ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಸಾಧನೆ ತೋರಿದ 11ರ ಪೋರ

| Published : Aug 13 2025, 12:30 AM IST

ಸಾರಾಂಶ

5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 11 ವರ್ಷದ ಬಾಲಕನೋರ್ವ ಅಂತಾರಾಷ್ಟ್ರೀಯ ಮೆಥಮೆಟಿಕ್ಸ್‌ ಆ್ಯಂಡ್‌ ಅರ್ಥಮ್ಯಾಟಿಕ್ಸ್‌ ಪಿ-3 (ಅಬಾಕಸ್‌) ಸ್ಪರ್ಧೆಯಲ್ಲಿ ಭಾಗಿಯಾಗಿ ನಾಲ್ಕನೇ ಸ್ಥಾನ ಪಡೆದು ಸಾಧನೆ ತೋರಿದ್ದಾನೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದಕ್ಕೆ ಈ ಪೋರನೇ ಉತ್ತಮ ಉದಾಹರಣೆ. 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 11 ವರ್ಷದ ಬಾಲಕನೋರ್ವ ಅಂತಾರಾಷ್ಟ್ರೀಯ ಮೆಥಮೆಟಿಕ್ಸ್‌ ಆ್ಯಂಡ್‌ ಅರ್ಥಮ್ಯಾಟಿಕ್ಸ್‌ ಪಿ-3 (ಅಬಾಕಸ್‌) ಸ್ಪರ್ಧೆಯಲ್ಲಿ ಭಾಗಿಯಾಗಿ ನಾಲ್ಕನೇ ಸ್ಥಾನ ಪಡೆದು ಸಾಧನೆ ತೋರಿದ್ದಾನೆ.

ಇಲ್ಲಿನ ನೇಕಾರ ನಗರದಲ್ಲಿ ವಾಸಿಸುತ್ತಿರುವ ಜೀವಂಧರ್ ಕಾಶಿನ್‌ ಹಾಗೂ ಭಾಗ್ಯಶ್ರೀ ಕಾಶಿನ್‌ ಅವರ ಪುತ್ರನಾಗಿರುವ ''''ಷಡ್ಜ'''' ರಾಜನಗರದಲ್ಲಿರುವ ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ ನಂ. 1ರಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮೊದಲಿನಿಂದಲೂ ಆಬಾಕಸ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಪುತ್ರನ ಆಸಕ್ತಿಗೆ ಅನುಗುಣವಾಗಿ ಜೀವಂಧರ್‌ ಅವರು ನಗರದಲ್ಲಿರುವ Edu smart ಸಂಸ್ಥೆಗೆ ಸೇರಿಸುತ್ತಾರೆ.

ಪೋರನ ಸಾಧನೆ: Edu smart ಸಂಸ್ಥೆಯಲ್ಲಿ ಕಳೆದ 2024ರ ಅಕ್ಟೋಬರ್‌ ತಿಂಗಳಲ್ಲಿ ನಡೆದ ಅಬಾಕಸ್‌ ಸ್ಪರ್ಧೆಯಲ್ಲಿ ಷಡ್ಜ ಪ್ರಥಮ ಸ್ಥಾನ ಪಡೆಯುತ್ತಾನೆ. ಬಳಿಕ 2025ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ನಂತರ ಫೆಬ್ರುವರಿಯಲ್ಲಿ ಮುಂಬೈನ Edu smart ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನದೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾನೆ.

4ನೇ ಸ್ಥಾನ: ಈಚೆಗೆ ಮಲೇಷಿಯಾದ ಜೋಹರ್‌ ಬಹರುದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಸಾಧನೆ ತೋರಿದ್ದಾನೆ. ಈ ಬಾಲಕನಿಗೆ Edu smart ಹುಬ್ಬಳ್ಳಿ ಶಾಖಾ ಕಚೇರಿಯ ಮುಖ್ಯಸ್ಥೆ ಮತ್ತು ಶಿಕ್ಷಕಿ ಪ್ರಭಾ ನಾಯಕ್ ತರಬೇತಿ ನೀಡಿದ್ದಾರೆ.

ಷಡ್ಜ ಅವರ ತಂದೆ ಜೀವಂದರ್‌ ಕಾಶಿನ್‌ ಅವರು ಹುಬ್ಬಳ್ಳಿಯ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕ ಮತ್ತು ಪಿಎಲ್ಐ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದರೆ ಇವರ ತಾಯಿ ಭಾಗ್ಯಶ್ರೀ ಕಾಶಿನ್ ಅವರು ಹುಬ್ಬಳ್ಳಿಯ ತಾಜ್‌ ನಗರದಲ್ಲಿರುವ ಚೇತನ್ ಕಾಲೇಜ್ ಆಫ್ ಕಾಮರ್ಸ್ ಬಿಬಿಎ ಮತ್ತು ಬಿಸಿಎಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲಕನ ಸಾಧನೆಗೆ ಪಾಲಕರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಚಿಕ್ಕವನಾಗಿದ್ದಾಗಿನಿಂದ ಷಡ್ಜ ಅಬಾಕಸ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದನು. ಅವನ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡಲಾಗಿದೆ. ಮಗನ ಈ ಸಾಧನೆ ಕಂಡು ತುಂಬಾ ಸಂತಸವಾಗುತ್ತಿದೆ. ಇನ್ನೂ ಸಾಧನೆ ಮಾಡಲು ಬೇಕಾದ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ನಾವು ಸಿದ್ಧ ಎಂದು ಷಡ್ಜನ ತಂದೆ ಜೀವಂದರ್ ಕಾಶಿನ್ ಹರ್ಷ ವ್ಯಕ್ತಪಡಿಸಿದರು.

ಮಕ್ಕಳಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಸಾಧನೆ ಮಾಡಲು ಸಹಕಾರಿಯಾಗಲಿದೆ. 11 ವರ್ಷದ ಷಡ್ಜ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾಗಿ 4ನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಶಡ್ಜಗೆ ತರಬೇತಿ ನೀಡಿದ ಶಿಕ್ಷಕಿ ಪ್ರಭಾ ನಾಯಕ್ ಹೇಳಿದರು.