ಸಾರಾಂಶ
ತಾಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ 11 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಜೆಡಿಎಸ್ ನ 11 ಮಂದಿ ಅಭೂತಪೂರ್ವ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ 11 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಜೆಡಿಎಸ್ ನ 11 ಮಂದಿ ಅಭೂತಪೂರ್ವ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.ಶಾಸಕರ ಹುಟ್ಟೂರು ಹರಳಹಳ್ಳಿಯಲ್ಲಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬೈರಾಪುರ ಹರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 10 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆ ನಂತರ ಮತ ಎಣಿಕೆ ಪ್ರಕ್ರಿಯೆಯಲ್ಲಿ ಶಾಸಕರ ಸಹೋದರ ಎಚ್.ಟಿ.ಲೋಕೇಶ್, ಪ್ರೇಂಕುಮಾರ್, ಗುರುಪ್ರಸಾದ್, ಈರೇಗೌಡ, ತಿಮ್ಮಯ್ಯ, ಮಂಜುಳಾ, ಭಾಗ್ಯಮ್ಮ, ರಮೇಶ್ ಎಂ.ಕೆ.ಚಂದ್ರಶೇಖರ್, ದೇವಮ್ಮ ಬಹುಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಅಭಿನಂದಿಸಿದ ಶಾಸಕ ಎಚ್.ಟಿ.ಮಂಜು ಮಾತನಾಡಿ, ನನ್ನ ರಾಜಕಾರಣದ ಮೂಲ ಬೇರು ಸಹಕಾರ ಸಂಘಗಳು. ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ಪ್ರತಿಫಲವಾಗಿ ಸಂಘದ ವ್ಯಾಪ್ತಿಗೆ ಬರುವ ಗ್ರಾಮಗಳ ಮುಖಂಡರ ಮತ್ತು ಜೆಡಿಎಸ್ ಕಾರ್ಯಕರ್ತರ ಸಹಕಾರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಅಭೂತಪೂರ್ವ ಮತ ನೀಡಿ ಗೆಲ್ಲಿಸುವ ಮೂಲಕ ನನಗೆ ಗೌರವ ಹೆಚ್ಚಿಸಿದ್ದೀರಿ ಎಂದರು.ನಿಮ್ಮ ನಿರೀಕ್ಷೆಗಳು ಹುಸಿಯಾಗದಂತೆ ಸಂಘದ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ ಋಣಿಯಾಗಿರುತ್ತೇನೆ. ಸಂಘದ ಅಭಿವೃದ್ಧಿಗೆ ಯಾರೂ ಕೂಡ ರಾಜಕೀಯ ಬೆರೆಸಬಾರದು. ಸಹಕಾರ ತತ್ವವನ್ನು ಮೈಗೂಡಿಸಿಕೊಂಡು ಸಂಘ ರೈತರ ಅಭಿವೃದ್ಧಿಗೆ ಶ್ರಮವಹಿಸಬೇಕು ಎಂದು ತಿಳಿಸಿದರು.
ಎದುರಾಳಿ ಸೋತ ಅಭ್ಯರ್ಥಿಗಳು ನಮ್ಮವರೇ. ರಾಜಕೀಯಕ್ಕೆ ಒತ್ತಡಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸಿದ್ದರು. ಹಾಗಾಗಿ ಸಂಭ್ರಮಾಚರಣೆ ಹೆಸರಿನಲ್ಲಿ ಸೋತವರನ್ನು ಬೇಸರಗೊಳಿಸದೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಷಿಗಳು ಅಭಿನಂದಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.