11 ಬಿ ಖಾತೆ ನೋಂದಣಿಗೆ ತಡೆ: ಜನತೆ ಪರದಾಟ

| Published : Dec 31 2023, 01:30 AM IST / Updated: Jan 08 2024, 03:18 PM IST

ಸಾರಾಂಶ

ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ನಕ್ಷೆ ಅನುಮೋದನೆ ಇಲ್ಲದೇ ತಾಲೂಕಿನಾದ್ಯಂತ ಗ್ರಾಪಂಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತೆರೆದಿರುವ ೧೧ ಬಿ ಖಾತೆಗಳ ನೋಂದಣಿ ತಡೆಹಿಡಿಯುವಂತೆ ಉಪ ನೋಂದಣಾಧಿಕಾರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪತ್ರ ಬರೆದಿರುವುದು ಸಾರ್ವಜನಿಕರು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ನಕ್ಷೆ ಅನುಮೋದನೆ ಇಲ್ಲದೇ ತಾಲೂಕಿನಾದ್ಯಂತ ಗ್ರಾಪಂಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತೆರೆದಿರುವ ೧೧ ಬಿ ಖಾತೆಗಳ ನೋಂದಣಿ ತಡೆಹಿಡಿಯುವಂತೆ ಉಪ ನೋಂದಣಾಧಿಕಾರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪತ್ರ ಬರೆದಿರುವುದರಿಂದ ನೋಂದಣಿಗಾಗಿ ಬರುವ ಸಾರ್ವಜನಿಕರು ಪರದಾಡುವಂತಾಗಿದೆ.

ಕೆಜಿಎಫ್ ತಾಲೂಕಿನಾದ್ಯಂತ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ೧೮ ಸ್ಥಳೀಯ ಗ್ರಾಪಂಗಳಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ೧೯೬೧ರ ಕಲಂ ೧೭ ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ ೧೯೮೭ರ ಕಲಂ ೩೨ನ್ನು ಉಲ್ಲಂಘಿಸಿ ಗ್ರಾಪಂಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮನಬಂದಂತೆ ೧೧ ಬಿ ಖಾತೆಗಳನ್ನು ತೆರೆದಿದ್ದಾರೆ ಎನ್ನಲಾಗಿದೆ.

ಮಾರ್ಗಸೂಚಿ ಉಲ್ಲಂಘನೆ ಆರೋಪ

ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೊಳಪಡುವ ಕೆಜಿಎಫ್ ತಾಲೂಕಿನ ಪಾರಾಂಡಹಳ್ಳಿ, ಕಮ್ಮಸಂದ್ರ, ಹುಲ್ಕೂರು, ಮಾರಿಕುಪ್ಪಂ ಗ್ರಾಪಂಗಳಲ್ಲಿ ಮತ್ತು ಬಂಗಾರಪೇಟೆ ತಾಲೂಕಿನ ಹುಲಿಬೆಲೆ, ಚಿನ್ನಕೋಟೆ, ಡಿ.ಕೆ.ಹಳ್ಳಿ, ಬೇತಮಂಗಲ, ಘಟ್ಟಕಾಮಧೇನಹಳ್ಳಿ, ಕಾರಹಳ್ಳಿ, ಕೆಸರನಹಳ್ಳಿ, ಘಟ್ಟಮಾದಮಂಗಲ, ದೊಡ್ಡವಲಗಮಾದಿ, ಕೇತಗಾನಹಳ್ಳಿ, ಚಿಕ್ಕಅಂಕಂಡಹಳ್ಳಿ, ಐನೋರಹೊಸಹಳ್ಳಿ, ಯಳೇಸಂದ್ರ ಮತ್ತು ಟಿ.ಗೊಲ್ಲಹಳ್ಳಿ ಗ್ರಾಪಂಗಳಲ್ಲಿ ಸರ್ಕಾರದ ಸುತ್ತೋಲೆ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅಕ್ರಮ ಬಡಾವಣೆಗಳಿಗೆ ೧೧ಬಿ ಇ-ಸ್ವತ್ತು ಖಾತೆ ತೆರೆಯುತ್ತಿರುವುದು ಆನ್‌ಲೈನ್ ತಂತ್ರಾಂಶದಲ್ಲಿ ಪತ್ತೆಯಾಗಿದೆ.

ಅಗತ್ಯವಾದ ದಾಖಲೆಗಳನ್ನು ಪಡೆಯದೇ ೧೧ಬಿ ಖಾತೆಗಳನ್ನು ತೆರೆದಿರುವುದರಿಂದ ಪ್ರಾಧಿಕಾರಕ್ಕೆ ಆದಾಯ ನಷ್ಟ ಉಂಟಾಗಿದೆ. ಅಲ್ಲದೇ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರ್ಕಾರದಿಂದ ಅನುಮೋದನೆಯಾಗಿರುವ ಮಹಾ ಯೋಜನೆ-೨೦೩೧ (ಪರಿಷ್ಕೃತ-೧) ರಂತೆ ರಸ್ತೆ ಪರಿಚಲನೆ ಮತ್ತು ವ್ಯಾಪಕಾಭಿವೃದ್ಧಿ ಯೋಜನೆಗೆ ಅಡ್ಡಿಯಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಈ ರೀತಿ ತೆರೆಯಲಾಗಿರುವ ೧೧ಬಿ ಆಸ್ತಿಗಳನ್ನು ಕ್ರಯಪತ್ರದ ಮೂಲಕ ಮಾರಾಟವಾಗಲೀ, ಸರ್ಕಾರಿ ಬ್ಯಾಂಕುಗಳಿಗೆ, ಖಾಸಗೀ ಬ್ಯಾಂಕ್‌ಗಳಿಗೆ, ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಅಡಮಾನ ಮಾಡಲು ಅಥವಾ ಕ್ರಯದ ಕರಾರು ಪತ್ರಗಳನ್ನು ಮಾಡಿಕೊಳ್ಳಲು ಕೆಜಿಎಫ್ ಮತ್ತು ಬಂಗಾರಪೇಟೆ ಉಪ ನೋಂದಣಾಧಿಕಾರಿಗಳ ಕಚೇರಿಗಳಿಗೆ ಹೋದಾಗ ಅಲ್ಲಿ ೧೧ಬಿ ಆಸ್ತಿಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕ್ರಯ, ವಿಕ್ರಯಗಳನ್ನು ಮಾಡದೇ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಕೋಟ್‌...... ಕಳೆದ ನವೆಂಬರ್ ೨೬ ರಿಂದೀಚೆಗೆ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೊಳಪಡುವ ೧೮ ಗ್ರಾಪಂಗಳಲ್ಲಿ ಕಡ್ಡಾಯವಾಗಿ ೧೧ ಬಿ ಖಾತೆಗಳನ್ನು ತೆರೆಯದಂತೆ ನೋಟಿಸ್‌ ನೀಡಲಾಗಿದೆ. ಒಂದು ವೇಳೆ ಹಾಗೇನಾದರೂ ೧೧ಬಿ ಖಾತೆಗಳನ್ನು ತೆರೆದಿರುವುದು ಕಂಡುಬಂದಲ್ಲಿ ಮುಲಾಜಿಲ್ಲದೇ ಸಂಬಂಧಪಟ್ಟ ಪಿಡಿಒ ಮತ್ತು ಬಡಾವಣೆ ಮಾಲೀಕರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.- ಧರ್ಮೇಂದ್ರ, ಆಯುಕ್ತ, ನಗರಾಭಿವೃದ್ಧಿ ಪ್ರಾಧಿಕಾರ, ಕೆಜಿಎಫ್