1100 ಬೈಕ್‌ ನೋಂದಣಿ ಸಂಖ್ಯೆಪರಿಶೀಲಿಸಿ ಮನೆಗಳ್ಳನ ಬಂಧನ

| Published : Aug 10 2024, 01:35 AM IST

ಸಾರಾಂಶ

ಎರಡು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ಬಾಣಸವಾಡಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ₹11.60 ಲಕ್ಷ ಮೌಲ್ಯದ 135 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ಬಾಣಸವಾಡಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ₹11.60 ಲಕ್ಷ ಮೌಲ್ಯದ 135 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಹಗಲು-ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸತೀಶ್‌ ಕುಮಾರ್‌(34) ಬಂಧಿತ. ಆರೋಪಿಯಿಂದ ₹8 ಲಕ್ಷ ಮೌಲ್ಯದ 90 ಗ್ರಾಂ ಚಿನ್ನಾಭರಣ, ಲ್ಯಾಪ್‌ಟಾಪ್‌ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

ಕಳೆದ ಏಪ್ರಿಲ್‌ 16ರಂದು ಎಚ್‌ಆರ್‌ಬಿಆರ್‌ ಲೇಔಟ್‌ 1ನೇ ಬ್ಲಾಕ್‌ ನಿವಾಸಿ ಪ್ರಮೋದ್‌ ಭಟ್‌ ಎಂಬುವವರ ಮನೆಯಲ್ಲಿ ದುಷ್ಕರ್ಮಿಗಳು ಹಾಡಹಗಲೇ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್‌ ಅರುಣ್‌ ಸಾಳುಂಕೆ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

1,100 ಬೈಕ್‌ ನೋಂದಣಿ ಸಂಖ್ಯೆ ಪರಿಶೀಲನೆ: ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ವೇಳೆ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡಿರುವುದು ಕಂಡು ಬಂದಿದೆ. ಆದರೆ, ಆ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಅಸ್ಪಷ್ಟವಾಗಿದ್ದರಿಂದ ಆರ್‌ಟಿಒ ಅಧಿಕಾರಿಗಳ ನೆರವು ಪಡೆದು ಸುಮಾರು 1,100 ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆಗಳನ್ನು ಪೊಲೀಸರು ಪರೀಶೀಲಿಸಿದ್ದಾರೆ.

ಬಳಿಕ ಆರೋಪಿಯ ಸುಳಿವು ಪತ್ತೆಹಚ್ಚಿ ತಮಿಳುನಾಡಿನಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಈತನ ವಿರುದ್ಧ ಈ ಹಿಂದೆ ಅಮೃತಹಳ್ಳಿ, ಚಿಕ್ಕಜಾಲ, ಯಲಹಂಕ ಹಾಗೂ ಚೆನ್ನೈನಲ್ಲಿ ಮನೆಗಳವು ಪ್ರಕರಣಗಳು ದಾಖಲಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.ಬಾಗಿಲು ತೆರೆದಿದ್ದ ಮನೆಯಲ್ಲಿ ಕಳವು ಮಾಡಿದ್ದವನ ಬಂಧನ

ಮತ್ತೊಂದು ಪ್ರಕರಣದಲ್ಲಿ ರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಾನಕಿರಾಂ ಲೇಔಟ್‌ ನಿವಾಸಿ ಇಮ್ರಾನ್‌(27) ಬಂಧಿತ. ಆರೋಪಿಯಿಂದ ₹2.70 ಲಕ್ಷ ಮೌಲ್ಯದ 45 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ. ನ್ಯೂ ಲಿಂಗರಾಜಪುರ ನಿವಾಸಿ ಗಿರೀಶ್‌ ಎಂಬುವವರು ಆ.1ರಂದು ರಾತ್ರಿ ಮನೆಯ ಬಾಗಿಲು ಲಾಕ್‌ ಮಾಡದೆ ನಿದ್ದೆಗೆ ಜಾರಿದ್ದಾರೆ. ಮಾರನೇ ದಿನ ಬೆಳಗ್ಗೆ ಎದ್ದು ನೋಡಿದಾಗ ರೂಮಿನ ವಾರ್ಡ್‌ರೂಬ್‌ನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿರುವುದು ಕಂಡು ಬಂದಿದೆ.

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ದೂರು ದಾಖಲಾದ ಎರಡು ತಾಸಿನೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಇಮ್ರಾನ್‌ ವೃತ್ತಿಪರ ಕಳ್ಳನಾಗಿದ್ದು, ಈತನ ವಿರುದ್ಧ ಈ ಹಿಂದೆ ಪುಲಕೇಶಿನಗರದಲ್ಲಿ ಮನೆಗಳವು ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.