಗಾಗಲೇ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್‌ರನ್ನು ಘೋಷಣೆ ಮಾಡಿದ್ದು, ನೈಋತ್ಯ ಶಿಕ್ಷಕ ಕ್ಷೇತ್ರಕ್ಕೆ ಕೊಡಗಿನ ಡಾ.ಮಂಜುನಾಥ್‌ ಅವರ ಘೋಷಣೆ ಮಾತ್ರ ಬಾಕಿ ಉಳಿದಿದೆ.